ADVERTISEMENT

ರಜನೀಕಾಂತ್‌: ₹ 600 ಕೋಟಿ ವೆಚ್ಚದ 2.0 ಸಿನಿಮಾ ಇದೇ 29ರಂದು ತೆರೆಗೆ

ಕೆ.ಎಚ್.ಓಬಳೇಶ್
Published 3 ನವೆಂಬರ್ 2018, 16:17 IST
Last Updated 3 ನವೆಂಬರ್ 2018, 16:17 IST
   

ಚೆನ್ನೈ:‘ಸೂಪರ್‌ಸ್ಟಾರ್‌‘ ರಜನೀಕಾಂತ್‌ ಮತ್ತು ನಟ ಅಕ್ಷಯ್‌ಕುಮಾರ್‌ ನಟಿಸಿರುವ ‘2.0’ ಚಿತ್ರ ಇದೇ 29ರಂದು ವಿಶ್ವದಾದ್ಯಂತ ಏಕಕಾಲಕ್ಕೆ ತೆರಕಾಣಲಿದೆ.

ಆರು ನೂರು ಕೋಟಿ ರೂಪಾಯಿ ವೆಚ್ಚದಡಿ ನಿರ್ಮಿಸಿರುವ ಈ ಚಿತ್ರವನ್ನು ಎಸ್‌. ಶಂಕರ್‌ ನಿರ್ದೇಶಿಸಿದ್ದಾರೆ. ತಮಿಳು,ಹಿಂದಿ ಮತ್ತು ತೆಲುಗಿನಲ್ಲಿ ಚಿತ್ರ ನಿರ್ಮಾಣಗೊಂಡಿದೆ. ಸುಭಾಷ್‌ಕರನ್ ಆರ್ಥಿಕ ಇಂಧನ ಒದಗಿಸಿದ್ದಾರೆ.

ಇಲ್ಲಿನ ಸತ್ಯ ಚಿತ್ರಮಂದಿರದಲ್ಲಿ ಶನಿವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಚಿತ್ರದ 3ಡಿಇ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಯಿತು.

ADVERTISEMENT

‘ಎಂಟು ವರ್ಷದ ಹಿಂದೆ ತೆರೆಕಂಡ ಎಂದಿರನ್‌ ಚಿತ್ರ ಕೂಡ ವಿಶ್ವದಾದ್ಯಂತ ಮ್ಯಾಜಿಕ್‌ ಮಾಡಿತ್ತು. ಈ ಚಿತ್ರದಲ್ಲೂ ನನ್ನ ಮ್ಯಾಜಿಕ್‌ ಮುಂದುವರಿಯಲಿದೆ. ಚಿತ್ರ ಸೂಪರ್‌ ಹಿಟ್‌ ಆಗುವುದು ನಿಶ್ಚಿತ‘ ಎಂದು ನಟ ರಜನೀಕಾಂತ್‌ ವಿಶ್ವಾಸ ವ್ಯಕ್ತಪಡಿಸಿದರು.

ಆಧುನಿಕ ಯುಗದಲ್ಲಿ ತಂತ್ರಜ್ಞಾನ ನಮ್ಮನ್ನು ಆಳುತ್ತಿದೆ. ಅದು ಮನುಕುಲದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತದೆ ಎನ್ನುವುದೇ ಚಿತ್ರದ ತಿರುಳು. ಇದನ್ನು ಶಂಕರ್‌ ರಂಜನೀಯವಾಗಿ ಹೇಳಿದ್ದಾರೆ. ಆರಂಭದಲ್ಲಿ₹ 350ಕೋಟಿ ವೆಚ್ಚದಡಿ ಚಿತ್ರ ನಿರ್ಮಿಸುವ ಯೋಜನೆ ಇತ್ತು. ದುಪ್ಪಟ್ಟು ಹಣ ಖರ್ಚಾಗಿದೆ. ಈ ಚಿತ್ರದ ಪ್ರಚಾರ ಬೇಕಿಲ್ಲ. ಸಿನಿಮಾ ನೋಡಿದ ಪ್ರೇಕ್ಷಕರು,ಅಭಿಮಾನಿಗಳೇ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು.

ಅಕ್ಷಯ್‌ಕುಮಾರ್‌ ಅವರ ಅಭಿನಯವೂ ಸೊಗಸಾಗಿದೆ. ಶಂಕರ್‌ ಅವರ ಪರಿಶ್ರಮವೂ ಇದರಲ್ಲಿ ಬೆರೆತಿದೆ ಎಂದರು.

ನಿರ್ದೇಶಕ ಶಂಕರ್ ಮಾತನಾಡಿ, ‘ಎಂದಿರನ್‌ ಚಿತ್ರದಲ್ಲಿ ರಜನಿ ಸರ್‌ ನಟನೆ ಮನೋಜ್ಞವಾಗಿತ್ತು. ಇದರಲ್ಲಿಯೂ ಆ ಮೊನಚು ಉಳಿದುಕೊಂಡಿದೆ. ಚಿಟ್ಟಿಯಾಗಿ ಅವರ ಅಭಿನಯ ಪ್ರೇಕ್ಷಕರಿಗೆ ಮೋಡಿ ಮಾಡಲಿದೆ ಎಂದು ಹೇಳಿದರು.

