ADVERTISEMENT

ರಜನೀಕಾಂತ್: ಶಕ್ತಿಯಾಗಿ ಬೆಳೆದ ಬಂಡಾಯ ನಟ

ಗಂಗಾಧರ ಮೊದಲಿಯಾರ್
Published 1 ಏಪ್ರಿಲ್ 2021, 19:30 IST
Last Updated 1 ಏಪ್ರಿಲ್ 2021, 19:30 IST
ರಜನೀಕಾಂತ್‌
ರಜನೀಕಾಂತ್‌   

ಶಿವಾಜಿರಾವ್‍ ಗಾಯಕವಾಡ್, ಸಿನಿಮಾ ಗೀಳು ಅಂಟಿಸಿಕೊಂಡ ಉತ್ಸಾಹಿ ಯುವಕ. ಬೆಂಗಳೂರಿನ ಹನುಮಂತನಗರ-ಶಿವಾಜಿನಗರ ಮಾರ್ಗದಲ್ಲಿ ಓಡಾಡುವ ಬಿಟಿಎಸ್ ಬಸ್‍ನಲ್ಲಿ ಟಿಕೆಟ್... ಟಿಕೆಟ್... ಎನ್ನುತ್ತಾ ಆಸಕ್ತಿಯೇ ಇಲ್ಲದ ಕೆಲಸದಲ್ಲಿ ಯಾಂತ್ರಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಲ. ಬಿಡುವಾದಾಗಲೆಲ್ಲಾ ರಂಗಮಂದಿರದ ಮುಂದೆ, ಗಾಂಧೀನಗರದಲ್ಲಿ ನಿರ್ಮಾಪಕರ ಕಚೇರಿಗಳ ಮುಂದೆ ಎಡತಾಕುತ್ತಾ, ಅವಕಾಶಕ್ಕಾಗಿ ಅಂಗಲಾಚುತ್ತಾ, ತಾತ್ಸಾರ, ಅಪಮಾನಗಳನ್ನು ನುಂಗುತ್ತಾ ಸಿನಿಮಾದಲ್ಲಿ ಅಭಿನಯಿಸುವ ಕನಸನ್ನು ಕಾಣುತ್ತಾ ಓಡಾಡುತ್ತಿದ್ದ ಕಾಲ. ಒಮ್ಮೆ, ಬಿಟಿಎಸ್ ಬಸ್, ಕಾರ್ಪೋರೇಷನ್ ದಾಟಿ, ವಿಧಾನಸೌಧದತ್ತ ಬರುತ್ತಿರುವಾಗ ಕಡೆಯ ಸೀಟ್‍ನಲ್ಲಿ ಕುಳಿತಿದ್ದ ಅಜ್ಜನತ್ತ ಶಿವಾಜಿರಾವ್ ಗಮನ ಹೋಯಿತು. ಅರೆ, ಈ ಅಜ್ಜನನ್ನು ಬಿಟ್ಟೆನಲ್ಲಾ ಎಂದು ಅವರತ್ತ ಧಾವಿಸಿ, ‘ಎಲ್ಲಿಗೆ ಅಜ್ಜ?’ ಎಂದು ಕೇಳಿದರು.

ಅಜ್ಜನ ದೃಷ್ಟಿ ಶಿವಾಜಿರಾವ್ ಅವರತ್ತ ಹೊರಳಿತು. ಆಶೀರ್ವದಿಸುವಂತೆ ಕೈ ತೋರಿದರು. ಇವರನ್ನು ಎಲ್ಲೋ ನೋಡಿದಂತಿದೆಯಲ್ಲ ಎಂಬ ತಾಕಲಾಟದಲ್ಲಿ ಶಿವಾಜಿರಾವ್ ಅವರಿಗೆ ಏನಾಗುತ್ತಿದೆ ಎಂದು ಗೊತ್ತಾಗಲಿಲ್ಲ. ಅಲ್ಲಿಂದ ಮುಂದೆ ಬಂದು ಬಿಟ್ಟರು, ಟಿಕೆಟ್ ಕೊಡಲೇ ಇಲ್ಲವಲ್ಲ ಎಂದು ಮತ್ತೆ ಹಿಂದಕ್ಕೆ ಹೊರಳಿ ನೋಡಿದಾಗ ಅಚ್ಚರಿ ಕಾದಿತ್ತು. ಅಲ್ಲಿ ಅಜ್ಜ ಇರಲೇ ಇಲ್ಲ!

