ADVERTISEMENT

ಚಂದನವನ: ರಚೆಲ್‌ಗೆ ಸ್ಯಾಂಡಲ್‌ವುಡ್‌ ಕನವರಿಕೆ

ಕೆ.ಎಂ.ಸಂತೋಷಕುಮಾರ್
Published 30 ಜುಲೈ 2020, 19:30 IST
Last Updated 30 ಜುಲೈ 2020, 19:30 IST
ರಚೆಲ್‌ ಡೇವಿಡ್‌
ರಚೆಲ್‌ ಡೇವಿಡ್‌   

ಕರುನಾಡಿನಲ್ಲಿ ಹುಟ್ಟಿ ಬೆಳೆದ ಸಾಕಷ್ಟು ಮಂದಿ ಮಲಯಾಳಿ ಬೆಡಗಿಯರು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವುದು ಉಂಟು. ಈಗ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಮತ್ತೊಬ್ಬ ನಟಿ ರಚೆಲ್ ಡೇವಿಡ್.

ಮಾಲಿವುಡ್‌ಗೆ ಕಾಲಿಟ್ಟ ಒಂದೆರಡು ವರ್ಷಗಳಲ್ಲಿ ನಾಲ್ಕು ಮಲಯಾಳಿ ಚಿತ್ರಗಳಲ್ಲಿ ನಟಿಸುವ ಅವಕಾಶ ರಚೆಲ್ ಪಾಲಿಗೆ ಸಿಕ್ಕಿದೆ. ಸ್ಯಾಂಡಲ್‌ವುಡ್‌ನಲ್ಲೂ ಒಳ್ಳೆಯಅವಕಾಶಗಳ ನಿರೀಕ್ಷೆಯಲ್ಲಿರುವ ರಚೆಲ್‌ ‘ಪ್ರಜಾಪ್ಲಸ್’ನೊಂದಿಗೆ ತಮ್ಮ ‌ಬಣ್ಣದ ಬದುಕಿನ ಕನಸುಗಳನ್ನು ತೆರೆದಿಟ್ಟಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಕಾಲಿಡಲು ತಯಾರಿ ನಡೆಸಿರುವ ಈ ಬೆಡಗಿ, ಅದಕ್ಕೆ ಪೂರ್ವಭಾವಿಯಂತೆನಟ ಪುನೀತ್ ರಾಜ್‌ಕುಮಾರ್ ಜೊತೆಗೆ ಸ್ವಸ್ತಿಕ್ ಪುಳಿಯೋಗರೆ ಉತ್ಪನ್ನದಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ‘ಪುನೀತ್ ರಾಜ್‌ಕುಮಾರ್ ಅವರಂತಹ ಸ್ಟಾರ್ ನಟನ ಜೊತೆಗೆ ಜಾಹೀರಾತಿನಲ್ಲಿ ನಟಿಸಿದ್ದು, ಅವರೊಟ್ಟಿಗೆ ಚಿತ್ರೀಕರಣದಲ್ಲಿ ಪಾಲ್ಗೊಂಡ ಕ್ಷಣಗಳನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಸ್ಟಾರ್‌ ನಟನಾದರೂ ಅವರ ಸರಳತೆ, ವ್ಯಕ್ತಿತ್ವ ಎಲ್ಲರಿಗೂ ಮಾದರಿ’ ಎನ್ನುವುದು ರಚೆಲ್‌ ನುಡಿ.

ADVERTISEMENT

ಮಲಯಾಳದ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಪುತ್ರ ಪ್ರಣವ್ ಮೋಹನ್ ಲಾಲ್ ಜೊತೆಗೆ ‘ಇರುಪತಿಯೊನ್ನಮ್ ನೂಟ್ರಾಂಡು’ಚಿತ್ರದಲ್ಲಿ ನಟಿಸುವ ಮೂಲಕ ರಚೆಲ್‌ ಮಾಲಿವುಡ್‌ ಪ್ರವೇಶಿಸಿದರು. ನಂತರ‘ಒರೊನ್ನನರ ಪ್ರಣಯಕದಾ’ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. 2019ರಲ್ಲಿ ತೆರೆಕಂಡ ಈ ಎರಡು ಚಿತ್ರಗಳು ಮಾಲಿವುಡ್‌ನಲ್ಲಿ ರಚೆಲ್‌ಗೆ ಐಡೆಂಟಿಟಿ ನೀಡಿವೆ. ಈ ಚಿತ್ರಗಳಲ್ಲಿನ ಅಭಿನಯವೇ ‘ಕಬೀರಿಂದೆ ದಿವಸಂಗಳ್’ ಮತ್ತು ‘ಕಾವಲ್’ ಚಿತ್ರಗಳಲ್ಲೂ ನಟಿಸುವ ಅವಕಾಶ ದಕ್ಕಿಸಿಕೊಟ್ಟಿವೆ.

