ADVERTISEMENT

ಪೃಥ್ವಿ ಅಂಬಾರ್‌ ಹೊಸ ಚಿತ್ರ ‘ಮತ್ಸ್ಯಗಂಧ’

ಉತ್ತರ ಕನ್ನಡದಲ್ಲಿ ನಡೆದ ಘಟನೆಯ ಸುತ್ತ ಕಥಾಹಂದರ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 10:50 IST
Last Updated 27 ನವೆಂಬರ್ 2022, 10:50 IST
ಪೃಥ್ವಿ ಅಂಬಾರ್‌ ಹೊಸ ಚಿತ್ರ ‘ಮತ್ಸ್ಯಗಂಧ’
ಪೃಥ್ವಿ ಅಂಬಾರ್‌ ಹೊಸ ಚಿತ್ರ ‘ಮತ್ಸ್ಯಗಂಧ’   

ಕೋಸ್ಟಲ್‌ವುಡ್‌ನಿಂದ ಚಂದನವನಕ್ಕೆ ಹೆಜ್ಜೆ ಇಟ್ಟು, ‘ದಿಯಾ’ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ಪೃಥ್ವಿ ಅಂಬಾರ್‌ ಸದ್ಯ ತಮ್ಮ ಕ್ಲಾಸ್‌ ನಟನೆಯಿಂದ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿರುವ ನಟ. ಪ್ರಸ್ತುತ, ‘ದೂರದರ್ಶನ’ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿರುವ ಪೃಥ್ವಿ ತಮ್ಮ ಹೊಸ ಪ್ರಾಜೆಕ್ಟ್‌ ಘೋಷಿಸಿದ್ದಾರೆ.

‘ದಿಯಾ’ ಬಳಿಕ, ‘ಶುಗರ್‌ಲೆಸ್‌’, ‘ಬೈರಾಗಿ’ ಸಿನಿಮಾಗಳಲ್ಲಿ ಪೃಥ್ವಿ ಮಿಂಚಿದ್ದರು. ಇವರು ನಟಿಸಿರುವ ‘ಫಾರ್‌ ರಿಜಿಸ್ಟ್ರೇಷನ್‌’ ಹಾಗೂ ‘ಭುವನಂ ಗಗನಂ’ ಇನ್ನಷ್ಟೇ ತೆರೆ ಕಾಣಬೇಕಿದೆ. ಈ ನಡುವೆ ತಮ್ಮ ಹೊಸ ಚಿತ್ರದ ಶೀರ್ಷಿಕೆಯನ್ನು ಪೃಥ್ವಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಪೃಥ್ವಿ ನಟನೆಯ ಹೊಸ ಚಿತ್ರ ‘ಮತ್ಸ್ಯಗಂಧ’ಕ್ಕೆ ದೇವರಾಜ್‌ ಪೂಜಾರಿ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ‘A story of Uttara Kannada’ ಎನ್ನುವ ಟ್ಯಾಗ್‌ಲೈನ್‌ ಸಿನಿಮಾದ ಮೇಲೆ ಮತ್ತಷ್ಟು ಕುತೂಹಲ ಮೂಡಿಸಿದೆ.

‘ಪ್ರಕೃತಿಯ ಮಡಿಲಲ್ಲಿರುವ ಉತ್ತರ ಕನ್ನಡದ ಮಣ್ಣಿನಲ್ಲಿ ಪ್ರತಿಭಾವಂತ ತಂಡದೊಂದಿಗೆ ರೋಚಕತೆ ತುಂಬಿರುವ ಕಥೆಯಲ್ಲಿ ನನ್ನೊಳಗಿರುವ ಹೊಸ ಆಯಾಮಕ್ಕೆ ಅದ್ಭುತ ಪಾತ್ರ ನಿರ್ವಹಿಸವ ಸದವಕಾಶ ನನಗೆ ದೊರಕಿದೆ’ ಎಂದು ಪೃಥ್ವಿ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಚಿತ್ರದಲ್ಲಿ ಖಾಕಿ ತೊಟ್ಟು ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಪೃಥ್ವಿ ಕಾಣಿಸಿಕೊಂಡಿದ್ದಾರೆ. ಕಲಿಕಾ ಪ್ರೊಡಕ್ಷನ್ಸ್‌ನಡಿ ಈ ಚಿತ್ರ ತಯಾರಾಗುತ್ತಿದೆ. ಇದು ದೇವರಾಜ್ ಪೂಜಾರಿ ಅವರ ನಿರ್ದೇಶನದ ಎರಡನೇ ಚಿತ್ರ. ದೇವರಾಜ್ ಈ ಹಿಂದೆ ‘ಕಿನಾರೆ’ ಅನ್ನೋ ಸಿನಿಮಾ ಮಾಡಿದ್ದರು. ಪ್ರಶಾಂತ್ ಸಿದ್ದಿ ಸಂಗೀತ ನಿರ್ದೇಶನ, ರೋಹಿತ್‌ ಅಂಪರ್‌ ಛಾಯಾಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.