ಬ್ಲಿಂಕ್ ಚಿತ್ರದ ಪೋಸ್ಟರ್
ಬೆಂಗಳೂರು: ಕನ್ನಡದ ‘ಬ್ಲಿಂಕ್’ ಸಿನಿಮಾ ರಾಜಸ್ಥಾನ ಚಲನಚಿತ್ರೋತ್ಸವದಲ್ಲಿ ಒಟ್ಟು ಎಂಟು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.
ಈ ಬಗ್ಗೆ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿನಿಮಾದ ನಿರ್ದೇಶಕ ಶ್ರೀನಿಧಿ ಬೆಂಗಳೂರು, ‘ಬ್ಲಿಂಕ್ ಸಿನಿಮಾ ರಾಜಸ್ಥಾನ ಚಲನಚಿತ್ರೋತ್ಸವದಲ್ಲಿ ಎಂಟು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ನಿಮ್ಮ ಪ್ರೀತಿ ಹಾರೈಕೆಗೆ ಸಾವಿರ ಶರಣು’ ಎಂದು ಬರೆದುಕೊಂಡಿದ್ದಾರೆ.
‘ಉತ್ತಮ ಬರವಣಿಗೆ, ಉತ್ತಮ ಛಾಯಾಗ್ರಾಹಕ, ಉತ್ತಮ ನಟ, ಉತ್ತಮ ಖಳನಾಯಕ(ಕಿ), ಉತ್ತಮ ಪೋಷಕ ಪಾತ್ರ, ಉತ್ತಮ ಸಿನೆಮಾ, ಉತ್ತಮ ಹಿನ್ನೆಲೆ ಗಾಯಕ ಮತ್ತು ಗಾಯಕಿ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ’ ಎಂದು ಅವರು ತಿಳಿಸಿದ್ದಾರೆ.
ಮಾರ್ಚ್‌ನಲ್ಲಿ ತೆರೆಕಂಡ 'ಬ್ಲಿಂಕ್', ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರ ಚೊಚ್ಚಲ ಚಿತ್ರ. ವೈಜ್ಞಾನಿಕ, ಟೈಂ ಟ್ರಾವೆಲರ್‌ನ ಕಥಾಹಂದರವಿರುವ ಈ ಸಿನಿಮಾ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು. ಒಟಿಟಿಯಲ್ಲಿಯೂ ಭಾರಿ ಸದ್ದು ಮಾಡಿತ್ತು.
ಚಿತ್ರದಲ್ಲಿ ನಟ ದೀಕ್ಷಿತ್ ಶೆಟ್ಟಿ, ವಜ್ರದೀರ್ ಜೈನ್, ಚೈತ್ರಾ ಜೆ.ಆಚಾರ್, ಮಂದಾರ, ಗೋಪಾಲ ಕೃಷ್ಣ ದೇಶಪಾಂಡೆ, ಯಶಸ್ವಿನಿ ರಾವ್, ಕಿರಣ್ ನಾಯ್ಕ್, ಸುರೇಶ್ ಅನಗಳ್ಳಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದೇ ತಿಂಗಳು 28ರಂದು ಜೈಪುರದ ದೀಪ್ ಸ್ಮೃತಿ ಆಡಿಟೋರಿಯಂನಲ್ಲಿ ರಾಜಸ್ಥಾನ ಚಲಚಿತ್ರೋತ್ಸವದ 12ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.