ADVERTISEMENT

Coolie Movie: ಆಗಸ್ಟ್‌ನಲ್ಲಿ ‘ಕೂಲಿ’ ಟ್ರೇಲರ್‌

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 0:08 IST
Last Updated 16 ಜುಲೈ 2025, 0:08 IST
   

ರಜನಿಕಾಂತ್, ಅಮೀರ್‌ಖಾನ್‌, ನಾಗಾರ್ಜುನ, ಉಪೇಂದ್ರ ಅಭಿನಯದ ‘ಕೂಲಿ’ ಚಿತ್ರ ಆ.14ರಂದು ತೆರೆಗೆ ಬರಲಿದೆ ಎಂದು ಈ ಹಿಂದೆಯೇ ಚಿತ್ರತಂಡ ಘೋಷಿಸಿತ್ತು. ಆ.2ರಂದು ಚಿತ್ರದ ಟ್ರೇಲರ್‌ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಲೋಕೇಶ್‌ ಕನಗರಾಜು ಹೇಳಿದ್ದಾರೆ. ವಿದೇಶಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಲೋಕೇಶ್‌ ‘ಕೂಲಿ’ ಹಾಗೂ ತಮ್ಮ ಮುಂದಿನ ಯೋಜನೆಗಳ ಕುರಿತು ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ.

ಹಲವು ಸ್ಟಾರ್‌ ನಟರು ತಾರಾಗಣದಲ್ಲಿರುವ ಈ ಚಿತ್ರ ಸಾಕಷ್ಟು ವಿಷಯಗಳಿಂದ ನಿರೀಕ್ಷೆ ಹೆಚ್ಚಿಸಿದೆ. ‘ಕೈತಿ’, ‘ಮಾಸ್ಟರ್‌’, ‘ವಿಕ್ರಂ’ನಂಥ ಹಿಟ್‌ ಚಿತ್ರಗಳನ್ನು ನೀಡಿರುವ ಲೋಕೇಶ್‌ ಕನಗರಾಜು ರಜನಿಕಾಂತ್‌ ಜತೆ ಕೈಜೋಡಿಸಿದಾಗಲೇ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಿತ್ತು. ಬಳಿಕ ದಕ್ಷಿಣದ ಎಲ್ಲ ಭಾಷೆಯಿಂದ ಓರ್ವ ಸೂಪರ್‌ಸ್ಟಾರ್‌ ಅನ್ನು ತಾರಾಗಣದಲ್ಲಿ ಸೇರಿಸಿಕೊಂಡಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿತು. ಚಿತ್ರದ ಬಜೆಟ್‌, ಕಲಾವಿದರು, ತಂತ್ರಜ್ಞರ ಸಂಭಾವನೆಯಿಂದಲೂ ಈ ಚಿತ್ರ ಸುದ್ದಿಯಾಯಿತು.

ತಮ್ಮ ಸಂಭಾವನೆ ಕುರಿತು ಸಂದರ್ಶನದಲ್ಲಿ ಉತ್ತರಿಸಿರುವ ಲೋಕೇಶ್‌, ‘ನೀವು ನನ್ನ ₹50 ಕೋಟಿ ಸಂಭಾವನೆಯ ಬಗ್ಗೆ ಕೇಳುತ್ತಿದ್ದೀರಿ. ಆದರೆ ನನ್ನ ಕೊನೆಯ ಚಿತ್ರ ‘ಲಿಯೋ’ ₹600 ಕೋಟಿ ಗಳಿಕೆ ಕಂಡಿತ್ತು. ಹೀಗಾಗಿ ನನ್ನ ಸಂಭಾವನೆ ಕೂಡ ದ್ವಿಗುಣಗೊಂಡಿದೆ. ಅದಕ್ಕೆ ತಕ್ಕಂತೆ ತೆರಿಗೆ ಕಟ್ಟುತ್ತೇನೆ. ಇದು ಬೇಡಿಕೆ ಮತ್ತು ಪೂರೈಕೆಯ ಕ್ಷೇತ್ರ. ಚಿತ್ರಕ್ಕಾಗಿ ಹಲವು ವರ್ಷಗಳ ಶ್ರಮವಿದೆ. ಬಿಗ್‌ ಬಜೆಟ್‌ ಚಿತ್ರ. ಇಲ್ಲಿ ಎಲ್ಲರ ಸಂಭಾವನೆಯೂ ಹೆಚ್ಚಿದೆ. ರಜನಿಕಾಂತ್‌ ಅವರ ಸಂಭಾವನೆ ಕುರಿತು ನಾನು ಮಾತನಾಡಲಾರೆ’ ಎಂದಿದ್ದಾರೆ. 

