ADVERTISEMENT

ಗಾಜನೂರಿಗೆ ರಾಘವೇಂದ್ರ ರಾಜ್‌ಕುಮಾರ್‌ ಭೇಟಿ, ಸೋದರತ್ತೆ ಆರೋಗ್ಯ ವಿಚಾರಣೆ

ಡಾ.ರಾಜ್‌ಕುಮಾರ್‌ ಹುಟ್ಟೂರಿನಲ್ಲಿ ಮೊದಲ ಬಾರಿಗೆ ಚಿತ್ರವೊಂದಕ್ಕೆ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 12:08 IST
Last Updated 9 ಮಾರ್ಚ್ 2022, 12:08 IST
ರಾಘವೇಂದ್ರ ರಾಜ್‌ಕುಮಾರ್‌ ಅವರು ಬುಧವಾರ ಗಾಜನೂರಿಗೆ ಭೇಟಿ ನೀಡಿ ಸೋದರತ್ತೆ ನಾಗಮ್ಮ ಅವರ ಆರೋಗ್ಯ ವಿಚಾರಿಸಿದರು
ರಾಘವೇಂದ್ರ ರಾಜ್‌ಕುಮಾರ್‌ ಅವರು ಬುಧವಾರ ಗಾಜನೂರಿಗೆ ಭೇಟಿ ನೀಡಿ ಸೋದರತ್ತೆ ನಾಗಮ್ಮ ಅವರ ಆರೋಗ್ಯ ವಿಚಾರಿಸಿದರು   

ಚಾಮರಾಜನಗರ: ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್‌ ಅವರು ಬುಧವಾರ ತಮ್ಮ ತಂದೆ ವರನಟ ಡಾ.ರಾಜ್‌ಕುಮಾರ್‌ ಅವರ ಹುಟ್ಟೂರು ಗಾಜನೂರಿಗೆ ಭೇಟಿ ನೀಡಿ ಸೋದರತ್ತೆ ನಾಗಮ್ಮ ಅವರ ಆರೋಗ್ಯ ವಿಚಾರಿಸಿದರು.

ಪುನೀತ್‌ ರಾಜ್‌ಕುಮಾರ್‌ ಅವರ ನಿಧನದ ಬಳಿಕ ರಾಘವೇಂದ್ರ ರಾಜ್‌ಕುಮಾರ್‌ ಅವರು ಗಾಜನೂರಿಗೆ ನೀಡುತ್ತಿರುವ ಮೊದಲ ಭೇಟಿ ಇದು.ಡಾ.ರಾಜ್‌ ಅವರ ತಂಗಿ ನಾಗಮ್ಮ ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

’ನಾಗತ್ತೆ ಅವರು ನಮಗೆ ಹಾಲು ಕುಡಿಸಿ ಬೆಳೆಸಿದ್ದಾರೆ.ನಮ್ಮ ತಂದೆ ಚಿತ್ರೀಕರಣಕ್ಕೆ ಹೋದಾಗ ತಾಯಿಯೂ ಹೋಗುತ್ತಿದ್ದರು.ಆಗ ನಾಗತ್ತೆ ನಮ್ಮನ್ನು ಸಾಕಿ ಸಲಹಿದ್ದರು. ಈಗ ಅವರಿಗೆಹುಷಾರಿಲ್ಲ.ಅವರ ಆರೋಗ್ಯ ವಿಚಾರಿಸಲು ಹಾಗೂ ಚಿತ್ರೀಕರಣಕ್ಕೆ ಪೂಜೆ ಮಾಡಿಸಲು ನಾವೇ ಇಲ್ಲಿಗೆ ಬಂದಿದ್ದೇವೆ‘ ಎಂದು ರಾಘವೇಂದ್ರ ರಾಜ್‌ಕುಮಾರ್‌ ಅವರು ಮಾಧ್ಯಮಗಳಿಗೆ ತಿಳಿಸಿದರು.

ADVERTISEMENT

ಬಳಿಕ ಅವರು ದೊಡ್ಡ ಗಾಜನೂರಿನಲ್ಲಿರುವ ರಾಜ್‌ಕುಮಾರ್‌ ಅವರ ಹುಟ್ಟಿದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮಳೆಗಾಲದ ನಂತರ ಮನೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಿ ಸುಣ್ಣ ಬಣ್ಣ ಬಳಿಯಲಾಗಿದೆ.

ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಕುಟುಂಬದವರು ದುರಸ್ತಿ ಮಾಡಿದ ಮನೆಯಲ್ಲಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್‌ ಅವರು, ’ಈ ಮನೆ ಕನ್ನಡಿಗರ ಆಸ್ತಿ. ಡಾ.ರಾಜ್ ಹುಟ್ಟಿದ ಮನೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಈ ಮನೆ ನಮಗೆ ಮಾತ್ರ ಸೇರಿದ್ದಲ್ಲ.ಸಾರ್ವಜನಿಕರು ಬಂದು ನೋಡಿಕೊಂಡು ಹೋಗಲು ಸಂರಕ್ಷಿಸಿದಿದ್ದೇವೆ‘ ಎಂದರು.

’ಸತತ ಮಳೆಯಿಂದ ಮನೆ ಕುಸಿಯುವ ಹಂತಕ್ಕೆ ಬಂದಿತ್ತು.ಮನೆಯಲ್ಲಿದ್ದ ವಸ್ತುಗಳನ್ನೇ ಉಪಯೋಗಿಸಿಕೊಂಡು ದುರಸ್ತಿ ಮಾಡಿದ್ದೇವೆ. ದುರಸ್ತಿ ನಂತರ ಪೂಜೆ ಮಾಡಿರಲಿಲ್ಲ. ಮಾವನವರು ಮಕ್ಕಳು ಬರಲಿ ಎಂದು ಕಾದಿದ್ದರು‘ ಎಂದರು.

ಚಿತ್ರಕ್ಕೆ ಮುಹೂರ್ತ:ರಾಘವೇಂದ್ರ ರಾಜ್‌ಕುಮಾರ್‌ ಅವರು ವಿಶೇಷ ಪಾತ್ರದಲ್ಲಿ ನಟಿಸಲಿರುವ ’ಖಡಕ್ ಹಳ್ಳಿ ಹುಡುಗರು‘ ಚಿತ್ರದ ಮೂಹೂರ್ತ ಗುರುವಾರ ಗಾಜನೂರಿನಲ್ಲಿ ನಡೆಯಲಿದೆ.

’ಗಾಜನೂರಿನಲ್ಲಿ ಸಂಪತ್ತಿಗೆ ಸವಾಲ್, ಶ್ರೀನಿವಾಸ ಕಲ್ಯಾಣ ಚಿತ್ರಗಳ ಚಿತ್ರೀಕರಣ ನಡೆದಿದೆ. ಆದರೆ, ಯಾವುದೇ ಚಿತ್ರದ ಮೂಹೂರ್ತ ಆಗಿಲ್ಲ.ಹೀಗಾಗಿ ಪ್ರಥಮ ಬಾರಿಗೆ ಗಾಜನೂರಿನಲ್ಲೇ ಮುಹೂರ್ತ ನಡೆಯುತ್ತಿದೆ. ಸೋದರತ್ತೆ ನಾಗಮ್ಮ ಅವರ ಕೈಲಿ ಪೂಜೆ ಮಾಡಿಸುತ್ತೇವೆ‘ ಎಂದು ರಾಘವೇಂದ್ರ ರಾಜ್‌ಕುಮಾರ್‌ ಅವರು ಹೇಳಿದರು.

’ನಾನು ಈ ಚಿತ್ರದ ಹೀರೋ ಅಲ್ಲ.ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದೇನೆ.ಅಪ್ಪಾಜಿ ಹುಟ್ಟಿದ ಮನೆ, ಓದಿದ ಶಾಲೆ, ಮಂಟೇಸ್ವಾಮಿ ದೇವಾಲಯದಲ್ಲಿ ಚಿತ್ರೀಕರಣ ನಡೆಯಲಿದೆ. ಕನ್ನಡಕ್ಕೆ ಮೊದಲ ಗೌರವ ಎಂಬ ಹಾಡಿನ ಚಿತ್ರೀಕರಣವೂ ಇಲ್ಲೇ ನಡೆಯಲಿದೆ‘ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.