ಪೃಥ್ವಿ ಅಂಬಾರ್
‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವರ್ಷ ಇಲ್ಲಿಯವರೆಗೆ ಪೃಥ್ವಿ ನಟನೆಯ ‘ಜೂನಿ’, ‘ಫಾರ್ ರಿಜಿಸ್ಟ್ರೇಷನ್’ ಹಾಗೂ ‘ಮತ್ಸ್ಯಗಂಧ’ ಸಿನಿಮಾಗಳು ಬಿಡುಗಡೆಯಾಗಿದ್ದು, ‘ಭುವನಂ ಗಗನಂ’ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ. ಇದೇ ಸಂದರ್ಭದಲ್ಲಿ ಹೊಸ ಪ್ರಾಜೆಕ್ಟ್‌ಗೆ ಹಸಿರು ನಿಶಾನೆ ನೀಡಿದ್ದಾರೆ ಪೃಥ್ವಿ.
ಶ್ರೀಮುರಳಿ ನಟನೆಯ ‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ಇದೀಗ ಪೃಥ್ವಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ‘ಆನೆ ಪಟಾಕಿ’ ಮೂಲಕ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದ ಚಂದ್ರಶೇಖರ್ ನಂತರ ‘ರಥಾವರ’, ‘ತಾರಕಾಸುರ’ ಸಿನಿಮಾ ಮಾಡಿದರು. ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಚಿತ್ರಕ್ಕೂ ಚಂದ್ರಶೇಖರ್ ಕಥೆ ಬರೆದಿದ್ದು, ಇದೀಗ ಹೊಸ ಕಥೆಯೊಂದನ್ನು ಹೊತ್ತು ಬಂದಿದ್ದಾರೆ. ಆ್ಯಕ್ಷನ್ ಜಾನರ್‌ನಿಂದ ಕೌಟುಂಬಿಕ ಕಥೆಗಳತ್ತ ಚಂದ್ರಶೇಖರ್ ಹೊರಳಿದ್ದು, ಇದೊಂದು ಫ್ಯಾಮಿಲಿ ಎಂಟರ್‌ಟೇನರ್ ಎಂದಿದ್ದಾರೆ. ಪೃಥ್ವಿ-ಚಂದ್ರಶೇಖರ್ ಬಂಡಿಯಪ್ಪ ಕಾಂಬಿನೇಷನ್‌ನ ಸಿನಿಮಾವನ್ನು ವಿದ್ಯಾ ಶೇಖರ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಇನ್ನಷ್ಟೇ ಘೋಷಣೆಯಾಗಬೇಕಿದ್ದು, ತಾರಾಬಳಗ ಹಾಗೂ ತಾಂತ್ರಿಕ ಬಳಗವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದಿದ್ದಾರೆ ಚಂದ್ರಶೇಖರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.