ADVERTISEMENT

ಸಿನಿ ಸಮ್ಮಾನ್‌ನಲ್ಲಿ ಸಂಭ್ರಮದ ಹೊಳೆ; ಪುನೀತ್‌ಗೆ ನುಡಿನಮನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 20:13 IST
Last Updated 3 ಜೂನ್ 2023, 20:13 IST
ಬೆಂಗಳೂರಿನಲ್ಲಿ ಶನಿವಾರ ನಡೆದ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಕಾರ್ಯಕ್ರಮದಲ್ಲಿ  ನೃತ್ಯ ಕಾರ್ಯಕ್ರಮ.
ಬೆಂಗಳೂರಿನಲ್ಲಿ ಶನಿವಾರ ನಡೆದ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಕಾರ್ಯಕ್ರಮದಲ್ಲಿ ನೃತ್ಯ ಕಾರ್ಯಕ್ರಮ.   ಪ್ರಜಾವಾಣಿ ಚಿತ್ರ/

ಬೆಂಗಳೂರು: ಜಗಮಗಿಸುವ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ವೇದಿಕೆ ಮೇಲೆ ನಿಂತಿದ್ದ ಗಣ್ಯರು ‘ಪ್ರಜಾವಾಣಿ’ಯ ಚೊಚ್ಚಲ ಸಿನಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಘೋಷಿಸುತ್ತಿದ್ದಂತೆ ಸಿನಿ ಪ್ರೇಮಿಗಳ ಚಪ್ಪಾಳೆ ಮುಗಿಲುಮುಟ್ಟಿತ್ತು.

ಶನಿವಾರ ಸಂಜೆ 6.50ಕ್ಕೆ ಸಮಾರಂಭ ಆರಂಭವಾಯಿತು. ನಟ ಅರವಿಂದ್ ರಮೇಶ್ ಅವರು ಪ್ರಶಸ್ತಿ ಪ್ರದಾನ ಮಾಡುವ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಸಹ ನಿರೂಪಕಿ ಅನುಶ್ರೀ ಸಾಥ್ ನೀಡಿದರು.‌

ಸಾಹಿತಿ ಚಂದ್ರಶೇಖರ ಕಂಬಾರ, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಟಿ.ಎನ್. ಸೀತಾರಾಮ್, ನಟಿ ಪೂಜಾ ಗಾಂಧಿ, ಗಾಯಕಿ ಎಂ.ಡಿ. ಪಲ್ಲವಿ, ಹಿರಿಯ ನಟಿ ಬಿ. ಜಯಶ್ರೀ ಮೊದಲಾದರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ADVERTISEMENT

ಹಲವು ನಟ, ನಟಿಯರು, ತಂತ್ರಜ್ಞರು, ಕಲಾವಿದರು ಸೇರಿದಂತೆ ಕನ್ನಡ ಚಿತ್ರರಂಗದ ನೂರಾರು ನಟ–ನಟಿಯರು ಬಣ್ಣಬಣ್ಣದ ಉಡುಪುಗಳನ್ನು ಧರಿಸಿ ಕಂಗೊಳಿಸಿದರು.

ಭಾವನಾ ರಾವ್ ಅವರ ತಂಡದ ಗೋವಿಂದ ಹಾಡಿನ ಮೂಲಕ ಸಿನಿ ಸಂಭ್ರಮಕ್ಕೆ ಚಾಲನೆ ಸಿಕ್ಕಿತು. ಪ್ರಶಸ್ತಿ ಪ್ರದಾನ ಮಾಡಲು ಬಂದ ಗಣ್ಯರು, ಪ್ರಶಸ್ತಿ ಪುರಸ್ಕೃತರು ತಮ್ಮ ಅನಿಸಿಕೆ, ಸಾಧನೆಯ ಹಾದಿ ನೆನೆದರು. ಸಾಧನೆಗೆ ಕಾರಣರಾದವರಿಗೆ ಕೃತಜ್ಞತೆ ಸಲ್ಲಿಸಿದರು.

