ADVERTISEMENT

ಮಾಯಾಬಜಾರ್‌ ಸಿನಿಮಾದಲ್ಲಿ ಅಪ್ಪು ಸ್ಟೆಪ್ಪು

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 9:24 IST
Last Updated 18 ಜನವರಿ 2020, 9:24 IST
ಮಾಯಾಬಜಾರ್‌ ಚಿತ್ರ ತಂಡ
ಮಾಯಾಬಜಾರ್‌ ಚಿತ್ರ ತಂಡ   

ಪಿಆರ್‌ಕೆ ಪ್ರೊಡಕ್ಷನ್‌ನಿರ್ಮಾಣದ ಎರಡನೇಚಿತ್ರ ‘ಮಾಯಾ ಬಜಾರ್‌’ ಪೂರ್ಣಗೊಂಡಿದ್ದು, ಫೆಬ್ರುವರಿಯಲ್ಲಿ ತೆರೆಕಾಣಲು ಸಜ್ಜಾಗಿದೆ. ಚಿತ್ರದ ಮೊದಲ ಲಿರಿಕಲ್ ವಿಡಿಯೊ ಸಾಂಗ್‌ ಬಿಡುಗಡೆಯಾಗಿದೆ.

ಇದರಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ಯೋಗರಾಜ್‌ ಭಟ್‌ ಸಾಹಿತ್ಯ ಬರೆದಿದ್ದು, ಎಸ್‌.ಪಿ.ಬಿ ಹಾಡಿರುವ ‘ನಿಮಗೂ ಗೊತ್ತು, ನಮಗೂ ಗೊತ್ತು ಕಾಲ ಎಂದೋ ಕುಲಗೆಟ್ಟ್ ಹೋಯ್ತು...’ ಹಾಡಿಗೆ ಪುನೀತ್‌ ವಿಭಿನ್ನ ಶೈಲಿಯಲ್ಲಿ ನೃತ್ಯ ಮಾಡಿದ್ದಾರೆ.

‘ವಿಭಿನ್ನ ಕಥೆಯ ಪ್ರಯೋಗಾತ್ಮಕ ಚಿತ್ರ ‘ಮಾಯಾಬಜಾರ್‌’ ಇವತ್ತಿನ ಪೀಳಿಗೆಗೆ ತುಂಬಾ ಹತ್ತಿರವಾಗಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಬೇರೆ ಭಾಷೆಗೆ ರಿಮೇಕ್‌ಗಾಗಿ ಬೇಡಿಕೆ ಬಂದಿದೆ’ ಎಂದು ಪುನೀತ್‌ ರಾಜ್‌ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಕವಲುದಾರಿ’ ಸಿನಿಮಾದಿಂದಪಿಆರ್‌ಕೆ ಪ್ರೊಡಕ್ಷನ್‌ ಶುರುವಾಯಿತು. ಮೊದಲ ಸಿನಿಮಾಒಳ್ಳೆಯ ಯಶಸ್ಸು ತಂದುಕೊಟ್ಟಿತು. ತಮಿಳು, ತೆಲುಗು, ಮಲಯಾಳ, ಹಿಂದಿಗೂ ರಿಮೇಕ್‌ ಆಗುತ್ತಿದೆ. ಹಿಂದಿಯಲ್ಲಿ ಹೇಮಂತ್‌ ರಾವ್‌ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ನಮ್ಮ ಬ್ಯಾನರ್‌ನ ಮೊದಲ ಸಿನಿಮಾ ಇಷ್ಟೊಂದು ಯಶಸ್ಸು ತಂದುಕೊಟ್ಟಿದ್ದರ ಬಗ್ಗೆ ಹೆಮ್ಮೆ ಇದೆ. ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ್ದೂಸಾರ್ಥಕವಾಯಿತು’ ಎಂದು ಮಾತು ವಿಸ್ತರಿಸಿದರು.

