ADVERTISEMENT

ಕೆಜಿಎಫ್ ಸಿನಿಮಾ ಸಂಗೀತ ನಿರ್ದೇಶಕ ರವಿ ಬಸ್ರೂರ್ ಗಳಗಳನೆ ಅತ್ತಿದ್ಯಾಕೆ?

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 7:53 IST
Last Updated 16 ನವೆಂಬರ್ 2019, 7:53 IST
ರವಿ ಬಸ್ರೂರು
ರವಿ ಬಸ್ರೂರು   

ಬೆಂಗಳೂರು: ಉಗ್ರಂ ಮೂಲಕ ಸಂಗೀತ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರವಿ ಬಸ್ರೂರ್ ಅವರ ಪಯಣ ಕೆಜಿಎಫ್ 1 ಸಂಗೀತ ನಿರ್ದೇಶನದವರೆಗೂ ಬೆಳೆದಿದೆ. ಆದರೆ ನಿರ್ದೇಶಕ ರವಿ ಬಸ್ರೂರು ಕಣ್ಣೀರಿಡುತ್ತಾ ಹಂಚಿಕೊಂಡಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಟಕ ಚಿತ್ರದ ನಿರ್ದೇಶನದ ಬಳಿಕ ತಾವೇ ಆ್ಯಕ್ಷನ್ ಕಟ್ ಹೇಳಿರುವ 'ಗಿರ್ಮಿಟ್' ಸಿನಿಮಾ ಕಳೆದ ನವೆಂಬರ್ 8ರಂದು ತೆರೆಕಂಡಿತ್ತು. ಸಿನಿಮಾಗೇನೋ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಜನ ಚಿತ್ರಮಂದಿರಕ್ಕೆ ತೆರಳಿ ಚಿತ್ರ ವೀಕ್ಷಿಸುತ್ತಿಲ್ಲ. ಹೀಗಾಗಿ ರವಿ ಬಸ್ರೂರು ಕಣ್ಣೀರಿಡುತ್ತಾ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಮಕ್ಕಳು ದೊಡ್ಡವರ ರೀತಿ ಯೋಚಿಸುವಂತೆ, ದೊಡ್ಡವರು ಸಣ್ಣ ಮಕ್ಕಳಂತೆ ಕುಳಿತು ಸಿನಿಮಾ ನೋಡುವಂತೆ ಮಕ್ಕಳಿಂದ ಮಕ್ಕಳಿಗಾಗಿ ಮಾಡಿರುವ ಸಿನಿಮಾ ಯಶಸ್ಸು ಕಾಣುತ್ತಿಲ್ಲ. ಹೀಗಾಗಿ ನೊಂದು ವಿಡಿಯೋದಲ್ಲಿ ನೋವನ್ನು ಹಂಚಿಕೊಂಡಿದ್ದಾರೆ.

ADVERTISEMENT

ಮೊದಲ ಆಲ್ಬಮ್ ಹಾಡನ್ನು ಮಾಡಿದಾಗಿನಿಂದಲೂ ನಮ್ಮ ಊರಿನ ಜನರು, ಸ್ನೇಹಿತರು ಮತ್ತು ಭಾಷೆ ಇತ್ತು. ಎಲ್ಲರೂ ಬೆಳಕಿಗೆ ಬರಬೇಕೆಂದು ಯೋಚಿಸುತ್ತಿದ್ದೆ. ಆ ರೀತಿ ಯೋಚಿಸುವುದು ತಪ್ಪೆನ್ನುತ್ತಿದ್ದಾರೆ ಜನ. ಹವ್ಯಾಸ ಎನ್ನುವಂತೆ ವರ್ಷಕ್ಕೊಂದು ಸಿನಿಮಾ ಮಾಡಿ ಆ ಮೂಲಕ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸ ಮಾಡುತ್ತಿದ್ದೆ ಎಂದು ನೋವಿನಿಂದ ನುಡಿದಿದ್ದಾರೆ.

ನನ್ನನ್ನು ಬೆಳೆಸಿದ ನಮ್ಮೂರಿನ 9.5 ಲಕ್ಷಕ್ಕೂ ಅಧಿಕ ಜನರಿದ್ದಾರೆ. ಅವರು ಯಾರಿಗೂ 280 ಮಕ್ಕಳ ಕೂಗು ಕೇಳಿಸಲಿಲ್ಲ. ಕೇವಲ 1,286 ಜನ ಮಾತ್ರ ಚಿತ್ರಮಂದಿಕ್ಕೆ ಬಂದು ಚಿತ್ರ ವೀಕ್ಷಿಸಿದ್ದಾರೆ. ರವಿ ಬಸ್ರೂರ್ ಅವರನ್ನು ಬಿಟ್ಟು ಬಿಡಿ ಆದರೆ ಮಕ್ಕಳ ಸಿನಿಮಾವನ್ನು ನೋಡುತ್ತಿಲ್ಲ ಎನ್ನುವುದೇ ನೋವು. 'ಗಿರ್ಮಿಟ್' ಸಿನಿಮಾವನ್ನು ಚಿತ್ರಮಂದಿರಗಳಿಂದ ತೆಗೆದಿದ್ದಾರೆ. ಆದರೆ ಅವರದು ತಪ್ಪಲ್ಲ. ಆದರೆ ಇಲ್ಲಿ ಯಾರದ್ದು ತಪ್ಪು ಎಂದು ತಿಳಿಯುತ್ತಿಲ್ಲ ಎಂದು ರವಿ ಬಸ್ರೂರು ಕಣ್ಣೀರಿಟ್ಟಿದ್ದಾರೆ.

ಗ್ರೂಪಿನಲ್ಲಿ ಚರ್ಚೆಯಾಗುತ್ತಿತ್ತು. ಆಗ ದುಖಃ ತಡೆಯಲಾರದೆ ಈ ವಿಡಿಯೋ ಮಾಡಿ ನನ್ನ ನೋವನ್ನು ಹಂಚಿಕೊಳ್ಳುತ್ತಿದ್ದೇನೆ. ಇನ್ನು ಮುಂದೆಯೂ ನಾನು ನನ್ನ ಪ್ರಯತ್ನವನ್ನು ಮಾಡುತ್ತೇನೆ. ಏನಾದರೂ ಸಾಧಿಸಬೇಕೆಂದು ನಾನು ಇಷ್ಟೆಲ್ಲ ಮಾಡುತ್ತಿದ್ದೇನೆ. ಮಕ್ಕಳ ಕೂಗು ಕೇಳಿಸಲಿಲ್ಲವಲ್ಲ ಎಂದು ಮನಸ್ಸು ಗಟ್ಟಿಯಾಗಿದೆ. ಮುಂದೆ ಹೊಸದೊಂದು ಪ್ರಯೋಗದೊಂದಿಗೆ ಬಂದೇ ಬರುತ್ತೇನೆ ಎಂದು ನಮ್ಮ ತಂಡದವರಿಗೆ ಭರಸವೆ ನೀಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.