ADVERTISEMENT

ಜೇಮ್ಸ್‌ ಬಾಂಡ್‌ ರಾಜುವಿನ ಕಥೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 19:30 IST
Last Updated 16 ಜನವರಿ 2020, 19:30 IST
ಗುರುನಂದನ್‌
ಗುರುನಂದನ್‌   

ಯಾವುದಾದರೊಂದು ಸಿನಿಮಾ ಸೂಪರ್‌ ಹಿಟ್‌ ಆಯಿತು ಎಂದರೆ ಅದೇ ಹೆಸರಿನಡಿ ಸರಣಿ ಸಿನಿಮಾಗಳು ನಿರ್ಮಾಣವಾಗುವುದು ಸಹಜ. ನಾಲ್ಕು ವರ್ಷದ ಹಿಂದೆ ತೆರೆಕಂಡ ಗುರುನಂದನ್‌ ನಟನೆಯ ‘ಫಸ್ಟ್‌ ರ‍್ಯಾಂಕ್‌ ರಾಜು’ ಚಿತ್ರ ಯಶಸ್ವಿಯಾಗಿತ್ತು. ಬಳಿಕ ಅವರು ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ನಟಿಸಿದರು. ಆದರೆ, ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿಸಿದಷ್ಟು ಗಳಿಕೆ ಮಾಡಲಿಲ್ಲ. ಈಗ ರಘುನಂದನ್ ಜೇಮ್ಸ್‌ ಬಾಂಡ್‌ ಅವತಾರ ಎತ್ತಿದ್ದಾರೆ. ಈ ಸಿನಿಮಾಕ್ಕೆ ಇಟ್ಟಿರುವ ಹೆಸರು ‘ರಾಜು ಜೇಮ್ಸ್‌ ಬಾಂಡ್‌’.

ಸಂಡೂರು, ಶ್ರೀರಂಗಪಟ್ಟಣ, ಲಂಡನ್‌ನಲ್ಲಿ ಮುಕ್ಕಾಲು ಭಾಗದಷ್ಟು ಚಿತ್ರೀಕರಣ ನಡೆಸಿರುವ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿಯಲ್ಲಿ ಕುಳಿತಿತ್ತು.

ಇದನ್ನು ನಿರ್ದೇಶಿಸಿರುವುದು ದೀಪಕ್‌ ಮಧುವನಹಳ್ಳಿ. ‘ರಾಜುವಿನ ಊರು ಸುವರ್ಣಪುರ. ಬ್ಯಾಂಕ್‌ ಮ್ಯಾನೇಜರ್‌ ಆಗಬೇಕೆಂಬುದು ಆತನ ಆಸೆ. ಮಾವನ ಬಳಿಕೆಲಸ ಮಾಡಿಕೊಂಡಿರುತ್ತಾನೆ. ಮತ್ತೊಂದೆಡೆ ಅಪ್ಪ ಮಾಡಿದ ಸಾಲ ತೀರಿಸುವ ಜವಾಬ್ದಾರಿ ಹೆಗಲೇರುತ್ತದೆ. ಅದೇ ಗ್ರಾಮದ ಟೀಚರ್‌ ಮೇಲೆ ಆತನಿಗೆ ಪ್ರೀತಿಯೂ ಮೂಡುತ್ತವೆ. ಶಾಸಕನ ಪ್ರವೇಶದಿಂದ ರಾಜುವಿನ ಬದುಕು ಏರುಪೇರಾಗುತ್ತದೆ. ಕೊನೆಗೆ, ಆತನ ಗುರಿ ಈಡೇರುತ್ತದೆಯೇ ಎಂಬುದೇ ಚಿತ್ರದ ಕಥಾಹಂದರ’ ಎಂದು ವಿವರಿಸಿದರು.

ಚಿತ್ರದ ನಾಲ್ಕು ಹಾಡುಗಳಿಗೆ ಅನೂಪ್‌ ಸೀಳಿನ್ ಸಂಗೀತ ನೀಡಿದ್ದಾರೆ. ಮನೋಹರ್‌ ಜೋಷಿ ಅವರ ಛಾಯಾಗ್ರಹಣವಿದೆ. ಸಂಕಲನ ಅಮಿತ್‌ ಜವಾಲ್ಕರ್ ಅವರದು. ಮಾಸ್‌ ಮಾದ ಸಾಹಸ ನಿರ್ದೇಶಿಸಿದ್ದಾರೆ. ಮಂಜುನಾಥ ವಿಶ್ವಕರ್ಮ ಮತ್ತು ಕಿರಣ್‌ ಬಾರ್ತೋಡ್‌ ಬಂಡವಾಳ ಹೂಡಿದ್ದಾರೆ.

ಮೃದುಲಾ ಈ ಚಿತ್ರದ ನಾಯಕಿ. ಅಚ್ಯುತ್‌ಕುಮಾರ್‌, ರವಿಶಂಕರ್‌, ಚಿಕ್ಕಣ್ಣ, ತಬಲಾ ನಾಣಿ, ಜೈಜಗದೀಶ್‌, ವಿಜಯ್‌ ಚೆಂಡೂರ್‌, ಮಂಜುನಾಥ ಹೆಗಡೆ, ಜಯಸಿಂಹನ್‌ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.