ಮಾಸ್ ಸಿನಿಮಾಗಳಿಗೆ ಹೆಸರಾದ ಪುರಿ ಜಗನ್ನಾಥ್, ಉತ್ತಮ ಕಂಟೆಂಟ್ ಸಿನಿಮಾಗಳನ್ನು ಮಾಡುವ ವಿಜಯ್ ಸೇತುಪತಿ ಜತೆ ಕೈಜೋಡಿಸಿದಾಗಲೇ ನಿರೀಕ್ಷೆ ಹೆಚ್ಚಾಗಿತ್ತು. ಇದೀಗ ವಿವಿಧ ಚಿತ್ರರಂಗಗಳ ಭಿನ್ನ ಅಭಿರುಚಿಯ ಕಲಾವಿದರು ಈ ತಂಡ ಸೇರಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ದುನಿಯಾ ವಿಜಯ್ ಕೂಡ ತಂಡದ ಭಾಗವಾಗಿದ್ದಾರೆ.
ಪುರಿ ಜಗನ್ನಾಥ್, ವಿಜಯ್ ಸೇತುಪತಿಗೆ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಚಿತ್ರೀಕರಣ ಜೂನ್‌ನಿಂದ ಆರಂಭ ಆಗಲಿದೆ. ಇದೊಂದು ಮಲ್ಟಿಸ್ಟಾರರ್ ಸಿನಿಮಾ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಪುರಿ ಜಗನ್ನಾಥ್ ಮಾಸ್ ಸಿನಿಮಾಗಳಿಗೆ ಜನಪ್ರಿಯ. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ಚಿತ್ರೋದ್ಯಮಕ್ಕೆ ಪರಿಚಯಿಸಿದ ‘ಅಪ್ಪು’ ಸಿನಿಮಾವನ್ನು ನಿರ್ದೇಶಿಸಿದ್ದರು. ಶಿವಣ್ಣ ಅಭಿನಯದ ‘ಯುವರಾಜ’ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದರು. ಟಾಲಿವುಡ್ನಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆದಾಗ್ಯೂ ಅವರ ಇತ್ತೀಚಿನ ‘ಲೈಗರ್’ ಮತ್ತು ‘ಡಬಲ್ ಇಸ್ಮಾರ್ಟ್’ ಚಿತ್ರಗಳು ನಿರೀಕ್ಷಿತ ಯಶಸ್ಸು ಕಂಡಿಲ್ಲ.
ಇನ್ನೂ ವಿಜಯ್ ಸೇತುಪತಿ ಸದಾ ವಿಭಿನ್ನ ಕಥಾವಸ್ತು ಹೊಂದಿರುವ ಸಿನಿಮಾಗಳನ್ನು ಆಯ್ದುಕೊಳ್ಳುವವರು. ಈ ವರ್ಷ ತೆರೆಕಂಡ ಅವರ ‘ಮಹಾರಾಜ’ ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತು. ‘ಏಸ್’, ‘ಟ್ರೈನ್’ ಚಿತ್ರಗಳು ಚಿತ್ರೀಕರಣದ ಹಂತದಲ್ಲಿವೆ. ಸೇತುಪತಿ–ಪುರಿ ಜಗನ್ನಾಥ್ ಕಾಂಬಿನೇಷನ್ ಸಿನಿಮಾ ಯಾವ ಜಾನರ್‌ನದ್ದಾಗಿರಬಹುದೆಂಬ ಕುತೂಹಲವಿದೆ.
ಬಹುಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರಕ್ಕೆ ವಿಜಯ್ ಸೇರ್ಪಡೆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ‘ಭೀಮ’ ಸಿನಿಮಾದ ಗೆಲುವಿನ ಖುಷಿಯಲ್ಲಿರುವ ವಿಜಯ್ ಬಳಿ ಸಾಲು ಸಾಲು ಸಿನಿಮಾಗಳಿವೆ. ಜಡೇಶ್ ಹಂಪಿ ನಿರ್ದೇಶನದ ‘ಲ್ಯಾಂಡ್ ಲಾರ್ಡ್’ ಚಿತ್ರ ಬಹುತೇಕ ಪೂರ್ಣಗೊಂಡಿದೆ. ತಮ್ಮ ಮತ್ತೋರ್ವ ಪುತ್ರಿ ಮೋನಿಷಾ ವಿಜಯ್ ಮತ್ತು ವಿನಯ್ ರಾಜ್‌ಕುಮಾರ್ ಕಾಂಬಿನೇಷನ್‌ನ ‘ಸಿಟಿ ಲೈಟ್ಸ್’ ಚಿತ್ರವನ್ನು ವಿಜಯ್ ನಿರ್ದೇಶಿಸುತ್ತಿದ್ದು, ಚಿತ್ರೀಕರಣ ಪ್ರಗತಿಯಲ್ಲಿದೆ. ತಮಿಳಿನ ‘ಮೂಕುತಿ ಅಮ್ಮನ್ 2’ ಸಿನಿಮಾದಲ್ಲೂ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು ಇವರು ‘ವೀರ ಸಿಂಹ ರೆಡ್ಡಿ’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು.
ಸೇತುಪತಿ ಜತೆಗಿನ ಪ್ಯಾನ್ ಇಂಡಿಯಾ ಸಿನಿಮಾಗೆ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಅವರು ಬಂಡವಾಳ ಹೂಡುತ್ತಿದ್ದಾರೆ. ಬಾಲಿವುಡ್ ನಟಿ ಟಬು ಕೂಡ ಈ ಚಿತ್ರತಂಡ ಸೇರಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.