ADVERTISEMENT

ರೆಬೆಲ್ ನಟಿ ಅಂಜಲಿ

ರಾಹುಲ ಬೆಳಗಲಿ
Published 18 ಫೆಬ್ರುವರಿ 2019, 20:00 IST
Last Updated 18 ಫೆಬ್ರುವರಿ 2019, 20:00 IST
ಅಂಜಲಿ ಪಾಟೀಲ್‌
ಅಂಜಲಿ ಪಾಟೀಲ್‌   

ಅಂಜಲಿ ಪಾಟೀಲ. ರಂಗಭೂಮಿ ಹಿನ್ನೆಲೆಯುಳ್ಳ ನಟಿ. ಅಭಿನಯಿಸಿದ್ದು ಬೆರಳೆಣಿಕೆಯಷ್ಟು ಚಿತ್ರಗಳು. ಆದರೆ ಬಹುತೇಕ ಪಾತ್ರಗಳು ಅಪ್ಪಟ ‘ರೆಬೆಲ್’. ಹಿಂದಿ, ಮರಾಠಿ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಅಭಿನಯಿಸಿರುವ ಅವರು ಶ್ರೀಲಂಕಾದ ಸಿನಿಮಾದಲ್ಲೂ ನಟಿಸಿ ಪ್ರಶಸ್ತಿ ಗಳಿಸಿದ್ದಾರೆ. ಪರ್ಯಾಯ ಮತ್ತು ಚಿಂತನೆ ಮೂಡಿಸಬಲ್ಲ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿರುವ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಜನಿಸಿದ ಅಂಜಲಿ ಶಾಲೆಯಲ್ಲಿ ಕಲಿಯುವ ಹಂತದಲ್ಲೇ ಅಭಿನಯದತ್ತ ಒಲವು ಬೆಳೆಸಿಕೊಂಡರು. ಕಲಾ ಕ್ಷೇತ್ರದಲ್ಲೇ ಮುಂದುವರೆಯಬೇಕು ಎಂದು ಪಣ ತೊಟ್ಟ ಅವರು ಪುಣೆ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಪರ್‌ಫಾರ್ಮಿಂಗ್ ಆರ್ಟ್ಸ್‌ವಿಭಾಗದಲ್ಲಿ ಅಧ್ಯಯನ ಮಾಡಿದರು. ಅತ್ಯುತ್ತಮ ಅಂಕಗಳೊಂದಿಗೆ ಕಲಾ ಪದವಿ ಪೂರ್ಣಗೊಳಿಸಿದ ಅವರು ಚಿನ್ನದ ಪದಕ ಕೂಡ ಗಳಿಸಿದರು. ನಂತರ ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್ಎಸ್‌ಡಿ) ಸೇರಿಕೊಂಡ ಅವರು ವಿವಿಧ ಚಿತ್ರಗಳಲ್ಲಿ ಅಭಿನಯಿಸಲು ಆರಂಭಿಸಿದರು.

ಹಿರಿ, ಕಿರು ತೆರೆಯಲ್ಲಿ...

ADVERTISEMENT

2011ರಲ್ಲಿ ತೆರೆ ಕಂಡ ಇಂಗ್ಲಿಷ್-ಹಿಂದಿ ಭಾಷೆಯ ‘ಡೆಲ್ಲಿ ಇನ್ ಎ ಡೇ’ ಚಿತ್ರದಲ್ಲಿ ಉತ್ತಮ ಅಭಿನಯದ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ ಅಂಜಲಿ, ‘ಗ್ರೀನ್ ಬ್ಯಾಂಗಲ್ಸ್’ ಎಂಬ ಕಿರುಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಮಾಡಿದರು. ಇದು ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆಯನ್ನು ತಂದುಕೊಟ್ಟಿತು.

