ADVERTISEMENT

ಕಾಲಿವುಡ್‌ಗೆ ಕಾಲಿಟ್ಟ ಕೊಡಗಿನ ಬೆಡಗಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2019, 14:16 IST
Last Updated 26 ಫೆಬ್ರುವರಿ 2019, 14:16 IST
   

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತಮಿಳು ಚಿತ್ರಕ್ಕೆ ಸಹಿ ಹಾಕುವ ಮೂಲಕ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ‘ರೆಮೊ’ ಖ್ಯಾತಿಯ ನಿರ್ದೇಶಕ ಭಾಗ್ಯರಾಜ್‌ ಕಣ್ಣನ್‌ ಅವರ ಹೊಸ ಚಿತ್ರದಲ್ಲಿ ಕಾರ್ತಿ ಜೊತೆ ಈ ಡಿಂಪಲ್‌ ಸುಂದರಿ ಡುಯೆಟ್‌ ಹಾಡಲಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರಕ್ಕೆ ಡ್ರೀಮ್‌ ವಾರಿಯರ್ಸ್ ಪಿಕ್ಚರ್ಸ್‌ನ ಎಸ್.ಆರ್.ಪ್ರಭು ಮತ್ತು ಎಸ್.ಆರ್. ಪ್ರಕಾಶ್‌ ಪ್ರಭು ಬಂಡವಾಳ ಹೂಡಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ಇಲ್ಲವೇ ಮಾರ್ಚ್‌ ಮೊದಲ ವಾರದಲ್ಲಿ ಚಿತ್ರ ಸೆಟ್ಟೇರಲಿದೆ. ಸತ್ಯನ್‌ ಸೂರ್ಯನ್‌ ಕ್ಯಾಮೆರಾ ಹಿಡಿಯಲಿದ್ದು, ವಿವೇಕ್‌–ಮರ್ವಿನ್‌ ಜೋಡಿ ಸಂಗೀತ ನಿರ್ದೇಶಿಸಲಿದೆ.‌

‘ಕಿರಿಕ್‌ ಪಾರ್ಟಿ’ ಸೂಪರ್‌ ಹಿಟ್‌ ಚಿತ್ರದ ಬಳಿಕ ತೆಲುಗಿನಲ್ಲಿಯೂ ‘ಗೀತ ಗೋವಿಂದಂ’ ಮೂಲಕ ಟಾಲಿವುಡ್‌ನಲ್ಲಿ ಧೂಳೆಬ್ಬಿಸಿದರು. ಈಗಾಗಲೇ ಕೈತುಂಬಾ ಚಿತ್ರಗಳನ್ನು ಹಿಡಿದು ಕುಳಿತಿರುವ ಕೊಡಗಿನ ಬೆಡಗಿ, ‘ಯಜಮಾನ’ ಚಿತ್ರೀಕರಣ ಮುಗಿಯುತ್ತಲೇ ಹೈದರಾಬಾದ್‌ಗೆ ಹಾರಿದ್ದರು. ಕಾಲಿವುಡ್‌ಗೆ ಹಾರುವ ಮುನ್ನ ವಿಜಯ್‌ ದೇವರಕೊಂಡ ಜೊತೆಗಿನ ‘ಡಿಯರ್‌ ಕಾಮ್ರೇಡ್‌’ ಚಿತ್ರೀಕರಣವನ್ನು ಮುಗಿಸಿ ಕೊಡಬೇಕಾದ ಒತ್ತಡದಲ್ಲಿದ್ದಾರೆ.

ADVERTISEMENT

ಅತ್ತ, ಕಾರ್ತಿ ನಟನೆಯ ‘ದೇವ್‌’ ಚಿತ್ರ ಸೋತರೂ ಕಾಲಿವುಡ್‌ನಲ್ಲಿ ಬೇಡಿಕೆ ಕಳೆದುಕೊಂಡಿಲ್ಲ. ಡ್ರೀಮ್‌ ವಾರಿಯರ್‌ ಪಿಕ್ಚರ್ಸ್‌ ಸಂಸ್ಥೆಯ ನಿರ್ಮಿಸುತ್ತಿರುವ ಮತ್ತೊಂದು ಚಿತ್ರಕ್ಕೂ ಕಾರ್ತಿ ನಾಯಕನಟನಾಗಿದ್ದಾರೆ. ಜೀತು ಜೋಸೆಫ್‌ ಅವರ ಥ್ರಿಲ್ಲರ್‌ ಸಿನಿಮಾವೊಂದಕ್ಕೂ ಅವರು ಕಾಲ್‌ಶೀಟ್‌ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.