ADVERTISEMENT

‘ಅರ್ಜುನ್ ಗೌಡ’ ಚಿತ್ರದ ಟ್ರೇಲರ್ ಏಪ್ರಿಲ್ 10ಕ್ಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 13:29 IST
Last Updated 31 ಮಾರ್ಚ್ 2021, 13:29 IST
ಪ್ರಜ್ವಲ್‌ ದೇವರಾಜ್‌
ಪ್ರಜ್ವಲ್‌ ದೇವರಾಜ್‌   

ಬೆಂಗಳೂರು: ನಟ ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ಅಭಿನಯಿಸಿರುವ ‘ಅರ್ಜುನ್‌ ಗೌಡ’ ಚಿತ್ರದ ಟ್ರೇಲರ್‌ ಏ.10ಕ್ಕೆ ಬಿಡುಗಡೆಯಾಗಲಿದೆ.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅದ್ಧೂರಿ ಚಿತ್ರಗಳನ್ನು ನಿರ್ಮಿಸಿ ಹೆಸರಾದ ರಾಮು ಫಿಲಂಸ್ ಸಂಸ್ಥೆಯಿಂದ ಈ ಚಿತ್ರವು ನಿರ್ಮಾಣವಾಗಿದ್ದು, ಆ್ಯಕ್ಷನ್ ಕಥಾಹಂದರವನ್ನು ಇದು ಹೊಂದಿದೆ. ಮೈನವಿರೇಳಿಸುವ ಸಾಹಸ ಸನ್ನಿವೇಶಗಳಿರುವ ಈ ಚಿತ್ರ ಟ್ರೇಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಲಿದೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದ್ದು, ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ.

ಇನ್‌ಸ್ಪೆಕ್ಟರ್‌ ವಿಕ್ರಂ ಯಶಸ್ಸಿನ ಬೆನ್ನಲ್ಲೇ ಪ್ರಜ್ವಲ್ ದೇವರಾಜ್‌ ಮತ್ತೊಂದು ಚಿತ್ರದ ಮುಖೇನ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ. ಲಕ್ಕಿ ಶಂಕರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಏಳು ಸಾಹಸ ಸನ್ನಿವೇಶಗಳಿವೆ. ಮಾಸ್ ಮಾದ ಸಾಹಸ ಸಂಯೋಜನೆಯಲ್ಲಿ ಇವು ಮೂಡಿ ಬಂದಿವೆ. ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಅಭಿನಯಿಸಿದ್ದಾರೆ. ಬಾಲಿವುಡ್‌ನ ರಾಹುಲ್ ದೇವ್, ಸ್ಪರ್ಶ ರೇಖ, ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು ಮುಂತಾದವರು ತಾರಾಬಳಗದಲ್ಲಿದ್ದಾರೆ.

ADVERTISEMENT

ಕವಿರಾಜ್, ರಾಘವೇಂದ್ರ ಕಾಮತ್, ಶಂಕರ್ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ , ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ಮೋಹನ್, ಕಂಬಿ‌ರಾಜು ಅವರ ನೃತ್ಯ ನಿರ್ದೇಶನ ಅರ್ಜುನ್ ಗೌಡ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.