ADVERTISEMENT

ಅಪ್ಪು ಕನಸೊಂದಕ್ಕೆ ಅಲ್ಪವಿರಾಮ, ಅದನ್ನು ನನಸಾಗಿಸುವ ಜವಾಬ್ದಾರಿ ನಮ್ಮದು: ಅಶ್ವಿನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2021, 9:45 IST
Last Updated 25 ನವೆಂಬರ್ 2021, 9:45 IST
‘ಪಿಆರ್‌ಕೆ ಪ್ರೊಡಕ್ಷನ್ಸ್‌’ ಮತ್ತು ‘ಪಿಆರ್‌ಕೆ ಆಡಿಯೊ’
‘ಪಿಆರ್‌ಕೆ ಪ್ರೊಡಕ್ಷನ್ಸ್‌’ ಮತ್ತು ‘ಪಿಆರ್‌ಕೆ ಆಡಿಯೊ’   

ಬೆಂಗಳೂರು:ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಕನಸಿನ ಕೂಸು ‘ಪಿಆರ್‌ಕೆ ಪ್ರೊಡಕ್ಷನ್ಸ್‌’ ಮತ್ತು ‘ಪಿಆರ್‌ಕೆ ಆಡಿಯೊ’. ಇದೇ ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ,ರಾಷ್ಟ್ರಪ್ರಶಸ್ತಿ ವಿಜೇತ ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಜೆ.ಎಸ್‌. ಅವರ ಜೊತೆಗೂಡಿ ಪುನೀತ್‌ ಹೊಸ ಕನಸೊಂದನ್ನು ನನಸು ಮಾಡುವ ಹೊಸ್ತಿಲ್ಲಲ್ಲಿದ್ದರು. ಆದರೆ ಈ ಕನಸು ನನಸಾಗುವ ಮುನ್ನವೇ ಇನ್ನಿಲ್ಲವಾದರು.

ಪುನೀತ್‌ ಕಂಡ ಕನಸನ್ನು ನನಸು ಮಾಡಲು ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಇದೀಗ ಹೆಜ್ಜೆ ಇಟ್ಟಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅಶ್ವಿನಿ, ‘ಅಪ್ಪು ಅವರ ಕನಸೊಂದು ನವೆಂಬರ್‌ 1ರಂದು ಬೆಳಕು ಕಾಣಬೇಕಿತ್ತು. ಆದರೆ ಆ ಕನಸಿಗಿದು ಅಲ್ಪವಿರಾಮವಷ್ಟೆ. ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ’ ಎಂದಿದ್ದಾರೆ.

ಅಕ್ಟೋಬರ್‌ 27ರಂದು ಟ್ವಿಟರ್‌ನಲ್ಲಿ ಪೋಸ್ಟ್‌ ಹಾಕಿದ್ದ ಪುನೀತ್‌ ರಾಜ್‌ಕುಮಾರ್‌, ‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ' ಎಂದು ಹೇಳಿದ್ದರು. ಅದೇ ಟ್ವೀಟ್‌ನಲ್ಲಿ 1–11–2021 ಎಂದು ಬರೆಯಲಾಗಿತ್ತು.

ADVERTISEMENT

‘ಗಂಧದ ಗುಡಿ’ ಹೆಸರಿನಲ್ಲಿ ಕರ್ನಾಟಕದ ವನ್ಯಲೋಕ, ವನ್ಯಸಂಪತ್ತನ್ನು ಪರಿಚಯಿಸುವ ಡಾಕ್ಯೂಫಿಲಂ ಒಂದನ್ನು ಪಿಆರ್‌ಕೆ ಪ್ರೊಡಕ್ಷನ್ಸ್‌ ಕೈಗೆತ್ತಿಕೊಂಡಿತ್ತು. ಪುನೀತ್‌ ಕೂಡಾ ಇದರ ಭಾಗವಾಗಿದ್ದರು. ನಾಗರಹೊಳೆ, ಕಾಳಿನದಿ, ಹೊಸಪೇಟೆ ಸೇರಿದಂತೆ ಕರ್ನಾಟಕದ ಹಲವು ಜಾಗಗಳಲ್ಲಿ ಸುತ್ತಿ ಚಿತ್ರೀಕರಣ ಮಾಡಿದ್ದರು.

ಇಲ್ಲಿ ಸುತ್ತಿದ ವಿಡಿಯೊವನ್ನೂ ಪುನೀತ್‌ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ‘ಗಂಧದ ಗುಡಿ’ಯ ಶೇ 90ರಷ್ಟು ಭಾಗ ಚಿತ್ರೀಕರಣ ಮುಗಿದಿತ್ತು. ಕಳೆದ ನ.1ರ ಕನ್ನಡ ರಾಜ್ಯೋತ್ಸವದಂದು ಇದರ ಟೀಸರ್ ಬಿಡುಗಡೆ ಮಾಡಲು ಪುನೀತ್‌ ಸಿದ್ಧಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.