ಪ್ರಕಾಶ್ ಝಾ ನಿರ್ದೇಶನದ ನಕ್ಸಲ್‌ವಾದ ಕಥೆಯಾಧಾರಿತ ‘ಚಕ್ರವ್ಯೂಹ‘ದಲ್ಲಿ ಅವರು ಅಭಿನಯಿಸಿದ ರೆಬಲ್ ಪಾತ್ರ ದೀರ್ಘ ಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಿತು. ಒಬ್ಬ ನಕ್ಸಲ್ ಮಹಿಳೆಯಾಗಿ ಎದುರಿಸಬೇಕಾಗುವ ಸವಾಲು, ಪೊಲೀಸರಿಂದ ಆಗುವ ಹಿಂಸೆ, ಸಹಚರರಿಂದ ಆಗುವ ವಂಚನೆ, ಸಂಕಷ್ಟಗಳ ಮಧ್ಯೆಯೂ ಪುಟಿದೇಳುವ ಛಲ, ಎಷ್ಟೇ ತುಳಿಯಲೆತ್ನಿಸಿದರೂ ಬಂಡಾಯ ಏಳುವ ಮನಸ್ಸು ಎಲ್ಲವೂ ನಕ್ಸಲ್ ‘ಜೂಹಿ’ ಪಾತ್ರದಲ್ಲಿ ಮೇಳೈಸಿದ್ದವು. ಅತ್ಯುತ್ತಮ ನಟಿ ಪ್ರಶಸ್ತಿಗೆ ಅವರು ನಾಮನಿರ್ದೇನಗೊಂಡರು. ಆದರೆ ತೀವ್ರ ಪೈಪೋಟಿ ಮಧ್ಯೆ ಪ್ರಶಸ್ತಿ ಗಳಿಸಲು ಸಾಧ್ಯವಾಗಲಿಲ್ಲ.

ರಜನಿಕಾಂತ್‌ ನಾಯಕನಟರಾಗಿದ್ದ ‘ಕಾಲಾ’ ಚಿತ್ರದಲ್ಲಿ ಅಂಜಲಿ ಮಾಡಿದ್ದೂ ಜೂಹಿಯಂತಹುದೇ ಪಾತ್ರ.ಬಂಡಾಯದ ಮನಸ್ಥಿತಿಯ ‘ಪುಯಲ್‌’ ಪಾತ್ರವನ್ನು ಅವರು ಅತ್ಯುತ್ತಮವಾಗಿ ನಿರ್ವಹಿಸಿದರು. ಧಾರಾವಿ ಕೊಳೆಗೇರಿಯಲ್ಲಿ ನಿತ್ಯ ನಡೆಯುವ ಹೋರಾಟ, ಪ್ರತಿಭಟನೆ, ಪೊಲೀಸರು ಮತ್ತು ಪ್ರಭಾವಿ ವ್ಯಕ್ತಿಗಳ ವಿರುದ್ಧ ನಡೆಯುವ ಸಂಘರ್ಷದ ಕತೆ ಈ ಚಿತ್ರದ್ದು. ಅಂಜಲಿ ಪ್ರಭಾವಶಾಲಿಯಾಗಿ ಮಿಂಚಿದರು.

ಶ್ರೀಲಂಕಾದ ಚಿತ್ರಕ್ಕಾಗಿ ಪ್ರಶಸ್ತಿ

ಶ್ರೀಲಂಕಾದ ಚಿತ್ರ ನಿರ್ದೇಶಕ ಪ್ರಸನ್ನ ವಿತಂಗೆ ನಿರ್ದೇಶನದ ‘ಓಬಾ ನಥುಆ ಓಬಾ ಏಕ್ಕಾ’ (ನಿನ್ನ ಜೊತೆಗೂ-ನಿನ್ನ ಜೊತೆಗೆ ಇಲ್ಲದೆಯೂ) ಚಿತ್ರದ ಮೂಲಕ ಅಂಜಲಿಗೆ ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರು. ಶ್ರೀಲಂಕಾದ ಸಿಂಹಳ ಭಾಷೆಯನ್ನು ಕಲಿತು ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿದ್ದು ವಿಶೇಷ. ಈ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಅವರು 2012ರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿಲ್ವರ್ ಪೀಕಾಕ್ ಪ್ರಶಸ್ತಿಯನ್ನು ಪಡೆದರು.

‘ನಾ ಬಂಗಾರು ತಳ್ಳಿ’ ಎಂಬ ತೆಲುಗು ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕೆ ಅವರು ರಾಷ್ಟ್ರೀಯ ಪ್ರಶಸ್ತಿ ಪಡೆದರು. ಇವುಗಳು ಅಲ್ಲದೆ ಮಿರ್ಜ್‌ಯಾ, ಸಮೀರ್, ನ್ಯೂಟನ್, ಮೇರಿ ನಿಮ್ಮೊ ಚಿತ್ರಗಳಲ್ಲೂ ಅವರು ಪರಿಣಾಮಕಾರಿ ಪಾತ್ರ ನಿರ್ವಹಿಸಿದರು.

