ADVERTISEMENT

 ‘ಪುಷ್ಪ’ ಪೋಸ್ಟರ್‌: ರಕ್ತಚಂದನ ಚರಿತೆಯಲ್ಲಿ ಅಲ್ಲು ಅರ್ಜುನ್‌ ರಗಡ್‌ ಲುಕ್‌

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 13:37 IST
Last Updated 8 ಏಪ್ರಿಲ್ 2020, 13:37 IST
   

‘ಅಲಾ ವೈಕುಂಠಪುರಮುಲೋ’ ಚಿತ್ರ ಸೂಪರ್‌ ಹಿಟ್ ಆದ ಬಳಿಕ ಅಲ್ಲು ಅರ್ಜುನ್ ನಟನೆಯ ಹೊಸ ಚಿತ್ರಕ್ಕೆ ‘#AA20’ ಎಂಬ ತಾತ್ಕಾಲಿಕ ಶೀರ್ಷಿಕೆ‌ ಇಡಲಾಗಿತ್ತು. ಈಗ ‘ಪುಷ್ಪ’ ಎಂಬ ಟೈಟಲ್‌ ಅಧಿಕೃತಗೊಂಡಿದೆ. ಜೊತೆಗೆ, ಈ ಸಿನಿಮಾ ನಿರ್ಮಿಸುತ್ತಿರುವ ಮೈತ್ರಿ ಮೂವಿ ಮೇಕರ್ಸ್‌ ಫಸ್ಟ್‌ ಲುಕ್‌ ಅನ್ನು ಬಿಡುಗಡೆ ಮಾಡಿದ್ದು, ಅಲ್ಲು ಅರ್ಜುನ್‌ ಅವರ ರಗಡ್‌ ಲುಕ್‌ ಗಮನ ಸೆಳೆಯುತ್ತದೆ.

ಅಲ್ಲು ಅರ್ಜುನ್‌ ಜನ್ಮದಿನವಾದ ಇಂದೇ(ಏ.8)ಫಸ್ಟ‌ಲುಕ್‌ ಬಿಡುಗಡೆಯಾಗಿರುವುದು ಅಭಿಮಾನಿಗಳಲ್ಲಿ ಸಂತಸವನ್ನು ಹೆಚ್ಚಿಸಿದೆ.

ಇದಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಸುಕುಮಾರ್. ‘ರಂಗಸ್ಥಳಂ’ ನಂತಹ ಸೂಪರ್ ಹಿಟ್ ಚಿತ್ರ ‌ನೀಡಿದ ಬಳಿಕ ಅವರು ನಿರ್ದೇಶಿಸಿರುವ ಈ ಚಿತ್ರದ ಮೇಲೆ‌ ಟಾಲಿವುಡ್‌ನಲ್ಲಿ ನಿರೀಕ್ಷೆಯ ಭಾರ ದುಪ್ಪಟ್ಟಾಗಿರುವುದು ಗುಟ್ಟೇನಲ್ಲ. ಅಂದಹಾಗೆ ‘ಆರ್ಯ’ ಮತ್ತು ‘ಆರ್ಯ 2’ ಚಿತ್ರಗಳ ಬಳಿಕ ಈ ಇಬ್ಬರ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ಮೂರನೇ ಚಿತ್ರ‌ ‘ಪುಷ್ಪ’.

ADVERTISEMENT

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶೇಷಾಚಲಂ ಅರಣ್ಯ‌‌ ಪ್ರದೇಶದ ವ್ಯಾಪ್ತಿಯಲ್ಲಿ ರಕ್ತಚಂದನ ಮರಗಳ ಸಂಖ್ಯೆ ಹೆಚ್ಚಿದೆ. ಶ್ರೀಗಂಧ, ಬೀಟೆ ಹೊರತುಪಡಿಸಿದರೆ ಈ ಮರಗಳಿಗೆ ಮೌಲ್ಯ ಹೆಚ್ಚು. ಹಾಗಾಗಿಯೇ, ರಕ್ತಚಂದನ‌ದ ಕಳ್ಳಸಾಗಣೆ ಅವ್ಯಾಹತವಾಗಿದೆ. ಐದು ವರ್ಷದ ಹಿಂದೆ ರಕ್ತಚಂದನ ಸಾಗಾಣಿಕೆ ನಿಗ್ರಹ ದಳದ ಗುಂಡಿನ ದಾಳಿಗೆ ಇಪ್ಪತ್ತು ಕಳ್ಳಸಾಗಾಣಿಕೆದಾರರು ಜೀವತೆತ್ತಿದ್ದರು.

ರಕ್ತಚಂದನ ಕಳ್ಳಸಾಗಾಣಿಕೆ ಜಾಲದ ಸುತ್ತವೇ‌ ‘ಪುಷ್ಪ’ ಚಿತ್ರದ ಕಥೆ ಹೆಣೆಯಲಾಗಿದೆ. ಮತ್ತೊಂದೆಡೆ ‘ಪುಷ್ಪ’ ಎಂಬುದು ಹೀರೊಯಿನ್‌ ಹೆಸರು ಎಂಬ ಸುದ್ದಿಯಿದೆ. ರಶ್ಮಿಕಾ ಮಂದಣ್ಣ ಈ ಚಿತ್ರದ ನಾಯಕಿ. ಅವರು ಚಿತ್ತೂರು‌ ಹುಡುಗಿಯಾಗಿ ಬಣ್ಣ ಹಚ್ಚಲಿದ್ದಾರೆ. ಅಲ್ಲು ಅರ್ಜುನ್ ಅವರದು ಲಾರಿ ಚಾಲಕನ ಪಾತ್ರ. ವಿಜಯ್‌ ಸೇತುಪತಿ ಖಳನಟನಾಗಿ ಬಣ್ಣಹಚ್ಚಲಿದ್ದಾರೆ. ಪ್ರಕಾಶ್‌ ರಾಜ್‌, ಜಗಪತಿ ಬಾಬು ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಾರ್ಚ್‌ನಲ್ಲಿಯೇ‌ ಇದರ ಶೂಟಿಂಗ್ ಆರಂಭವಾಗಬೇಕಿತ್ತು. ಕೊರೊನಾ ಸೋಂಕಿನ ಭೀತಿಯಿಂದ ತಡವಾಗಿದೆ. ಈ ಭೀತಿ‌‌
ಕಡಿಮೆಯಾದರೆ ಮೇ‌ ತಿಂಗಳಿನಿಂದ ಚಿತ್ರೀಕರಣ ಆರಂಭಿಸಲು‌ ಚಿತ್ರತಂಡ‌‌‌ ಯೋಜನೆ ರೂಪಿಸಿದೆ. ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಲಿದ್ದಾರೆ. ಮಿರೋಸ್ಲಾ ಕುಬಾ ಬ್ರೋಜೆಕ್ ಅವರ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.