‘ನಾನು ಸಹ ಈ ಚಿತ್ರದಲ್ಲಿ ಅತಿಥಿ ಕಲಾವಿದನಾಗಿ ಕಾಣಿಸಿಕೊಂಡಿದ್ದೇನೆ. ಅದು ಎಸ್‌.ಪಿ.ಬಿ ಅವರು ಹಾಡಿರುವ ಹಾಡಿಗೆ ನಾನು ಡಾನ್ಸ್ ಮಾಡಿರುವುದು ನನ್ನ ಪುಣ್ಯ. ರಾಜ್‌ ಬಿ. ಶೆಟ್ಟಿ, ಪ್ರಕಾಶ್‌ ರೈ, ಅಚ್ಯುತಕುಮಾರ್, ಸಾಧುಕೋಕಿಲ, ಸುಧಾರಾಣಿ, ವಸಿಷ್ಠ ಸಿಂಹ, ಚೈತ್ರಾ ಅವರು ಅದ್ಭುತವಾಗಿ ನಟಿಸಿದ್ದಾರೆ.ಈ ಚಿತ್ರದಲ್ಲಿ ಒಳ್ಳೆಯ ಪ್ಯಾಕೇಜ್‌ ಇದೆ’ ಎನ್ನುವ ಮಾತು ಸೇರಿಸಿದರು.

ಕಥೆ, ಚಿತ್ರಕಥೆ, ಸಂಭಾಷಣೆ ಹೊಸೆದು ನಿರ್ದೇಶನ ಮಾಡಿರುವರಾಧಾಕೃಷ್ಣ ರೆಡ್ಡಿ ಅವರಿಗೆ ಇದು ಮೊದಲ ಚಿತ್ರ. ‘ಪ್ರತಿ ಪಾತ್ರವನ್ನು ವಿಭಿನ್ನವಾಗಿ ತೆರೆ ಮೇಲೆ ತಂದಿದ್ದೇವೆ. ಈ ಸಿನಿಮಾ ಹೆಚ್ಚು ನಗಿಸುತ್ತದೆ, ಕಡಿಮೆ ಅಳುವಂತೆ ಮಾಡುತ್ತದೆ’ ಎಂದರು.

‘ಒಂದು ಮೊಟ್ಟೆಯ ಕಥೆ’ ಚಿತ್ರದ ಖ್ಯಾತಿಯರಾಜ್ ಬಿ. ಶೆಟ್ಟಿ ಈ ಚಿತ್ರದ ನಾಯಕ. ‘ನನ್ನ ಸಿನಿಮಾ ಬದುಕಿನಲ್ಲಿ ಈವರೆಗೆ ಕೇಳಿದ ಕಥೆಗಳಲ್ಲಿ ಅತ್ಯುತ್ತಮ ಕಥೆ ‘ಮಾಯಾಬಜಾರ್‌’. ಈ ಚಿತ್ರದಲ್ಲಿ ಎಲ್ಲ ರೀತಿಯ ಪ್ರಯೋಗವಿದ್ದರೂ ಪ್ರೇಕ್ಷಕನಿಗೆ ಇನ್ನು ಹೆಚ್ಚು ಮನರಂಜನೆ ಕೊಡುವ ಉದ್ದೇಶ ಹೊಂದಿದೆ. ಇದರಲ್ಲಿ ಈ ಚಿತ್ರ ಗೆದ್ದಿದೆ’ ಎಂದರು ಶೆಟ್ಟಿ.

ಪಾತ್ರದ ಬಗ್ಗೆಯೂ ವಿವರಿಸಿದ ಅವರು ‘ತುಂಬ ದೊಡ್ಡದಾಗಿ ಬೆಳೆಯಬೇಕೆಂದು ಮಹತ್ವಾಕಾಂಕ್ಷೆ ಹೊಂದಿರುವ ಯುವಕನ ಪಾತ್ರ ನನ್ನದು. ಅದಕ್ಕೆ ದಾರಿ ಯಾವುದಾರೂ ಪರವಾಗಿಲ್ಲ ಎನ್ನುವ ಮನಸ್ಥಿತಿ. ಎಲ್ಲ ಪಾತ್ರಗಳು ತಾವು ದೊಡ್ಡದಾಗಿ ಬೆಳೆಯಲು ಹಂಬಲಿಸುವಂಥವು. ಇವುಗಳ ನಡುವೆ ಏನಾಗುತ್ತದೆ ಎನ್ನುವುದು ಚಿತ್ರದ ಕಥಾ ಹೂರಣ’ ಎಂದರು.