ನಟಿ ಆ್ಯಮಿ ಜಾಕ್ಷನ್, ‘ರಜನೀಕಾಂತ್‌ ಅವರೊಟ್ಟಿಗೆ ಕೆಲಸ ಮಾಡುವ ಮೊದಲು ಸ್ವಲ್ಪ ಆತಂಕಗೊಂಡಿದ್ದೆ. ಆದರೆ,ಚಿತ್ರತಂಡದ ಸಹಕಾರದಿಂದ ನಟನೆ ಸುಲಭವಾಯಿತು’ ಎಂದು ಹೇಳಿದರು.

ಚಿಟ್ಟಿಯೊಂದಿಗೆ ರೊಮ್ಯಾನ್ಸ್‌ ಮಾಡಲು ನಿಮಗಿಷ್ಟವೇ ಎಂಬ ಪ್ರೇಕ್ಷಕರ ಪ್ರಶ್ನೆಗೆ, ‘ಚಿಟ್ಟಿಯೊಂದಿಗೆ ನಟಿಸಿದ್ದೇನೆ. ನೀವು ಚಿತ್ರ ನೋಡಿದರೆ ನನ್ನ ನಟನೆಯ ಅರಿವಾಗುತ್ತದೆ’ ಎಂದು ಉತ್ತರಿಸಿದರು.

ಅಕ್ಷಯ್ ತಮಿಳು ನುಡಿ

ಈ ಚಿತ್ರದಲ್ಲಿ ಅಕ್ಷಯ್‌ ಕುಮಾರ್ ಅತಿಮಾನುಷ ಶಕ್ತಿಯ ರೂಪದಲ್ಲಿರುವ ಖಳನಟನಾಗಿ ನಟಿಸಿದ್ದಾರೆ. ತಮಿಳಿನಲ್ಲಿಯೇ ಮಾತನಾಡಿ ಪ್ರೇಕ್ಷಕರ ಮನಸೂರೆಗೊಂಡರು.

‘ನಾನು ತಮಿಳಿನಲ್ಲಿಯೇ ಮಾತನಾಡುತ್ತೇನೆ. ಇದಕ್ಕಾಗಿ ಮೂರು ತಾಸು ಕಷ್ಟಪಟ್ಟಿದ್ದೇನೆ ಎಂದ ಅವರು, ‘ಚೆನ್ನೈನ ಜನರಿಗೆ ನನ್ನ ವಂದನೆಗಳು. ಈ ಚಿತ್ರಕ್ಕೆ ನೀವೆಲ್ಲರೂ ಪ್ರೋತ್ಸಾಹ ನೀಡಬೇಕು’ ಎಂದರು.

‘ನನ್ನ ತಂದೆ ಸೇನೆಯಲ್ಲಿದ್ದರು. ಅವರಿಂದ ನಾನು ಶಿಸ್ತು ಕಲಿತೆ. ಪ್ರತಿದಿನ ಬೆಳಿಗ್ಗೆ 4ಗಂಟೆಗೆ ಏಳುತ್ತೇನೆ. ತಪ್ಪದೇ ವ್ಯಾಯಾಮ ಮಾಡುತ್ತೇನೆ. ಇದೇ ನನ್ನ ಫಿಟ್‌ನೆಸ್‌ ಗುಟ್ಟು‘ ಎಂದು ಹೇಳಿದರು.

ರೆಹಮಾನ್‌ಗೆ ರಜನಿಯೇ ಹೀರೊ

‘ನಿಮ್ಮ ನೆಚ್ಚಿನ ಹೀರೊ ಯಾರು’ ಎಂಬ ಪ್ರಶ್ನೆ ಸಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್‌ಗೆ ಎದುರಾಯಿತು. ತುಟಿಯಂಚಿಯನಲ್ಲಿ ನಗು ತುಂಬಿಕೊಂಡ ಅವರು,ವೇದಿಕೆಯ ಕೆಳಗೆ ಆಸೀನರಾಗಿದ್ದ ರಜನೀಕಾಂತ್‌ ಅವರತ್ತ ನೋಡಿದರು. ‘ಸೂಪರ್‌ಸ್ಟಾರ್‌ ಅವರೇ ನನ್ನ ನಿಜವಾದ ಹೀರೊ. ಅವರ ಕಾರ್ಯದಕ್ಷತೆ,ಆಧ್ಯಾತ್ಮಿಕ ಜ್ಞಾನ ನನಗಿಷ್ಟ’ ಎಂದು ಹೇಳಿದರು.

‘ಸಂಗೀತವೇ ನನ್ನ ಉಸಿರು. ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಿದ್ದರಿಂದ 2.0 ಚಿತ್ರಕ್ಕೆ ಸಂಗೀತ ನೀಡುವ ವೇಳೆ ಎದುರಾದ ಒತ್ತಡವನ್ನು ನಿಭಾಯಿಸಲು ಸಾಧ್ಯವಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.