ಮಲಯಾಳಂನ ಖ್ಯಾತ ನಟ ಸುರೇಶ್ ಗೋಪಿ ಅವರೊಟ್ಟಿಗೆ ‘ಕಾವಲ್’ ಸಿನಿಮಾದಲ್ಲಿ ರಚೆಲ್‌ ನಿರ್ವಹಿಸುತ್ತಿರುವ ಪಾತ್ರ ಅದ್ಭುತವಾಗಿದೆಯಂತೆ. ಸದ್ಯ ಲಾಕ್‌ಡೌನ್‌ನಿಂದಾಗಿ ಈ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದೆ.

‘ಮಾಡೆಲಿಂಗ್‌ ಮತ್ತು ಕಮರ್ಷಿಯಲ್‌ ಜಾಹೀರಾತುಗಳಲ್ಲಿನ ಅಭಿನಯವೇ ಸಹಜವಾಗಿ ನನ್ನಲ್ಲಿ ಸಿನಿಮಾಸಕ್ತಿ ಬೆಳೆಸಿತು.ಮುಂಬೈನಲ್ಲಿ ಅನುಪಮ್ ಕೇರ್ ಅಭಿನಯ ತರಬೇತಿ ಸಂಸ್ಥೆಯಲ್ಲಿ ನಟನಾಕೌಶಲ ಕಲಿತೆ. ಆಡಿಷನ್‌ ಮೂಲಕವೇ ‘ಇರುಪತಿಯೊನ್ನಮ್ ನೂಟ್ರಾಂಡು’ ಚಿತ್ರಕ್ಕೆ ಆಯ್ಕೆಯೂ ಆದೆ. ಸ್ಯಾಂಡಲ್‌ವುಡ್‌ಗೆ ಬರಲು ಮನ ಕಾತರಿಸುತ್ತಿದೆ. ಕನ್ನಡ ಚಿತ್ರರಂಗದಲ್ಲೇ ನೆಲೆ ಕಂಡುಕೊಳ್ಳುವ ಕನಸುಗಳೂ ಇವೆ.ಅವಕಾಶ ಸಿಕ್ಕಿದರೆ ತೆಲುಗು ಮತ್ತು ತಮಿಳಿನಲ್ಲೂ ನಟಿಸಲು ಸೈ. ಆದರೆ, ಯಾವುದಕ್ಕೂ ಒಳ್ಳೆಯ ಸ್ಕ್ರಿಪ್ಟ್‌ಗಳು ಬರಬೇಕಷ್ಟೇ’ ಎಂದು ರಚೆಲ್‌ ಮನದ ಮಾತು ಬಿಚ್ಚಿಟ್ಟರು.

ಬೆಂಗಳೂರಿನಲ್ಲಿ ಹುಟ್ಟಿಬೆಳೆದ ರಚೆಲ್,ಬಿಷಪ್ ಕಾಟನ್ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಸಂತ ಜೋಸೆಫರ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದಿದ್ದಾರೆ.ಕೇರಳ ಮೂಲದವರಾದ ಇವರ ತಂದೆ ಮೈಸೂರಿನಲ್ಲಿ ಗಾರ್ಮೆಂಟ್ಸ್ ಉದ್ಯಮ ನಡೆಸುತ್ತಿದ್ದಾರೆ. ತಾಯಿ ಕೂಡ ಉದ್ಯಮದಲ್ಲಿದ್ದಾರೆ. ರಚೆಲ್‌ಗೆ ಸಹೋದರಿ ಇದ್ದು, ಆಕೆಯೂಬೆಂಗಳೂರಿನಲ್ಲಿನೌಕರಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.