ADVERTISEMENT

ರಜನಿಕಾಂತ್‌ ಈ ಚಿತ್ರಕ್ಕಾಗಿ ₹150 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿಯಿದೆ. ಚಿತ್ರಕ್ಕೆ ಅನಿರುದ್ಧ್‌ ರವಿಚಂದರ್‌ ಸಂಗೀತವಿದ್ದು, ‘ಚಿಟಿಕು’ ಎಂಬ ಹಾಡು ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ‘ಮೊನಿಕಾ’ ಹಾಡು ಎಲ್ಲೆಡೆ ಹರಿದಾಡುತ್ತಿದೆ. ನಟಿ ಪೂಜಾ ಹೆಗ್ಡೆ ಹಾಗೂ ಮಲಯಾಳ ನಟ ಸೋಭಿನ್‌ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಚಿತ್ರಕ್ಕಾಗಿ ಅನಿರುದ್ಧ್‌ ಕೂಡ ₹10 ಕೋಟಿ ಸಂಭಾವನೆ ಪಡೆದಿದ್ದು, ತಮ್ಮ ಮುಂದಿನ ಸಿನಿಮಾಗಳಿಗೆ ₹12 ಕೋಟಿ ಕೇಳುತ್ತಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.  

ಅಮೀರ್‌ ಖಾನ್‌ ಜತೆ ಚಿತ್ರ

ಸದ್ಯ ‘ಸಿತಾರೆ ಜಮೀನ್‌ ಪರ್‌’ ಯಶಸ್ಸಿನ ಖುಷಿಯಲ್ಲಿರುವ ಅಮೀರ್‌ ಖಾನ್‌ ದಕ್ಷಿಣದ ನಿರ್ದೇಶಕರೊಬ್ಬರ ಜತೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಅದಕ್ಕೀಗ ಸ್ಪಷ್ಟತೆ ಸಿಕ್ಕಿದ್ದು, ಅವರು ಲೋಕೇಶ್‌ ಕನಗರಾಜು ಜತೆ ಕೈಜೋಡಿಸುತ್ತಿರುವುದು ಖಾತ್ರಿಯಾಗಿದೆ.

‘ಕೂಲಿ’ ಬಿಡುಗಡೆ ಬಳಿಕ ‘ಕೈತಿ–2’ ಚಿತ್ರ ಕೈಗೆತ್ತಿಕೊಳ್ಳುವೆ. ಅದಾದ ಮೇಲೆ ಅಮೀರ್‌ ಖಾನ್‌ ಜತೆ ಚಿತ್ರ ಮಾಡುವ ಯೋಜನೆಯಿದೆ. ಇದು ಬಾಲಿವುಡ್‌ ಸಿನಿಮಾ. ಆದರೆ ಕೇವಲ ಭಾರತೀಯ ಪ್ರೇಕ್ಷಕರಿಗೆ ಸೀಮಿತವಾಗಿರುವುದಿಲ್ಲ. ಜಾಗತಿಕ ಮಟ್ಟದ ಮಾಸ್‌ ಆ್ಯಕ್ಷನ್‌ ಚಿತ್ರವಾಗಿರಲಿದೆ. ಅಮೀರ್‌ ಸಾಕಷ್ಟು ವಿಷಯಗಳಲ್ಲಿ ಕಮಲ್‌ ಹಾಸನ್‌ ಅವರನ್ನು ಹೋಲುತ್ತಾರೆ. ಹೀಗಾಗಿ ಅಂಥದ್ಧೆ ಕಥೆ ಆಯ್ದುಕೊಳ್ಳುವೆ. ಈಗಲೇ ನಾನು ಇದೊಂದು ಸೂಪರ್‌ ಹೀರೋ ಸಿನಿಮಾ ಎನ್ನಲಾರೆ. ಆದರೆ ಅತಿದೊಡ್ಡ ಆ್ಯಕ್ಷನ್‌ ಸಿನಿಮಾ’ ಎಂದು ಲೋಕೇಶ್‌ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಜೈಲರ್‌–2’ನಲ್ಲಿ ರಜಿನಿ

ರಜನಿಕಾಂತ್‌ ಕೂಡ ‘ಕೂಲಿ’ ಬಳಿಕ ಕಲೆ ಸಿನಿಮಾಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ. ‘ಜೈಲರ್– 2’ ಅವರ ಮುಂದಿನ ಚಿತ್ರ. ಈಗಾಗಲೇ ನಿರ್ಮಾಣ ಹಂತದಲ್ಲಿದೆ. ಇದಾದ ಬಳಿಕ ‘ಮಹಾರಾಜ’ ಚಿತ್ರದ ನಿರ್ದೇಶಕ ನಿಥಿಲಾನ್ ಸ್ವಾಮಿನಾಥನ್‌ ಜತೆ ತಮಿಳಿನ ಸೂಪರ್‌ಸ್ಟಾರ್‌ ಕೈಜೋಡಿಸಲಿದ್ದಾರೆ ಎಂಬ ಸುದ್ದಿಯಿದೆ. ಅಲ್ಲದೇ ತೆಲುಗಿನ ನಾನಿ ಜತೆ ಕೆಲ ಸಿನಿಮಾಗಳನ್ನು ಮಾಡಿರುವ ವಿವೇಕ್ ಅತ್ರೇಯ ಅವರ ಜತೆಯೂ ಒಂದು ಕಥೆಯನ್ನು ಚರ್ಚಿಸಿದ್ದಾರೆ.

ಸದ್ಯ ವಿಜಯ್‌ ಅವರ ‘ಜನನಾಯಗನ್‌’ ಚಿತ್ರ ನಿರ್ದೇಶಿಸುತ್ತಿರುವ ಎಚ್.ವಿನೋದ್ ಅವರ ಜತೆಯೂ ಮಾತುಕತೆ ನಡೆದಿದೆ’ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.