ADVERTISEMENT

Sandalwood | ಒಳ್ಳೆಯ ಕೆಲಸಕ್ಕೆ ಸಮಯ ಹಿಡಿಯುತ್ತೆ: ರಕ್ಷಿತ್‌ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 23:30 IST
Last Updated 4 ಸೆಪ್ಟೆಂಬರ್ 2025, 23:30 IST
ರಕ್ಷಿತ್‌ ಶೆಟ್ಟಿ 
ರಕ್ಷಿತ್‌ ಶೆಟ್ಟಿ    

ನಟ ರಕ್ಷಿತ್‌ ಶೆಟ್ಟಿ ತೆರೆ ಮೇಲೆ ಕಾಣಿಸಿಕೊಂಡು ಎರಡು ವರ್ಷ ಕಳೆದಿವೆ. ‘ಸಪ್ತ ಸಾಗರದಾಚೆ ಎಲ್ಲೋ’ ಬಳಿಕ ಅವರು ನಟಿಸಿದ ಸಿನಿಮಾಗಳು ತೆರೆಕಂಡಿಲ್ಲ. ಸದ್ಯ ‘ಉಳಿದವರು ಕಂಡಂತೆ’ ಸಿನಿಮಾದ ಸರಣಿಯಾದ ‘ರಿಚರ್ಡ್‌ ಆಂಟನಿ’ ಪ್ರಿಪ್ರೊಡಕ್ಷನ್‌ ಕೆಲಸದಲ್ಲಿ ತೊಡಗಿಸಿಕೊಂಡಿರುವ ರಕ್ಷಿತ್‌ ‘ಒಳ್ಳೆಯ ಕೆಲಸ ಸಮಯ ಹಿಡಿಯುತ್ತದೆ’ ಎಂದಿದ್ದಾರೆ. 

ಅಮೆರಿಕಾದ ಫ್ಲೊರಿಡಾದಲ್ಲಿ ನಡೆದ ನಾವಿಕ ವಿಶ್ವ ಕನ್ನಡ ಸಮಾವೇಶದಲ್ಲಿ ಮಾತನಾಡಿದ ಅವರ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ‘ಕೆಲವೊಮ್ಮೆ ನಾವು ಮಾಡುವ ಕೆಲಸ ನಿಧಾನವಾಗಿದೆ ಎಂದು ಎನಿಸಬಹುದು. ಆದರೆ ದೊಡ್ಡ, ಒಳ್ಳೆಯ ಕೆಲಸ ಮಾಡಬೇಕಾದರೆ ಸಮಯ ಹಿಡಿಯುತ್ತದೆ. ಅದಕ್ಕಾಗಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದೇನೆ. ಆದರೆ ನಾನು ಮತ್ತೆ ಬಂದಾಗ, ಚಿತ್ರಮಂದಿರಕ್ಕೆ ಹೋಗದವರು ಚಿತ್ರಮಂದಿರಕ್ಕೆ ಹೋಗುವಂತಹ ಸಿನಿಮಾ ತರುತ್ತೇನೆ’ ಎಂದಿದ್ದಾರೆ. ರಕ್ಷಿತ್‌ ಶೆಟ್ಟಿ ಅವರ ಈ ಮಾತು ಸಿನಿಮಾ ಯಾವಾಗ ಎನ್ನುವ ಪ್ರಶ್ನೆಗಳಿಗೆ ಉತ್ತರದಂತಿದೆ.   

2023ರಲ್ಲಿ ‘ನಾ ಕಂಡಂತೆ’ ಎಂಬ ಯುಟ್ಯೂಬ್‌ ಚಾನಲ್‌ ಆರಂಭಿಸಿದ್ದ ರಕ್ಷಿತ್‌, ಒಂದು ವಿಡಿಯೊ ಅಪ್‌ಲೋಡ್‌ ಮಾಡಿದ್ದರು. ‘ರಿಚರ್ಡ್‌ ಆಂಟನಿ’ ಹಾಗೂ ‘ಪುಣ್ಯಕೋಟಿ’ ಸಿನಿಮಾಗಳಿಗೆ ಪರಶುರಾಮ ಮತ್ತು ಆತನ ಕೊಡಲಿ ಸ್ಫೂರ್ತಿಯಾಗಿದ್ದು, ಈ ಕಥೆಗಳ ಜೊತೆಗೆ ನಾಲ್ಕು ವರ್ಷ ಕಳೆದಿದ್ದೇನೆ. ಇನ್ನೂ ನಾಲ್ಕು ವರ್ಷ ಕಳೆಯುವುದಿದೆ ಎಂದು ಅದರಲ್ಲಿ ಹೇಳಿದ್ದರು. ಈ ಸಿನಿಮಾಗಳ ಜೊತೆಗೆ ‘ಮಿಡ್‌ ವೇ ಟು ಮೋಕ್ಷ’ ಎನ್ನುವ ಸಿನಿಮಾವೂ ರಕ್ಷಿತ್‌ ಸಿನಿಬ್ಯಾಂಕ್‌ನಲ್ಲಿದೆ. ಇವುಗಳನ್ನು ಪೂರ್ಣಗೊಳಿಸಿಯೇ ಮುಂದಿನದನ್ನು ಯೋಚಿಸುವುದಾಗಿ ಹೇಳಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.