ಹಾಸ್ಯ ನಟ ಸಾಧು ಕೋಕಿಲ, ‘ಪ್ರೇಕ್ಷಕ ಹೊಸದನ್ನು ಬಯಸುತ್ತಿದ್ದಾನೆ. ಪ್ರೇಕ್ಷಕ ಅರಸುತ್ತಿರುವ ಹೊಸತನವನ್ನು ನಾವು ಚಿತ್ರದಲ್ಲಿ ನೀಡಿದ್ದೇವೆ.ಈ ಚಿತ್ರದಲ್ಲಿ ಹಳೆಯ ಸಾಧು ಇಲ್ಲವೇ ಇಲ್ಲ.ಬೇರೆಯದೇ ಗೆಟಪ್‌ನಲ್ಲಿ, ಬೇರೆಯದೇ ಸಾಧು ಕೋಕಿಲ ಕಾಣಿಸಲಿದ್ದಾರೆ. ಅಷ್ಟರಮಟ್ಟಿಗೆ ನಿರ್ದೇಶಕರು ನನ್ನಿಂದ ಕೆಲಸ ತೆಗೆದಿದ್ದಾರೆ. ನನ್ನವೃತ್ತಿ ಬದುಕಿನಲ್ಲಿ ಇಂಥ ಪಾತ್ರವನ್ನು ಮೊದಲ ಬಾರಿಗೆ ಮಾಡಿದ್ದೇನೆ’ ಎಂದರು.

ಚಿತ್ರದ ನಾಯಕಿ ಚೈತ್ರಾ, ‘ನನ್ನ ಚೊಚ್ಚಲ ಚಿತ್ರ ಪುನೀತ್‌ ರಾಜ್‌ಕುಮಾರ್‌ ಅವರ ಬ್ಯಾನರ್‌ನಲ್ಲಿ ಬರುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ಚಿತ್ರದಲ್ಲಿ ನಾನು ಮುಗ್ಧ ಯುವತಿಯ ಪಾತ್ರ. ಜಗತ್ತು ಏನೆಂದು ಗೊತ್ತಿರುವುದಿಲ್ಲ. ಇವರೆಲ್ಲರ ಮಧ್ಯೆ ಹೇಗಿರುತ್ತೇನೆ ಎನ್ನುವುದು ಪಾತ್ರದ ಹೂರಣ’ ಎಂದರು.‌

ವಸಿಷ್ಠ ಸಿಂಹ, ‘ನಾನು ತುಂಬಾ ಇಷ್ಟಪಟ್ಟು, ಖುಷಿ ಖುಷಿಯಿಂದ ನಟಿಸಿರುವ ಪಾತ್ರವಿದು. ಮೊದಲ ಬಾರಿಗೆ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.

ಪಿಆರ್‌ಕೆ ಪ್ರೊಡಕ್ಷನ್‌ (ಪಾರ್ವತಮ್ಮ ರಾಜ್‌ಕುಮಾರ್‌) ಬ್ಯಾನರ್‌ನಡಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತು ಎಂ. ಗೋವಿಂದು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಅಭಿಷೇಕ್‌ ಕಾಸರಗೋಡು ಛಾಯಾಗ್ರಹಣ, ಮಿಥುನ್‌ ಮುಕುಂದನ್‌ ಸಂಗೀತ, ಜಗದೀಶ್‌ ಸಂಕಲನ, ಯೋಗರಾಜ್‌ ಭಟ್‌, ಪವನ್‌ ಸಾಹಿತ್ಯ ಹಾಗೂ ಹರ್ಷಮ ಧನು ಅವರ ನೃತ್ಯ ಸಂಯೋಜನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.