ADVERTISEMENT

ರಂಗನ ಪ್ರೇಮ ಕಹಾನಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 19:31 IST
Last Updated 17 ಡಿಸೆಂಬರ್ 2018, 19:31 IST
ಶಿಲ್ಪಾ ಮಂಜುನಾಥ್‌
ಶಿಲ್ಪಾ ಮಂಜುನಾಥ್‌   

ಹದಿನಾಲ್ಕು ವರ್ಷದ ಹಿಂದೆ ನಟ ಸುದೀಪ್‌ ನಟನೆಯ ‘ರಂಗ ಎಸ್‌ಎಸ್‌ಎಲ್‌ಸಿ’ ಚಿತ್ರ ಬಂದಿತ್ತು. ಮತ್ತೆ ಗಾಂಧಿನಗರದಲ್ಲಿ ನಟ ವಿಕ್ಕಿ ವರುಣ್‌ ‘ರಂಗ’ನ ಆಟಕ್ಕೆ ಅಣಿಯಾಗಿದ್ದಾರೆ.

ಹಳೆಯ ರಂಗನಿಗಿಂತ ಓದಿನಲ್ಲಿ ಇವನು ಮುಂದು. ಈತ ಬಿಇ, ಎಂ.ಟೆಕ್ ಪದವೀಧರ. ‘ಕೆಂಡಸಂಪಿಗೆ’ ಮತ್ತು ‘ಕಾಲೇಜ್‌ಕುಮಾರ್‌’ ಚಿತ್ರದ ಬಳಿಕ ವಿಕ್ಕಿ ಜನರ ಮನದಲ್ಲಿ ಅಚ್ಚಳಿಯದೆ ಉಳಿಯುವ ಪಾತ್ರಕ್ಕಾಗಿ ಹಾತೊರೆತ್ತಿದ್ದರು. ಇದಕ್ಕೆ ‘ರಂಗ’ ವೇದಿಕೆ ಕಲ್ಪಿಸಿದ್ದಾನೆ.

ಬಸವನಗುಡಿಯ ದೊಡ್ಡ ಬಸವಣ್ಣನ ದೇಗುಲದಲ್ಲಿ ಚಿತ್ರದ ಮೊದಲ ದೃಶ್ಯವನ್ನು ಚಿತ್ರೀಕರಿಸಿ ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು. ಇ‍ಪ್ಪತ್ತಾರು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ದುಡಿದು ಮೊದಲ ಬಾರಿಗೆ ನಿರ್ದೇಶಕನ ಕ್ಯಾ‍ಪ್ ಧರಿಸಿದ ಖುಷಿ ನಾಗೇಶ್‌ ಕಾರ್ತಿ ಅವರ ಮೊಗದಲ್ಲಿತ್ತು.‌

ADVERTISEMENT

ಅಳುಕುತ್ತಲೇ ಮಾತು ಆರಂಭಿಸಿದ ಅವರು, ‘ಇಂದಿನ ಕಾಲದ ಹುಡುಗರು ಮತ್ತು ಹುಡುಗಿಯರ ಮನಸ್ಥಿತಿ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಪ್ರೇಮ ಪಾಶಕ್ಕೆ ಸಿಲುಕಿದ ಹುಡುಗಿಯರ ಮಾನಸಿಕ ಸ್ಥಿತಿಗತಿ ಹೇಗಿರುತ್ತದೆ ಎನ್ನುವುದನ್ನು ಹೇಳಿದ್ದೇವೆ’ ಎಂದರು.

‘ಕಾಲೇಜ್‌ಕುಮಾರ್‌ ಚಿತ್ರದಲ್ಲಿ ಓದಿ ಕೆಲಸ ಮಾಡುವ ಪಾತ್ರ ಮಾಡಿದ್ದೆ. ಇಲ್ಲಿ ಎಂಜಿನಿಯರಿಂಗ್‌ ಪದವೀಧರ. ಪ್ರೀತಿಯು ಓದಿಗೆ ಹೆಚ್ಚು ಸಾಥ್‌ ಕೊಡುತ್ತದೆಯೇ ಎಂದು ತೋರಿಸಿಕೊಡುವ ಪಾತ್ರ ನಿರ್ವಹಿಸಿದ್ದೇನೆ’ ಎಂದರು ನಕ್ಕರು ವಿಕ್ಕಿ.

ಮೂರು ಬಗೆಯ ಶೇಡ್‌ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರಂತೆ. ‘ಪೋಸ್ಟರ್‌ನಲ್ಲಿ ಕೈಬೆರಳುಗಳ ಮೂಲಕ ಪ್ರೀತಿಯ ಸಂಕೇತ ತೋರಲಾಗಿದೆ. ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ಈ ಸಂಸ್ಕೃತಿ ಹೆಚ್ಚಾಗಿ ಕಾಣುತ್ತಿದೆ. ಇದು ಕೊರಿಯನ್‌ ಕಲ್ಚರ್‌. ಚಿತ್ರದಲ್ಲಿ ನಾವಿದನ್ನು ಬಳಸಿದ್ದೇವೆ’ ಎಂದರು.

ನಾಯಕಿ ಶಿಲ್ಪಾ ಮಂಜುನಾಥ್‌ಗೆ ಇದು ನಾಲ್ಕನೇ ಚಿತ್ರ. ತಮಿಳಿನಲ್ಲಿ ಸಾಕಷ್ಟು ಅವಕಾಶಗಳು ದೊರೆಯುತ್ತಿರುವ ನಡುವೆಯೂ ಅವರಿಗೆ ಚಂದನವನದಲ್ಲಿ ನಟಿಸಲು ಖುಷಿಯಂತೆ. ‘ನಾನು ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂದಷ್ಟೇ ಹೇಳಿದರು.

‘ಚಮಕ್‌’ ಮತ್ತು ‘ಅಯೋಗ್ಯ’ ಚಿತ್ರಕ್ಕೆ ಬಂಡವಾಳ ಹೂಡಿದ್ದ ಟಿ.ಆರ್‌.ಚಂದ್ರಶೇಖರ್‌ ಈ ಚಿತ್ರಕ್ಕೆ ಆರ್ಥಿಕ ಇಂಧನ ಒದಗಿಸಿದ್ದಾರೆ. ‘ಹೊಸ ನಿರ್ದೇಶಕರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಹಾಗಾಗಿ, ನಾನು ಹೊಸಬರಿಗೆ ಪ್ರಥಮ ಅವಕಾಶ ನೀಡುತ್ತೇನೆ’ ಎಂದು ಹೇಳಿಕೊಂಡರು.

ಚಿತ್ರದ ಮೂರು ಹಾಡುಗಳಿಗೆ ಶ್ರೀಧರ್‌ ಸಂಭ್ರಮ್‌ ಸಂಗೀತ ಸಂಯೋಜಿಸಿದ್ದಾರೆ. ಭರತ್‌ ಪರಶುರಾಮ್‌ ಅವರ ಛಾಯಾಗ್ರಹಣವಿದೆ. ಜನವರಿಯಿಂದ ಒಂದೇ ಹಂತದಲ್ಲಿ ಶೂಟಿಂಗ್‌ ಪೂರ್ಣಗೊಳಿಸಲು ಚಿತ್ರತಂಡ ಯೋಜನೆ ರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.