ಪುನೀತ್ ರಾಜ್‌ಕುಮಾರ್ ಹೀರೊ ಆಗಿ ನಟಿಸಿದ ಮೊದಲ ಸಿನಿಮಾ ‘ಅಪ್ಪು’ ಮಾರ್ಚ್ 14 ರಂದು ಮರುಬಿಡುಗಡೆಯಾಗುತ್ತಿದೆ. 24 ವರ್ಷಗಳ ಬಳಿಕ, ಪುನೀತ್ ಅವರ 50ನೇ ಜನ್ಮದಿನದ ಹೊಸ್ತಿಲಲ್ಲಿ ಇದು ರಿರಿಲೀಸ್ ಆಗುತ್ತಿದೆ.
ಪಿಆರ್‌ಕೆ ಪ್ರೊಡಕ್ಷನ್ಸ್ ಸಿನಿಮಾವನ್ನು ರಿರಿಲೀಸ್ ಮಾಡುತ್ತಿದೆ. ಈ ಸಿನಿಮಾವನ್ನು ಪುರಿ ಜಗನ್ನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದರು. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದರು. ಶಿವರಾಜ್‌ಕುಮಾರ್ ಅವರೇ ‘ಅಪ್ಪು’ ಎಂಬ ಶೀರ್ಷಿಕೆ ನೀಡಿದ್ದರು. ಈ ಸಿನಿಮಾದ ಶತದಿನೋತ್ಸವದಲ್ಲಿ ರಜನಿಕಾಂತ್ ಭಾಗವಹಿಸಿದ್ದರು. ‘ಪುನೀತ್ ರಾಜ್‌ಕುಮಾರ್ ಸಿಂಹದಮರಿ. ಈಗತಾನೇ ಎದಿದ್ದೆ, ಗರ್ಜನೆ ಆರಂಭಿಸಿದೆ’ ಎಂದು ಹೊಗಳಿದ್ದರು.
ಇನ್ನು ವಿಡಿಯೊ ಮುಖಾಂತರ ಮೊದಲನೇ ಸಿನಿಮಾದ ಅನುಭವ ಹಂಚಿಕೊಂಡಿರುವ ಚಿತ್ರದ ನಾಯಕಿ ರಕ್ಷಿತಾ, ‘ಮೊದಲ ಸಿನಿಮಾ ಎಲ್ಲಾ ಕಲಾವಿದರ ಜೀವನದಲ್ಲಿ ಬಹಳ ಸುಂದರವಾಗಿರುತ್ತದೆ. ಆ ಅನುಭವವೇ ಅದ್ಭುತ. ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ನನ್ನ ಅಪ್ಪ–ಅಮ್ಮ ವೃತ್ತಿ ಆರಂಭಿಸಿದ್ದರು. ಅಪ್ಪು ಸಿನಿಮಾ ನೆನಪಿಸಿಕೊಳ್ಳುವಾಗ ಪಾರ್ವತಮ್ಮ ರಾಜ್‌ಕುಮಾರ್ ಅವರನ್ನು ಮರೆಯಲು ಸಾಧ್ಯವೇ? ನನಗೆ ದೊಡ್ಡ ಸ್ಫೂರ್ತಿಯೇ ಅವರು. ಪುನೀತ್ ಅವರ ಸಾಹಸ ದೃಶ್ಯಗಳು, ಡಾನ್ಸ್, ಡೈಲಾಗ್ ಎಲ್ಲವೂ ಸೂಪರ್. ಕನ್ನಡದಲ್ಲಿ ಪುನೀತ್ ಅವರಷ್ಟು ಚೆನ್ನಾಗಿ ಡಾನ್ಸ್ ಮಾಡಬಲ್ಲ ಹೀರೊ ಯಾರೂ ಇಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.