ವಾಸ್ತವ ಜಗತ್ತಿಗೆ ಮರಳಿದಾಗ, ಬಸ್‍ನಲ್ಲಿ ದರ್ಶನ ನೀಡಿದ್ದು, ಸಾಕ್ಷಾತ್ ಶ್ರೀ ರಾಘವೇಂದ್ರ ಸ್ವಾಮಿಗಳು ಎಂಬುದು ಶಿವಾಜಿರಾವ್ ಅವರಿಗೆ ಅರಿವಾಯಿತಂತೆ. ಇದನ್ನು ‘ಪ್ರಜಾವಾಣಿ’ ಸಂದರ್ಶನವೊಂದರಲ್ಲಿ ಅವರೇ ನೆನಪಿಸಿಕೊಂಡಿದ್ದಾರೆ.

ADVERTISEMENT

ಮರುದಿನವೇ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಅವರಿಂದ ಕರೆ ಬಂತು. ಮದ್ರಾಸಿಗೆ ತೆರಳಿ, ಅವರಿಂದಲೇ ರಜನೀಕಾಂತ್ ಎಂದು ನಾಮಕರಣಗೊಂಡು, ‘ಅಪೂರ್ವ ರಾಗಂಗಳ್’ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಆಯ್ಕೆಗೊಂಡು, ಖಳಛಾಯೆಯ ನಾಯಕ ಪಾತ್ರದಲ್ಲೇ ಯಶಸ್ಸು ಕಂಡರಲ್ಲದೆ, ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರರಾದರು. ಯಶಸ್ಸು ಅವರನ್ನು ಹಿಂಬಾಲಿಸಿತು. ಅದೇ ದಾರಿಯಲ್ಲಿ ಸೂಪರ್‌ಸ್ಟಾರ್ ಪಟ್ಟವೂ ಸಿಕ್ಕಿತು. ರಾಜಕೀಯವಾಗಿಯೂ ಬಲಾಢ್ಯರಾದರು. ಒಂದು ಶಕ್ತಿಯಾಗಿ ಬೆಳೆದರು. ಏಷ್ಯಾದಲ್ಲಿ ಜಾಕಿಚಾನ್ ನಂತರ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಶಿಖರ ತಲುಪಿದರು.

ತಮ್ಮ ಬೆಳವಣಿಗೆಗೆ ಅಂದು ಬಿಟಿಎಸ್‍ನಲ್ಲಿ ಕಂಡ ರಾಘವೇಂದ್ರರೇ ಕಾರಣ ಎಂದು ರಜನಿ ಭಾವಿಸಿದ್ದಾರೆ. ಅದಕ್ಕಾಗಿಯೇ ಅವರ ನೂರನೇ ಚಿತ್ರ ‘ಶ್ರೀ ರಾಘವೇಂದ್ರರ್’ ನಿರ್ಮಿಸಿ ಕಾಣಿಕೆ ಸಲ್ಲಿಸಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ವರ್ಣಮಯ ಪುಟಗಳನ್ನು ಹೊಂದಿರುವ ರಜನೀಕಾಂತ್ ಅವರಿಗೆ ಪ್ರತಿಷ್ಠಿತ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ ಸಂದಿದೆ. ಇಡೀ ದೇಶದ ಎಲ್ಲ ಕಡೆಯಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ. ದೇಶವೇ ಸಂಭ್ರಮಿಸುವುದಕ್ಕೆ ಕಾರಣವಿದೆ. ಅವರನ್ನು ಎಲ್ಲರೂ ನಮ್ಮವರು ಎಂದೇ ಭಾವಿಸಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ (ಜನನ: 1950) ಬೆಳೆದು, ವೃತ್ತಿಯಲ್ಲಿದ್ದು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಈ ಕಾರಣದಿಂದ ಅವರು ನಮ್ಮವರು. ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ‘ಕಥಾಸಂಗಮ’ದಲ್ಲಿ (1975) ಗಮನಸೆಳೆಯುವ ಪಾತ್ರದಲ್ಲಿ ಕಾಣಿಸಿಕೊಂಡರು. ಸಹೋದರರ ಸವಾಲ್ (1977), ಗಲಾಟೆ ಸಂಸಾರ (1977), ಕಿಲಾಡಿ ಕಿಟ್ಟ (1978) ಚಿತ್ರಗಳಲ್ಲಿ ಸವಾಲು ಹಾಕುವ ಪಾತ್ರಗಳಲ್ಲಿ ನಟಿಸಿದರು. ಹೀಗಾಗಿ ಅವರಿಗೆ ಕನ್ನಡದ ನಂಟು.

