ADVERTISEMENT

ರಾಜಲಕ್ಷ್ಮಿಯ ಗ್ರಾಮಾಯಣ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 3:55 IST
Last Updated 12 ಜೂನ್ 2019, 3:55 IST
ರಶ್ಮಿ ಗೌಡ ಮತ್ತು ನವೀನ್‌ ತೀರ್ಥಹಳ್ಳಿ
ರಶ್ಮಿ ಗೌಡ ಮತ್ತು ನವೀನ್‌ ತೀರ್ಥಹಳ್ಳಿ   

ಸಿನಿಮಾವೊಂದು ಗೆದ್ದರೆ ಅದೇ ಜಾಡಿನಲ್ಲಿ ಸಾಗುವುದು ಗಾಂಧಿನಗರದ ಅಸಲಿ ಕಥೆ. ‘ರಾಜಾಹುಲಿ’ ಮತ್ತು ‘ಅಯೋಗ್ಯ’ ಚಿತ್ರ ಮಂಡ್ಯ ಸೊಗಡಿನ ಸಂಭಾಷಣೆಯಿಂದ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದು ಹಳೆಯ ಕಥೆ. ಈಗ ಇದೇ ಶೈಲಿಯಲ್ಲಿ ‘ರಾಜಲಕ್ಷ್ಮಿ’ ಚಿತ್ರದ ಕಥೆ ಹೇಳಲು ಸಜ್ಜಾಗಿದ್ದಾರೆ ನಿರ್ದೇಶಕ ಶ್ರೀಕಾಂತ್.

ವೃತ್ತಿಯಲ್ಲಿ ಅವರು ವಕೀಲ. ಕಥೆ ಬರೆಯುವ ಹವ್ಯಾಸವೇ ಅವರು ಚಿತ್ರರಂಗದ ಹೊಸ್ತಿಲು ತುಳಿಯಲು ಕಾರಣವಾಯಿತಂತೆ. ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡದೊಟ್ಟಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.

‘ಸಿನಿಮಾ ನಿರ್ದೇಶಿಸುವುದು ನನ್ನ ಕನಸು. ನಿರ್ಮಾಪಕರಿಗೆ ಹದಿನೇಳು ಕಥೆಗಳ ಬಗ್ಗೆ ಹೇಳಿದೆ. ಎಲ್ಲವನ್ನೂ ಅವರು ತಿರಸ್ಕರಿಸಿದರು. ಮಂಡ್ಯ ಶೈಲಿಯ ಕಥೆ ಹೇಳಿದ ತಕ್ಷಣವೇ ಒ‍ಪ್ಪಿಕೊಂಡರು. ಚಿತ್ರದಲ್ಲಿ ಪ್ರೀತಿಯ ಕಥನ ಇದೆ. ಜೊತೆಗೆ, ಅರ್ಥಪೂರ್ಣ ಸಂದೇಶವೂ ಇದೆ’ ಎಂದು ವಿವರಿಸಿದರು ಶ್ರೀಕಾಂತ್.

ADVERTISEMENT

ಗ್ರಾಮೀಣ ಜಗತ್ತಿನಲ್ಲಿ ನಡೆಯುವ ರಾಜಕೀಯದ ಸುತ್ತ ಕಥೆ ಹೆಣೆಯಲಾಗಿದೆಯಂತೆ. ಮಂಡ್ಯ ಜಿಲ್ಲೆಯಲ್ಲಿ ಶೂಟಿಂಗ್‌ ನಡೆಸಲಾಗಿದೆ.

ರಂಗಭೂಮಿ ನಟ ನವೀನ್‌ ತೀರ್ಥಹಳ್ಳಿ ಈ ಚಿತ್ರದ ನಾಯಕ. ಈಗಾಗಲೇ, ಅವರು ನಟಿಸಿರುವ ಎರಡು ಚಿತ್ರಗಳು ಬಿಡುಗಡೆಯ ಹಂತದಲ್ಲಿವೆ. ಕಾಲೇಜು ಹುಡುಗನಾಗಿ ಬಳಿಕ ರೈತನಾಗುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ನಿರೂಪಕಿ ರಶ್ಮಿ ಗೌಡ ಇದರ ನಾಯಕಿ. ನೋಡಲು ಸೈಲೆಂಟ್, ಮಾತಾಡಿದರೆ ವೈಲೆಂಟ್ ಆಗುವ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರಂತೆ.

ಕೆ.ಎಚ್. ಮೀಸೆಮೂರ್ತಿ, ಕಿರಣ್‌ಗೌಡ, ಮುತ್ತುರಾಜ್, ಹೊನ್ನವಳ್ಳಿ ಕೃಷ್ಣ, ಟೆನಿಸ್‌ ಕೃಷ್ಣ ತಾರಾಗಣದಲ್ಲಿದ್ದಾರೆ. ನಾಲ್ಕು ಹಾಡುಗಳಿಗೆ ಡಾ.ಶಮಿತಾ ಮಲ್ನಾಡ್ ಸಂಗೀತ ಸಂಯೋಜಿಸಿದ್ದಾರೆ. ನಾಗರಾಜ್‌ ಎಸ್. ಮೂರ್ತಿ ಅವರ ಛಾಯಾಗ್ರಹಣವಿದೆ.

ಎಸ್.ಕೆ. ಮೋಹನ್‌ಕುಮಾರ್ ಬಂಡವಾಳ ಹೂಡಿದ್ದಾರೆ. ಆಗಸ್ಟ್‌ನಲ್ಲಿ ಥಿಯೇಟರ್‌ಗೆ ಬರಲು ಚಿತ್ರತಂಡ ಸಿದ್ಧತೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.