ADVERTISEMENT

ರತ್ನನ್ ಪ್ರಪಂಚಕ್ಕಾಗಿ ‘ಗಿಚ್ಚಿ ಗಿಲಿ ಗಿಲಿ‘ ಎಂದು ಹಾಡಿದ ಪುನೀತ್ ರಾಜ್‌ಕುಮಾರ್

ರತ್ನನ್ ಪ್ರಪಂಚ್ ಲಿರಿಕಲ್ ಸಾಂಗ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2021, 8:33 IST
Last Updated 13 ಅಕ್ಟೋಬರ್ 2021, 8:33 IST
ಗಿಚ್ಚಿ ಗಿಲಿ ಗಿಲಿ ಹಾಡಿನಲ್ಲಿ ಪುನೀತ್ ರಾಜ್‌ಕುಮಾರ್
ಗಿಚ್ಚಿ ಗಿಲಿ ಗಿಲಿ ಹಾಡಿನಲ್ಲಿ ಪುನೀತ್ ರಾಜ್‌ಕುಮಾರ್   

ಬೆಂಗಳೂರು: ಅಕ್ಟೋಬರ್ 22 ರಂದು ಬಿಡುಗಡೆಗೆ ಸಿದ್ದವಾಗಿರುವ ಡಾಲಿ ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ‘ ಕನ್ನಡ ಸಿನಿಮಾದ ಲಿರಿಕಲ್ ಹಾಡೊಂದು ಯೂಟ್ಯೂಬ್‌ನಲ್ಲಿ ಸದ್ದು ಮಾಡಿದೆ. ಕಳೆದ ಸೋಮವಾರ ಈ ಹಾಡು ಲಹರಿ ಮ್ಯೂಸಿಕ್‌ನ‌ಲ್ಲಿ ಬಿಡುಗಡೆಯಾಗಿದೆ

ಉತ್ತರ ಕರ್ನಾಟಕ ಭಾಷಾ ಶೈಲಿಯಲ್ಲಿಹುಡುಗಿಯನ್ನು ಸರಸಕ್ಕೆ ಕರೆಯುವ ಈ ಹಾಡನ್ನು ನಟ ಹಾಗೂ ಗಾಯಕ ಪುನೀತ್ ರಾಜ್‌ಕುಮಾರ್ ಹಾಡಿದ್ದಾರೆ. ಗಿಚ್ಚಿ ಗಿಲಿ ಗಿಲಿ ಎಂದು ಪುನೀತ್ ರಾಜ್‌ಕುಮಾರ್ ಹೇಳಿರುವುದು ಉತ್ತರ ಕರ್ನಾಟಕ ಹುಡುಗರನ್ನು ಆಕರ್ಷಿಸಿದೆ.

‘ಹೈ ಕ್ಲಾಸ್ ಹುಡುಗಿಗೆ, ಬೈ ಪಾಸು ರೋಡಿಗೆ.. ಬಾ ಅಂತಾ ಕರೆದೆ ನೀ, ಸೆಟ್ ಆದ್ರೆ ಗಿಚ್ಚಿ ಗಿಲಿ ಗಿಲಿ‘ ಎಂಬ ಹಾಡಿಗೆ ಶಿವು ಬೆರ್ಗಿ ಅವರು ಗೀತ ರಚನೆ ಮಾಡಿದ್ದಾರೆ. ಎ ಹರ್ಷ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

ADVERTISEMENT

ರತ್ನನ್ ಪ್ರಪಂಚ’ ಕನ್ನಡ ಸಿನಿಮಾ ಅಕ್ಟೋಬರ್ 22 ಕ್ಕೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ. ಓಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗುತ್ತಿರುವ ಕನ್ನಡದ ಪ್ರಮುಖ ಚಿತ್ರ ಇದಾಗಿದೆ.

ಕೆಆರ್‌ಜೆ ಸ್ಟುಡಿಯೊ ಅಡಿ ನಿರ್ಮಾಣವಾಗುತ್ತಿರುವ ಈ ಚಿತ್ರ ರೋಹಿತ್ ಪದಕಿ ನಿರ್ದೇಶನದಲ್ಲಿ ಮೂಡಿ ಬಂದಿದೆ. ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಅವರು ನಿರ್ಮಾಪಕರಾಗಿದ್ದಾರೆ.

ವಿಶಿಷ್ಟ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್‌ಗೆ ಮಲೆಯಾಳಂನ ರೆಬ್ಬಾ ಮೊನಿಕಾ ಜಾನ್ ಅವರು ಜೊತೆಯಾಗಿ ನಟಿಸಿದ್ದಾರೆ. ಉಮಾಶ್ರೀ, ಪಂಜು, ರವಿಶಂಕರ್ ಗೌಡ ತಾರಾಗಣದಲ್ಲಿದ್ದಾರೆ.

ಕೊರೊನಾ ಎರಡನೇ ಅಲೆ ನಂತರ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ 100 ರಷ್ಟು ಭರ್ತಿಗೆ ಅವಕಾಶ ನೀಡಿದರೂ ರತ್ನನ್ ಪ್ರಪಂಚ ನೇರವಾಗಿ ಓಟಿಟಿಯಲ್ಲೇ ಬಿಡುಗಡೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.