ಮಧ್ಯೆ ತಮ್ಮ ಸಿನಿಮಾಗಳ ಹಾಡು, ಡಯಲಾಗ್ ಮೆಲುಕು ಹಾಕಿದರು. ಕೆ. ಕಲ್ಯಾಣ್ ಅವರಿಗೆ ಅತ್ಯುತ್ತಮ ಗೀತಾ ರಚನೆಕಾರ ಪ್ರಶಸ್ತಿ ಪ್ರದಾನ ಮಾಡಿದ ಗಾಯಕಿ ಎಂ.ಡಿ. ಪಲ್ಲವಿ ಅವರು ‘ಹೇಳಯ್ಯ ಕೋಟಿ ಲಿಂಗವೇ...’ ಹಾಡಿದರು. ಕಲ್ಯಾಣ್ ಅವರು ನಮ್ಮೂರ ಮಂದಾರ ಹೂವೆ ಚಿತ್ರದ ತುಂತುರು ಹಾಡಿನ ರಾಗ ಮೆಲುಕು ಹಾಕಿದರು.

ನಟ ಅನಂತ್ ನಾಗ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ‌ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪ್ರಜಾವಾಣಿ’ ಪತ್ರಿಕೆಯ ವಿಶ್ವಾಸಾರ್ಹತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಪ್ರಜಾವಾಣಿ@75’ಕ್ಕೆ ಕಾಲಿಟ್ಟಿದೆ. ರಾಜ್ಯದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ‌. ಟಿವಿ ಚಾನಲ್‌ಗಳಲ್ಲಿ ನೈಜ ಸುದ್ದಿ ಅಪರೂಪ. ಅದಕ್ಕಾಗಿ ಪತ್ರಿಕೆಯ ಮೇಲೆ ಜನರಿಗೆ ನಂಬಿಕೆ ಹೆಚ್ಚು’ ಎಂದರು.

ತಾವು ಹಾಗೂ ಅನಂತ್ ನಾಗ್ ಅವರು ಜೆ.ಎಚ್. ಪಟೇಲ್ ಸಂಪುಟದಲ್ಲಿ ಸಚಿವರಾದ ಸಮಯವನ್ನು ಮುಖ್ಯಮಂತ್ರಿ ಮೆಲುಕು ಹಾಕಿದರು.

‘ಈಗ ಸಿನಿಮಾ ವೀಕ್ಷಿಸಲು ಸಮಯ ಸಿಗುತ್ತಿಲ್ಲ. ಸಮಯ ಸಿಕ್ಕಾಗ ಟಿವಿಯಲ್ಲಿ ನೋಡುವೆ. ಅನಂತ್ ಅವರು ಆಡಂಬರವಿಲ್ಲದ ಸಹಜ ನಟ. ನನಗಿಂತ ಒಂದು ವರ್ಷವಷ್ಟೇ ಚಿಕ್ಕವರು’ ಎಂದರು.

ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್. ತಿಲಕ್ ಕುಮಾರ್, ನಿರ್ದೇಶಕರಾದ ಕೆ.ಎನ್. ಶಾಂತಕುಮಾರ್ ಇದ್ದರು.

LIVE: ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ, 'ಕಾಂತಾರ'ಕ್ಕೆ ಅತ್ಯುತ್ತಮ‌ ಚಿತ್ರ ಪ್ರಶಸ್ತಿ

ಪುನೀತ್‌ಗೆ ನುಡಿನಮನ

ಕಾರ್ಯಕ್ರಮದಲ್ಲಿ ಪುನೀತ್ ಅವರಿಗೆ ದೃಶ್ಯ ಹಾಗೂ ನುಡಿನಮನ ಸಲ್ಲಿಸಲಾಯಿತು. ಆಟೊ ಚಾಲಕರೊಬ್ಬರು ಪುನೀತ್ ಹೆಸರಲ್ಲಿ ವೃದ್ಧಾಶ್ರಮವನ್ನು ಕಟ್ಟಿ 17 ಜನರಿಗೆ ಆಶ್ರಯ ನೀಡಿದ್ದಾರೆ‌. ಕೂಲಿಕಾರರ ಕುಟುಂಬವೊಂದು ನಿತ್ಯ ಪುನೀತ್ ಪ್ರತಿಮೆ ಶುಚಿಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ. ಈ ದೃಶ್ಯಗಳು ಪುನೀತ್‌ ಗಳಿಸಿದ ಅಭಿಮಾನಿಗಳ ಅಭಿಮಾನದ ಸಂಕೇತಕ್ಕೆ ಸಾಕ್ಷಿಯಾದವು. ಚನ್ನಗಿರಿಯ ಕುಮಾರ್ ಅವರು ತಮ್ಮ ಮಗಳ ಕಿಡ್ನಿ ಚಿಕಿತ್ಸೆಗೆ ಪುನೀತ್ ನೆರವಾಗಿದ್ದನ್ನು ನೆನೆದು‌ ಕಣ್ಣೀರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.