ಅವರದು ಮರಾಠಿ ಮಾತೃಭಾಷೆ ಆಗಿರುವುದರಿಂದ ಮರಾಠಿಗರಲ್ಲಿ ಸಂಭ್ರಮ. ‘ಅಂಧಾ ಕಾನೂನ್’ ಹಿಂದಿ ಚಿತ್ರದಲ್ಲಿ ಚಕಿತಗೊಳಿಸುವ ಅಭಿನಯದಿಂದಾಗಿ ಹಿಂದಿ ಪ್ರಾಂತ್ಯದಲ್ಲೂ ನೆಚ್ಚಿನ ನಟ. ರೋಬೊ, 2.0 ಸಿನಿಮಾ ಕೂಡ ತಾಂತ್ರಿಕ ವೈಭವದಿಂದ ಹಾಲಿವುಡ್ ಚಿತ್ರಗಳಿಗೆ ಸರಿಸಮನಾಗಿ ತಯಾರಾಗಿ ರಜನೀಕಾಂತ್ ಮನೆಮಾತಾದರು. ಆಂಧ್ರದಲ್ಲೂ ಅವರಿಗೆ ಬೇಡಿಕೆ. ಮಲಯಾಳಂ ಪ್ರೇಕ್ಷಕರಿಗೂ ಪ್ರಿಯ. ಅಷ್ಟೇ ಏಕೆ ಜಪಾನಿಯರಿಗೂ ರಜನೀ ಎಂದರೆ ಅಚ್ಚುಮೆಚ್ಚು. ‘ಮುತ್ತು’ ಎಂಬ ರಜನೀ ಅಭಿನಯದ ಚಿತ್ರ ಜಪಾನ್‌ನಲ್ಲಿ ಅತ್ಯಧಿಕ ಕಲೆಕ್ಷನ್ ಮಾಡಿದ ಚಿತ್ರವಾಗಿ ದಾಖಲೆ ಸೃಷ್ಟಿಸಿದೆ. ಅಲ್ಲಿಗೆ ಫಾಲ್ಕೆ ಪ್ರಶಸ್ತಿ ಸೂಕ್ತ ವ್ಯಕ್ತಿಗೆ ಸಂದ ಸೂಕ್ತ ಪ್ರಶಸ್ತಿ. ಆದರೆ ಪ್ರಶಸ್ತಿ ಬಂದ ಸಮಯ ಮಾತ್ರ ಸ್ವಲ್ಪ ಅನುಮಾನಕ್ಕೆ ಕಾರಣವಾಗಿದೆ.

ರಾಜಕೀಯ ಲೆಕ್ಕಾಚಾರದ ಪ್ರಕಾರ, ರಜನೀಕಾಂತ್ ಅಂದುಕೊಂಡಂತೆಯೇ ನಡೆದಿದ್ದರೆ ಅವರು ಇಷ್ಟೊತ್ತಿಗೆ ಚುನಾವಣಾ ಕಣದಲ್ಲಿ ದೂಳೆಬ್ಬಿಸಬೇಕಿತ್ತು. ಡಿಎಂಕೆ ಮತ್ತು ಅಣ್ಣಾ ಡಿಎಂಕೆಗೆ ಪರ್ಯಾಯ ಶಕ್ತಿಯಾಗಿ ಪಕ್ಷ ಕಟ್ಟುವ ತರಾತುರಿಯಲ್ಲಿ ಡಿಸೆಂಬರ್‌ನಲ್ಲಿ ಪಕ್ಷ ಘೋಷಿಸುವ ಹೇಳಿದ್ದ ರಜನಿ, ಆರೋಗ್ಯದ ಕಾರಣ ನೀಡಿ ಹಿಂದೆ ಸರಿದರು. ಮೋದಿ ಬಗ್ಗೆ ಒಲವಿದ್ದ ಲಕ್ಷಣಗಳನ್ನು ಆಗಾಗ ತೋರಿಸುತ್ತಿದ್ದ ರಜನೀ, ಯುದ್ಧರಂಗದಿಂದ ಹಿಂದೆ ಸರಿಯಲು ನಿಜವಾದ ಕಾರಣ ನಿಗೂಢ. ಆದರೆ ಮತದಾನಕ್ಕೆ ದಿನಗಳು ಸಮೀಪಿಸುತ್ತಿರುವಾಗ ಪ್ರಕಟವಾದ ಪ್ರಶಸ್ತಿ ಕಾಕತಾಳೀಯವೋ, ರಾಜಕೀಯ ದಾಳವೋ ಅರ್ಥವಾಗುವುದಿಲ್ಲ.

