ADVERTISEMENT

ಜನರ ಅಭಿಮಾನ, ಅಪ್ಪು ಸರಳತೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 14:21 IST
Last Updated 25 ಫೆಬ್ರುವರಿ 2019, 14:21 IST
ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಯುವರತ್ನ ಚಲನಚಿತ್ರ ಚಿತ್ರೀಕರಣದ ಸಂದರ್ಭದಲ್ಲಿ ನಾಯಕನಟ ಪುನೀತರಾಜಕುಮಾರ ಅವರನ್ನು ನೋಡಲು ಸೇರಿದ್ದ ಜನಸ್ತೋಮ 
ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಯುವರತ್ನ ಚಲನಚಿತ್ರ ಚಿತ್ರೀಕರಣದ ಸಂದರ್ಭದಲ್ಲಿ ನಾಯಕನಟ ಪುನೀತರಾಜಕುಮಾರ ಅವರನ್ನು ನೋಡಲು ಸೇರಿದ್ದ ಜನಸ್ತೋಮ    

ಧಾರವಾಡ: ತೆರೆಯ ಮೇಲೆ ನಾಯಕ ನಟರನ್ನು ನೋಡಿ ಸಂಭ್ರಮಿಸುವ ಯುವ ಜನಾಂಗಕ್ಕೆ ಸ್ವತಃ ನಾಯಕ ನಟನೇ ಬಂದು ತಮ್ಮ ಕೈ ಕುಲುಕಿದಾಗ, ಫೋಟೊ ಕ್ಲಿಕ್ಕಿಸಿಕೊಂಡಾಗ ಆಗುವ ಸಂಭ್ರಮ ಹೇಳತೀರದು. ಅಂಥ ಸಂಭ್ರಮಕ್ಕೆ ಸೋಮವಾರ ಕರ್ನಾಟಕ ವಿಶ್ವವಿದ್ಯಾಲಯ ಸಾಕ್ಷಿಯಾಯಿತು.

ಪವರ್‌ಸ್ಟಾರ್‌ ಪುನೀತ್ ರಾಜಕುಮಾರ ನಟಿಸುತ್ತಿರುವ ‘ಯುವರತ್ನ’ ಚಲನಚಿತ್ರದ ಚಿತ್ರೀಕರಣ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸೋಮವಾರದಿಂದ ಆರಂಭಗೊಂಡಿತು. ಚಿತ್ರೀಕರಣದ ಮಾಹಿತಿ ಪಡೆದ ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ತಮ್ಮ ನೆಚ್ಚಿನ ‘ಅಪ್ಪು’ ನೋಡಲುಭಾರೀ ಸಂಖ್ಯೆಯಲ್ಲಿ ಸೇರಿದ್ದರು.

ಚಿತ್ರೀಕರಣ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತಾದರೂ, ಅದನ್ನು ಲೆಕ್ಕಿಸದೇ ಅಭಿಮಾನಿಗಳು ಒಳಗೆ ನುಗ್ಗುವ ಯತ್ನ ಮಾಡಿದರು. ಕೆಲವರಂತೂ ಚಿತ್ರೀಕರಣ ನಡೆಯುತ್ತಿದ್ದ ಸಿನೆಟ್‌ ಸಭಾಂಗಣದ ಸುತ್ತಲೂ ನಿಂತು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಂಡರು.

ADVERTISEMENT

ನೆತ್ತಿ ಸುಡುತ್ತಿದ್ದರೂ ಬಿಸಿಲನ್ನು ಲೆಕ್ಕಿಸದೆ ವಿದ್ಯಾಸೌಧ ಕಟ್ಟಡ ಮುಂಭಾಗದಲ್ಲಿ ಯುವಕರು ಪುನೀತ್ ಪರ ಘೋಷಣೆ ಕೂಗುತ್ತಿದ್ದರು. ಸಹನಟರಾದ ರಂಗಾಯಣ ರಘು, ಕುರಿ ಪ್ರತಾಪ, ರವಿಶಂಕರ ಅವರೊಂದಿಗೆ ಚಿತ್ರ ತೆಗೆಸಿಕೊಳ್ಳಲು ಅಭಿಮಾನಿಗಳು ದುಂಬಾಲು ಬಿದ್ದರು. ಕ್ಯಾರಾವ್ಯಾನ್‌ನಲ್ಲಿ ಚಿತ್ರೀಕರಣಕ್ಕೆ ಸಿದ್ಧರಾಗುತ್ತಿದ್ದ ಪುನೀತ್, ಹೊರಬರುತ್ತಿದ್ದಂತೆ ಅಭಿಮಾನಿಗಳ ಅಪ್ಪು... ಅಪ್ಪು ಘೋಷಣೆ ಮುಗಿಲು ಮುಟ್ಟುವಂತಿತ್ತು.

ನೂಕುನುಗ್ಗಲು ಉಂಟಾಗಿದ್ದರಿಂದ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು. ಹೀಗಿದ್ದರೂ ಅಭಿಮಾನಿಗಳ ಉತ್ಸಾಹ ಕುಂದಲಿಲ್ಲ. ಹೊರಬಂದ ಪುನೀತ್, ಅಭಿಮಾನಿಗಳನ್ನು ಅಷ್ಟೇ ಆಪ್ತತೆ ಮತ್ತು ಸರಳತೆಯಿಂದ ಕಂಡಿದ್ದು ವಿಶೇಷವಾಗಿತ್ತು. ಪ್ರತಿಯೊಬ್ಬರೊಂದಿಗೂ ಚಿತ್ರ ತೆಗೆಸಿಕೊಂಡರು.

ಸರತಿ ಸಾಲಿನಲ್ಲಿ ನಿಲ್ಲುವಂತೆ ಹೇಳಿದರು. ಛಾಯಾಗ್ರಾಹಕರೊಬ್ಬರಿಗೆ ಸೂಚಿಸಿ ಪ್ರತಿಯೊಬ್ಬರದ್ದೂ ಚಿತ್ರ ತೆಗೆದು ಅವರಿಗೆ ಕೊಡಿ ಎಂದು ಮನವಿ ಮಾಡಿಕೊಂಡರು. ಅಭಿಮಾನಿಗಳೂ ಇಂಥದ್ದೊಂದು ಅವಕಾಶದ ಪ್ರಯೋಜನ ಪಡೆದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಫೋಟೊಶೂಟ್ ನಡೆಯಿತು.

ಪೌರಾಣಿಕ ನಾಟಕದ ಒಂದು ಸನ್ನಿವೇಶದ ಚಿತ್ರೀಕರಣ ಇಲ್ಲಿ ನಡೆಯಿತು. ಕೆಲ ಸ್ಥಳೀಯ ಕಲಾವಿದರೂ ಇದರಲ್ಲಿ ಅವಕಾಶ ಪಡೆದಿದ್ದರು. ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.