ADVERTISEMENT

‘ಸಿನಿ ಸಮ್ಮಾನ’ದ ನೆವದಲ್ಲಿ ರಾಜ್ ಮೊದಲ ಚಿತ್ರಾವಕಾಶದ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2023, 10:54 IST
Last Updated 26 ಏಪ್ರಿಲ್ 2023, 10:54 IST
ರಾಜ್‌ಕುಮಾರ್
ರಾಜ್‌ಕುಮಾರ್   

ಮದ್ರಾಸ್‌ನ ಕರ್ನಾಟಕ ಫಿಲ್ಮ್ಸ್‌ನಿಂದ ಒಮ್ಮೆ ರಾಜ್‌ಕುಮಾರ್‌ ಅವರಿಗೆ ಪತ್ರ ಬಂದಿತ್ತು. ಮೇಕಪ್ ಟೆಸ್ಟ್‌ ಎಲ್ಲ ಆದ ಮೇಲೆ ಆಯ್ಕೆಯಾದರೆ, ‘ಬೇಡರ ಕಣ್ಣಪ್ಪ’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗಲಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು. ಮದ್ರಾಸ್‌ಗೆ ಹೋಗಿ, ಮೇಕಪ್‌ ಟೆಸ್ಟ್‌ ಕೊಟ್ಟು ಬಂದರು.

ನಿರ್ದೇಶಕ ಎಲ್‌.ಎನ್. ಸಿಂಹ ಅವರೇನೊ ಮೆಚ್ಚಿಕೊಂಡಿದ್ದರು. ಆಯ್ಕೆಯಾದರೆ ಪತ್ರ ಹಾಕುವುದಾಗಿ ಹೇಳಿದ್ದರು. ಅದಕ್ಕಾಗಿ ರಾಜ್‌ಕುಮಾರ್‌ ನಿತ್ಯವೂ ಅಂಚೆಯವನನ್ನು ಎದಿರುನೋಡತೊಡಗಿದ್ದರು. ‘ಪ್ರಜಾವಾಣಿ’ ಪ್ರಕಟಿಸಿದ್ದ ಅವರ ಆತ್ಮಕಥೆಯಲ್ಲಿ ಆ ಸಂದರ್ಭವು ಸಣ್ಣಪುಟ್ಟ ವಿವರಗಳೊಂದಿಗೆ ದಾಖಲಾಗಿತ್ತು. ಅದರ ಪುಟ್ಟ ಭಾಗ ಹೀಗಿದೆ:

‘ಒಂದು ದಿನ ಎಣ್ಣೆನೀರು ಹಾಕಿಕೊಳ್ಳುತ್ತಿದ್ದೆ. ತಲೆಯ ಮೇಲೆ ಬಿಸಿನೀರು ಬೀಳುತ್ತಿತ್ತು. ಮನಸ್ಸು ದುಃಖದಿಂದ ತುಂಬಿಹೋಗಿತ್ತು. ‘ಮದರಾಸಿನಿಂದ ಸಮಾಚಾರವಿಲ್ಲ. ಜತೆಗೆ ನಾನು ಚಿತ್ರರಂಗಕ್ಕೆ ಹೋಗುವೆನೆಂದು ಇಲ್ಲೆಲ್ಲ ಪ್ರಚಾರವಾಗಿ ಹೋಗಿದೆ. ಮದುವೆಗೆ ಸಾಲ ಬೇರೆ ಆಗಿ... ಸಂಸಾರ ಬೆಳೆಯುತ್ತಿದೆ; ಏನು ಮಾಡಲಿ ಒಂದೂ ತೋಚುವುದಿಲ್ಲ’ ದುಃಖ ಕಟ್ಟೆಯೊಡೆಯಿತು. ತಲೆಯ ಮೇಲೆ ಬೀಳುತ್ತಿದ್ದ ನೀರಿನ ಜತೆಯೇ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು’. ಆ ಸಮಯದಲ್ಲಿ ಹೊರಗೆ ಅಂಚೆಯಣ್ಣನ ಕರೆ:

ADVERTISEMENT

‘ರಿಜಿಸ್ಟರ್ಡ್ ಪೋಸ್ಟ್‌’

ಕಾಂಟ್ರಾಕ್ಟ್‌ ಸಮೇತ ಅಂಚೆಯ ಮೂಲಕ ಹಾಗೆ ರಾಜ್‌ಕುಮಾರ್‌ ಅವರಿಗೆ ಸಿನಿಮಾ ಅವಕಾಶ ಹುಡುಕಿಕೊಂಡು ಬಂದಿತ್ತು.

‘ಪ್ರಜಾವಾಣಿ’ಯು ಸಿನಿಮಾಗೆ ಸಂಬಂಧಿಸಿದ ಇಂತಹ ಆಪ್ತವಾದ ಬರಹಗಳನ್ನು ದಶಕಗಳಿಂದ ನೀಡುತ್ತಾ ಬಂದಿದೆ. ಈಗ ಚಿತ್ರರಂಗದ ಗಟ್ಟಿಕಾಳುಗಳನ್ನು ಹೆಕ್ಕಿ, ಸನ್ಮಾನಿಸುವ ಗಳಿಗೆಗೆ ದಿನಗಣನೆ ಶುರುವಾಗಿದೆ. ‘ಪ್ರಜಾವಾಣಿ ಸಿನಿ ಸಮ್ಮಾನ’ದ ಸ್ವರೂಪ ಹೇಗಿರಲಿದೆ ಎನ್ನುವುದು ಶೀಘ್ರದಲ್ಲೇ ಓದುಗರಿಗೆ ಇದೇ ಪುಟದಲ್ಲಿ ತಿಳಿಯಲಿದೆ.

ಸಿನಿ ಸಮ್ಮಾನದ ಮೊದಲ ಮಾಹಿತಿಗೆ ನೋಡಿ: https://www.prajavani.net/cinesamman

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.