ADVERTISEMENT

ರಾಜಮೌಳಿಯ ‘ಆರ್‌ಆರ್‌ಆರ್‌’ ಬಿಡುಗಡೆ ವಿಳಂಬಕ್ಕೆ ಅಸಲಿ ಕಾರಣವೇನು?

ರಾಮ್‌ಚರಣ್‌ ಜೊತೆಗೆ ನಟಿಸಿದ ಹಾಲಿವುಡ್‌ ನಟನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 8:58 IST
Last Updated 26 ಫೆಬ್ರುವರಿ 2020, 8:58 IST
‘ಆರ್‌ಆರ್‌ಆರ್‌’ ಚಿತ್ರದ ಪೋಸ್ಟರ್‌
‘ಆರ್‌ಆರ್‌ಆರ್‌’ ಚಿತ್ರದ ಪೋಸ್ಟರ್‌   

‘ಬಾಹುಬಲಿ’ ಚಿತ್ರದ ಬಳಿಕ ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ‘ಆರ್‌ಆರ್‌ಆರ್‌’ ನಿರೀಕ್ಷೆ ಹೆಚ್ಚಿಸಿರುವುದು ಎಲ್ಲರಿಗೂ ಗೊತ್ತಿದೆ. ಬ್ರಿಟಿಷರು ಮತ್ತು ಹೈದರಾಬಾದ್‌ನ ನಿಜಾಮರ ಆಡಳಿತದ ವಿರುದ್ಧ ಅಲ್ಲುರಿ ಸೀತಾರಾಮ ರಾಜು ಮತ್ತು ಕೋಮರಾಮ್‌ ಭೀಮ ನಡೆಸುವ ಹೋರಾಟದ ಕಥನವೇ ಈ ಚಿತ್ರ ಜೀವಾಳ. ಕೋಮರಾಮ್‌ ಭೀಮನಾಗಿ ಜೂನಿಯರ್‌ ಎನ್‌ಟಿಆರ್‌ ನಟಿಸಿದ್ದರೆ; ಸೀತಾರಾಮ ರಾಜನ ಪಾತ್ರದಲ್ಲಿ ರಾಮ್‌ಚರಣ್‌ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ಅಲಿಯಾ ಭಟ್‌ ಮತ್ತು ಅಜಯ್‌ ದೇವಗನ್‌ ಕೂಡ ಮುಖ್ಯಭೂಮಿಕೆಯಲ್ಲಿದ್ದಾರೆ.

ಈ ವರ್ಷದ ಜುಲೈ ಅಂತ್ಯದಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ ಎಂದು ಚಿತ್ರತಂಡವೇ ಹೇಳಿತ್ತು. ಆದರೆ, ಮೂರು ವಾರದ ಹಿಂದೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಿ ಅಚ್ಚರಿ ಮೂಡಿಸಿತ್ತು. ತಂಡದ ಈ ನಿರ್ಧಾರಕ್ಕೆ ಜೂನಿಯರ್‌ ಎನ್‌ಟಿಆರ್‌ ಮತ್ತು ರಾಮ್‌ಚರಣ್‌ ಅಭಿಮಾನಿಗಳು ಬೇಸರಗೊಂಡಿದ್ದು ಉಂಟು. ಆದರೆ, ನೈಜ ಕಾರಣವೇನೆಂಬುದನ್ನು ಚಿತ್ರತಂಡ ತಿಳಿಸಿರಲಿಲ್ಲ. ಈಗ ಟಾಲಿವುಡ್‌ ಪಡಸಾಲೆಯಿಂದಲೇ ನೈಜ ಕಾರಣ ಹೊರಬಿದ್ದಿದೆ.

ಶೂಟಿಂಗ್‌ ವೇಳೆ ಹಾಲಿವುಡ್‌ ನಟರೊಬ್ಬರು ತೀವ್ರಗಾಯಗೊಂಡಿದ್ದು, ದೀರ್ಘಸಮಯದ ವಿಶ್ರಾಂತಿಯಲ್ಲಿದ್ದಾರಂತೆ. ಈ ನಟ ರಾಮ್‌ಚರಣ್‌ ಜೊತೆಗೆ ಹಲವು ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರ ಶೂಟಿಂಗ್‌ ಇನ್ನೂ ಪೂರ್ಣಗೊಂಡಿಲ್ಲ. ಆ ನಟ ವಿಶ್ರಾಂತಿಯಿಂದ ಮರಳಿದ ಬಳಿಕವಷ್ಟೇ ಶೂಟಿಂಗ್ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಹಾಗಾಗಿ, 2021ರ ಜ. 8ಕ್ಕೆ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ.

ADVERTISEMENT

1920ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದೆ. ಆ ಕಾಲಕ್ಕೆ ತಕ್ಕಂತೆ ಅದ್ದೂರಿಯಾಗಿ ಸೆಟ್‌ ನಿರ್ಮಿಸಿ ಚಿತ್ರೀಕರಣ ನಡೆಸಲಾಗುತ್ತಿದೆ. 2018ರ ನವೆಂಬರ್‌ನಲ್ಲಿ ಶೂಟಿಂಗ್‌ ಆರಂಭಗೊಂಡಿದ್ದು, ಇದರ ಬಜೆಟ್‌ ₹ 300 ಕೋಟಿ. ತೆಲುಗು, ಹಿಂದಿ, ತೆಲುಗು, ಮಲಯಾಳ ಸೇರಿದಂತೆ ಹತ್ತು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ತೆಲುಗಿನ ‘ಸೈರಾ ನರಸಿಂಹರೆಡ್ಡಿ’ ಚಿತ್ರ ಸೇರಿದಂತೆ ತಮಿಳಿನ ಹಲವು ಚಿತ್ರಗಳೂ ಕನ್ನಡದಲ್ಲಿಯೂ ಡಬ್ಬಿಂಗ್‌ ಆಗಿ ಬಿಡುಗಡೆಯಾಗಿವೆ. ಹಾಗಾಗಿ, ‘ಆರ್‌ಆರ್‌ಆರ್‌’ ಕೂಡ ಕನ್ನಡದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಡಿವಿವಿ ಎಂಟರ್‌ಟೈನ್‌ಮೆಂಟ್ಸ್‌ನಡಿ ಡಿ.ವಿ.ವಿ. ದಾನಯ್ಯ ಇದಕ್ಕೆ ಬಂಡವಾಳ ಹೂಡಿದ್ದಾರೆ. ಕೆ.ಕೆ. ಸೆಂಥಿಲ್‌ ಕುಮಾರ್‌ ಅವರ ಛಾಯಾಗ್ರಹಣವಿದೆ. ಎಂ.ಎಂ. ಕೀರ್ವಾಣಿ ಸಂಗೀತ ನೀಡಿದ್ದಾರೆ. ಎ. ಶ್ರೀಕರ್‌ಪ್ರಸಾದ್‌ ಸಂಕಲನ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.