‘ಮೇರೆ ಪ್ಯಾರೇ ಪ್ರೈಮ್ ಮಿನಿಸ್ಟರ್’ನಲ್ಲೂ ಅಂಜಲಿ...

ಚಿತ್ರ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರ ‘ಮೇರೆ ಪ್ಯಾರೆ ಪ್ರೈಮ್ ಮಿನಿಸ್ಟರ್’ನಲ್ಲಿ ಅಂಜಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರ ಮಾರ್ಚ್‌ನಲ್ಲಿ ತೆರೆ ಕಾಣಲಿದೆ.

ತಾಯಿ ಮತ್ತು ಪುತ್ರನ ನಡುವಿನ ಮನೋಜ್ಞ ಕಥೆ ಇರುವ ಈ ಚಿತ್ರ, ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಬಗ್ಗೆಯೂ ಬೆಳಕು ಚೆಲ್ಲುತ್ತದೆ.

ಊರಿನ ಸಮಸ್ಯೆ ಮತ್ತು ಇನ್ನಿತರ ವಿಷಯಗಳಿಗೆ ಪರಿಹಾರ ದೊರಕಿಸುವಂತೆ ಕೋರಿ ಮಕ್ಕಳು ದೇಶದ ಪ್ರಧಾನಮಂತ್ರಿಯನ್ನು ಭೇಟಿಯಾಗಲು ಹೊರಟು ಬಿಡುತ್ತಾರೆ. ಅವರು ಎಂತಹ ಹಾದಿಗಳಿಂದ ಸಾಗಿ ಹೋಗಬೇಕಾಗುತ್ತದೆ. ಅವರಿಗೆ ಎದುರಾಗುವ ಅಡ್ಡಿ, ಆತಂಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಈ ಚಿತ್ರವು ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಈ ಚಿತ್ರದಲ್ಲಿ ಅಂಜಲಿ ‘ಸರ್ಗಂ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಮತ್ತು ಅವರ ಮಗ ಕನ್ಹುಪಾತ್ರವನ್ನು ಓಂ ಕನೋಜಿಯಾ ನಿರ್ವಹಿಸಿದ್ದಾರೆ.

ಮುಂಬೈಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಗಾಂಧಿನಗರ ಎಂಬ ಕೊಳೆಗೇರಿಯಲ್ಲಿ ಗುಡಿಸಲು, ಮೊಬೈಲ್ ಫೋನ್, ಡಿಶ್ ಟಿವಿ ಸೇರಿದಂತೆ ಎಲ್ಲವೂ ಲಭ್ಯ. ಆದರೆ ಶೌಚಾಲಯ ಮಾತ್ರ ಇಲ್ಲ. ಪುರುಷರು ಹಗಲು ಹೊತ್ತಿನಲ್ಲಿ ಎಲ್ಲಿ ಬೇಕೆಂದಲ್ಲಿ ಶೌಚಕ್ಕೆ ಹೋದರೆ, ಮಹಿಳೆಯರು ಮಧ್ಯರಾತ್ರಿಯಲ್ಲಿ ಕತ್ತಲು ಆವರಿಸಿದ ಜಾಗದಲ್ಲಿ ಶೌಚಕ್ಕೆ ಹೋಗಬೇಕು. ಬೇರೆ ಬೇರೆ ಸಮಸ್ಯೆಯೂ ಎದುರಿಸಬೇಕು. ತಾಯಿ ಅನುಭವಿಸುವ ಈ ಕಷ್ಟವನ್ನು ನೋಡಲು ಮಗನಿಗೆ ಸಾಧ್ಯವಾಗುವುದಿಲ್ಲ. ಹೇಗಾದರೂ ಮಾಡಿ ಶೌಚಾಲಯ ಕಲ್ಪಿಸಬೇಕು ಎಂದು ಪಣ ತೊಡುವ ಆತ ಪ್ರಧಾನಮಂತ್ರಿ ಭೇಟಿಗಾಗಿ ಸ್ನೇಹಿತರೊಂದಿಗೆ ದೆಹಲಿಗೆ ಹೊರಡುತ್ತಾನೆ. ಮಕ್ಕಳಿಗೆ ಪ್ರಧಾನಮಂತ್ರಿ ಸಿಗುವರೇ ಮತ್ತು ದೆಹಲಿಯ ಪ್ರಯಾಣ ಯಶಸ್ವಿಯಾಗುವುದೇ ಎಂಬುದೇ ಈ ಚಿತ್ರದ ಕುತುಹೂಲಕರ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.