ಅನೂಪ್ ಭಂಡಾರಿ ನಿರ್ದೇಶನದ ‘ರಂಗಿತರಂಗ’ ಸಿನಿಮಾ 2015ರಲ್ಲಿ ತೆರೆಕಂಡಿತ್ತು. ಭಿನ್ನವಾದ ಕಥಾವಸ್ತುವಿನೊಂದಿಗೆ ಕನ್ನಡ ಚಿತ್ರರಂಗದಲ್ಲಿ ಬ್ಲಾಕ್‌ಬಸ್ಟರ್ ಆಗಿದ್ದ ಈ ಸಿನಿಮಾ ಇದೀಗ ಮತ್ತೆ ತೆರೆಗೆ ಬರುತ್ತಿದೆ. ‘ರಂಗಿತರಂಗ’ ಜುಲೈ 4ರಂದು ರೀರಿಲೀಸ್ ಆಗುತ್ತಿದೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ಹಂಚಿಕೊಂಡಿತು.
ನಿರ್ದೇಶಕ ಅನೂಪ್ ಭಂಡಾರಿ ಮಾತನಾಡಿ, ‘ರಂಗಿತರಂಗ’ದ ಪ್ರೀ-ಪ್ರೊಡಕ್ಷನ್ ಕಾರ್ಯದಲ್ಲಿರುವಾಗ, ಈ ಚಿತ್ರ ನಾನೇ ಮಾಡಬೇಕೆಂದು ಎಚ್.ಕೆ. ಪ್ರಕಾಶ್ ಅವರು ಆಸೆಪಟ್ಟರು. ಅವರ ಉತ್ಸಾಹಕ್ಕೆ ಕೈಜೋಡಿಸಿದೆ. ಸಾಯಿಕುಮಾರ್ ಅವರನ್ನು ಹೊರತುಪಡಿಸಿ, ಬಹುತೇಕ ಎಲ್ಲ ಕಲಾವಿದರೂ ಹೊಸಬರಾಗಿದ್ದರು. ನಿರೂಪ್ ಭಂಡಾರಿ, ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ, ಅರವಿಂದ್ ಎಲ್ಲರ ಸಂಘಟಿತ ಶ್ರಮದಿಂದ ಚಿತ್ರ ಉತ್ತಮವಾಗಿ ಮೂಡಿಬಂತು. 2015ರ ಜುಲೈ 3ರಂದು ನಮ್ಮ ಚಿತ್ರ ಬಿಡುಗಡೆಯಾದಾಗ ‘ಕಪಾಲಿ’ ಚಿತ್ರಮಂದಿರದಲ್ಲಿ ಚಿತ್ರ ನೋಡಿ ಬಂದ ಕೆಲವರು ನಮ್ಮ ನಿರ್ಮಾಪಕರಿಗೆ ‘ನಿಮಗೆ ಪೋಸ್ಟರ್ ಖರ್ಚು ಕೂಡ ಬರುವುದಿಲ್ಲ’ ಎಂದು ಹೆದರಿಸಿದ್ದರು. ಆದರೆ ‘ಬಾಹುಬಲಿ’, ‘ಬಜರಂಗಿ ಭಾಯಿಜಾನ್’, ‘ಶ್ರೀಮಂತುಡು’ನಂತಹ ದೊಡ್ಡ ಚಿತ್ರಗಳ ಜೊತೆ ಬಿಡುಗಡೆಯಾದರೂ ನಮ್ಮ ಕನ್ನಡ ಚಿತ್ರ ಸೂಪರ್ ಹಿಟ್ ಆಯಿತು. ‘ರಂಗಿತರಂಗ’ದ ಮೂಲಕ ಅಮೆರಿಕದಲ್ಲಿ ಕನ್ನಡ ಚಿತ್ರಕ್ಕೆ ಒಂದು ಹೊಸ ಮಾರುಕಟ್ಟೆ ಸೃಷ್ಟಿಯಾಯಿತು’ ಎಂದರು.
‘ಪೊಲೀಸ್ ಸ್ಟೋರಿ’ ಮತ್ತು ‘ರಂಗಿತರಂಗ’ ಈ ಎರಡು ಚಿತ್ರಗಳು ನನ್ನ ಎರಡು ಕಣ್ಣುಗಳು. ಇಂತಹ ಕನ್ನಡ ಚಿತ್ರಗಳಲ್ಲಿ ನಟಿಸಿದ್ದು ಬಹಳ ಖುಷಿಯಾಗಿದೆ. ಈಗಲೂ ನಾನು ಹೋದ ಕಡೆ ‘ರಂಗಿತರಂಗ’ದ ಪಾತ್ರದಿಂದ ಜನ ಗುರುತಿಸಿ ಮೆಚ್ಚುಗೆ ಸೂಚಿಸುತ್ತಾರೆ’ ಎಂದು ನಟ ಸಾಯಿಕುಮಾರ್ ಹೇಳಿದರು.
‘ನಾನು ಐಟಿ ಉದ್ಯೋಗಿಯಾಗಿದ್ದರೂ ಸಿನಿಮಾ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದೆ. ಅಣ್ಣನ ನಿರ್ದೇಶನದ ಕಿರುಚಿತ್ರಗಳಿಗೆ ನಾನೇ ಹೀರೋ. ಬೆಳ್ಳಿತೆರೆಯ ಮೇಲೆ ಅನೂಪ್ ನಿರ್ದೇಶನದ ಮೊದಲ ಚಿತ್ರಕ್ಕೂ ನಾನೇ ನಾಯಕ ಎಂದು ತಿಳಿದಾಗ ಆದ ಖುಷಿ ಅಷ್ಟಿಷ್ಟಲ್ಲ. ಮೊದಲ ದೃಶ್ಯದಲ್ಲೇ ನಾನು ಸಾಯಿಕುಮಾರ್ ಅವರೊಂದಿಗೆ ಫೈಟ್ ಮಾಡಬೇಕಿತ್ತು. ಆಗ ನನಗಾದ ಭಯ ಈಗಲೂ ಕಣ್ಣ ಮುಂದೆ ಇದೆ. ಅಮೆರಿಕಾಗೆ ಹೋದಾಗ ಅಲ್ಲಿ ನಮ್ಮ ಚಿತ್ರವನ್ನು ನೋಡಲು ಬಂದಿದ್ದ ಜನಸಾಗರ ಕಂಡು ಬಹಳ ಖುಷಿಪಟ್ಟಿದ್ದೆ’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು ನಟ ನಿರೂಪ್ ಭಂಡಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.