ಚಿತ್ರರಂಗದಲ್ಲಿರುವ ಎಲ್ಲ ಸಾಂಪ್ರದಾಯಿಕ ಚೌಕಟ್ಟುಗಳನ್ನು ಮೀರಿ, ಅದರಿಂದ ಹೊರಬಂದು ರಜನೀಕಾಂತ್ ದಾಖಲೆ ಸೃಷ್ಟಿಸಿದ್ದಾರೆ. ಇವರನ್ನು ಬಂಡಾಯ ನಟ ಎಂದೂ ಕರೆಯಬಹುದು. ನಾಯಕನಟನೊಬ್ಬ ರಾಮನಂತೆಯೇ ಇರಬೇಕು ಎಂಬ ಚೌಕಟ್ಟನ್ನು ಒಡೆದು ಬಿಸಾಕಿದ ನಟ ರಜನೀಕಾಂತ್. ಕೆದರಿದ ತಲೆ, ಗುಂಡಿ ಹಾಕದ ಷರ್ಟು, ಸದಾ ಬಾಯಲ್ಲಿ ಸಿಗರೇಟು, ಸುರುಳಿಸುರುಳಿಯಾಗಿ ಬಿಡುವ ಹೊಗೆ, ಕೂಲಿಂಗ್‍ಗ್ಲಾಸ್, ಕುರುಚಲು ಗಡ್ಡ ಹೀಗೆ ಒರಟು ಪಾತ್ರದಲ್ಲೇ ಜನರನ್ನು ಸೆಳೆದ ನಟ. ಖಳ ಇಮೇಜನ್ನೇ ಜನ ಇವರಿಂದ ಬಯಸುತ್ತಿದ್ದರು. ಅದೇ ಇಮೇಜು ಅವರನ್ನು ‘ಸ್ಟೈಲ್‍ಕಿಂಗ್’ ಆಗಿ ಪರಿವರ್ತಿಸಿತು. ಸಿನಿಮಾದಲ್ಲಿ ಹೀಗೆ. ಇನ್ನು ಹೊರಜಗತ್ತಿನಲ್ಲೂ ಸರಳತೆ ಇವರದೇ ಶೈಲಿ. ಎಂಜಿಆರ್ ಮೇಕಪ್ ಇಲ್ಲದೆ ಹೊರಗೆ ಕಾಲಿಡುತ್ತಿರಲಿಲ್ಲ. ರಜನೀಕಾಂತ್ ಬೋಳುತಲೆಯಲ್ಲೇ ಓಡಾಡುತ್ತಿದ್ದಾರೆ. ಗಡ್ಡವನ್ನೂ ತೆಗೆಯುವುದಿಲ್ಲ. ಈ ಸರಳತೆಯೇ ಅವರನ್ನು ಸೂಪರ್‌ ಸ್ಟಾರ್‌ ಪಟ್ಟಕ್ಕೆ ಕರೆದೊಯ್ದಿದೆ.

ಇನ್ನು ನಿರ್ಮಾಪಕರಿಗೂ, ವಿತರಕರಿಗೂ ಅವರು ಮಹಾದಾನಿ. ಅವರದೇ ನಿರ್ಮಾಣದ ‘ಬಾಬಾ’ ಗಳಿಕೆಯಲ್ಲಿ ವಿಫಲವಾದಾಗ ವಿತರಕರಿಗಾದ ನಷ್ಟ ಭರಿಸಿದ್ದರು. ಶಿವಾಜಿ ಗಣೇಶನ್ ಅವರ ಮೇಲಿನ ಅಭಿಮಾನದಿಂದ ಅವರ ಪುತ್ರ ಶಿವಾಜಿ ಪ್ರಭು ನಿರ್ಮಿಸಿದ ‘ಚಂದ್ರಮುಖಿ’ ಚಿತ್ರಕ್ಕೆ ಒಂದು ರೂಪಾಯಿ ಸಂಭಾವನೆ ಪಡೆದು ಅಭಿನಯಿಸಿದರು. ಈ ಚಿತ್ರ ತಮಿಳು ಚಿತ್ರರಂಗದಲ್ಲಿ ದಾಖಲೆ ಪ್ರದರ್ಶನ ಕಂಡಿತು. 63 ವರ್ಷಗಳ ಹಿಂದೆ ‘ಹರಿದಾಸ’ ಎಂಬ ಚಲನಚಿತ್ರ ಸತತವಾಗಿ 112 ವಾರ ಪ್ರದರ್ಶನ ಕಂಡು ದಾಖಲೆ ಸೃಷ್ಟಿಸಿತು. ರಜನೀ ಅಭಿನಯದ ‘ಚಂದ್ರಮುಖಿ’ ಆ ದಾಖಲೆಯನ್ನು ಮುರಿಯಿತು. 70ನೇ ವಯಸ್ಸಿನಲ್ಲೂ ರಜನೀಕಾಂತ್ ಕ್ರಿಯಾಶೀಲ. ಕಬಾಲಿ, ಪೇಟಾ, ಕಾಳಾ ಚಿತ್ರಗಳು ಒಂದರ ಹಿಂದೆ ಒಂದರಂತೆ ಬಂದಿವೆ. ಬಸ್ ಕಂಡಕ್ಟರ್ ಒಬ್ಬ ಈ ರೀತಿ ಒಂದು ಶಕ್ತಿಯಾಗಿ ಬೆಳೆದದ್ದೇ ಸೋಜಿಗದ ಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.