ADVERTISEMENT

Swathi Mutthina Male Haniye: ‘ಹಾಸ್‌ಪೈಸ್‌’ನೊಳಗಿನ ‘ಸ್ವಾತಿ ಮುತ್ತು..’

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2023, 0:30 IST
Last Updated 21 ನವೆಂಬರ್ 2023, 0:30 IST
ಸಿರಿ ರವಿಕುಮಾರ್‌ ಹಾಗೂ ರಾಜ್‌ ಬಿ.ಶೆಟ್ಟಿ 
ಸಿರಿ ರವಿಕುಮಾರ್‌ ಹಾಗೂ ರಾಜ್‌ ಬಿ.ಶೆಟ್ಟಿ    

ರಾಜ್‍ ಬಿ. ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು, ಸಿನಿಮಾ ನ.24ರಂದು ಬಿಡುಗಡೆಯಾಗುತ್ತಿದೆ. ಈ ಕಥೆ ಹುಟ್ಟಿದ ಬಗ್ಗೆ ರಾಜ್‌ ಇತ್ತೀಚೆಗೆ ಮಾಹಿತಿ ಬಿಚ್ಚಿಟ್ಟರು. 

‘ಈ ಕಥೆಯನ್ನು ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಆದ ನಂತರ ಬರೆದಿದ್ದೆ. ನಾನು ಸೋಷಿಯಲ್‌ ವರ್ಕ್‌ ವಿದ್ಯಾರ್ಥಿ. ಕಾಲೇಜು ದಿನಗಳಲ್ಲಿ ನಮನ್ನು ಮಾದಕ ವ್ಯಸನ ವರ್ಜನ ಶಿಬಿರಗಳಿಗೆ ಹಾಗೂ ‘ಹಾಸ್‌ಪೈಸ್‌’, ಎಂದರೆ ಗುಣ ಆಗದಂಥ ಕಾಯಿಲೆ ಇರುವವರು ತಂಗಿರುವ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದರು. ನಾವೆಲ್ಲರೂ ಶಾಶ್ವತ ಎಂದುಕೊಂಡೇ ಬದುಕುತ್ತಿರುತ್ತೇವೆ. ಆದರೆ ಶುಶ್ರೂಷೆ ನೀಡಿದರೂ, ಇಂದಲ್ಲ ನಾಳೆ ನಾವಿಲ್ಲ ಎನ್ನುವುದು ತಿಳಿದಿರುತ್ತದೆ. ಇದುವೇ ನನ್ನ ಕಥೆಗೆ ಆಧಾರ. ಇನ್ನು ಸ್ವಾತಿ ಮಳೆಯ ನೀರು ಆರೋಗ್ಯಕರ ಎಂದು ಆಯುರ್ವೇದ ಹೇಳುತ್ತದೆ. ಈ ಮಳೆಯ ನೀರು ಸರಿಯಾದ ಚಿಪ್ಪಿನೊಳಗೆ ಸೇರಿದರೆ ಮುತ್ತಾಗುತ್ತದೆ. ಎಲ್ಲ ಹನಿಗಳೂ ಮುತ್ತಾಗಬೇಕೆಂದಿಲ್ಲ. ಹಾಗೆಯೇ ಆ ಕೇಂದ್ರದೊಳಗೆ ಇರುವ ‘ಪ್ರೇರಣಾ’ ಎಂಬಾಕೆ ಮುತ್ತಾಗುತ್ತಾಳೆಯೇ ಎನ್ನುವುದು ಕಥೆ. ನಮ್ಮ ಚಿತ್ರದ ಕಥೆಗೆ ಈ ಶೀರ್ಷಿಕೆ ಸರಿ ಹೊಂದುವುದರಿಂದ ಇಟ್ಟಿದ್ದೇವೆ. ಇದರಲ್ಲಿ ನಾನು ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿರುವ ‘ಅನಿಕೇತ್’ ಎಂಬ ಪಾತ್ರ ಮಾಡಿದ್ದೇನೆ’ ಎನ್ನುತ್ತಾರೆ ರಾಜ್‌. 

ನಟಿ ರಮ್ಯಾ ಅವರ ಆ್ಯಪಲ್‍ ಬಾಕ್ಸ್ ಸ್ಟುಡಿಯೋಸ್‍, ಲೈಟರ್ ಬುದ್ಧ ಫಿಲ್ಮ್ಸ್‌ಸಹಯೋಗದೊಂದಿಗೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಕೆ.ಆರ್.ಜಿ. ಸ್ಟುಡಿಯೋಸ್‍ ಮೂಲಕ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. 

ADVERTISEMENT

ಚಿತ್ರದಲ್ಲಿ ‘ಪ್ರೇರಣಾ’ ಎಂಬ ಪಾತ್ರದಲ್ಲಿ ನಟಿ ಸಿರಿ ರವಿಕುಮಾರ್‌ ನಟಿಸಿದ್ದಾರೆ. 18 ದಿನಗಳಲ್ಲಿ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಮಿಥುನ್‍ ಮುಕುಂದನ್‍ ಸಂಗೀತ, ಪ್ರವೀಣ್‍ ಶ್ರೀಯಾನ್‍ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.