ಬೆಂಗಳೂರು: ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಕಿರುತೆರೆಯ ನಟರಾದ ವಿನಯ್‌ಗೌಡ ಹಾಗೂ ರಜತ್ ಕಿಶನ್ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಶನಿವಾರ ಬಿಡುಗಡೆಯಾದರು.
ನಗರದ 24ನೇ ಎಸಿಜೆಎಂ ನ್ಯಾಯಾಲಯವು ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಜೈಲಿನ ಅಧಿಕಾರಿಗಳಿಗೆ ಶನಿವಾರ ಬೆಳಿಗ್ಗೆ ಆರೋಪಿಗಳ ಪರವಾಗಿ ವಾದ ಮಂಡಿಸಿದ್ದ ವಕೀಲರು ಜಾಮೀನು ಆದೇಶವನ್ನು ಹಸ್ತಾಂತರಿಸಿದರು. ಬಳಿಕ ಜೈಲಿನಿಂದ ಇಬ್ಬರೂ ಹೊರಬಂದರು.
ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿ ಅದನ್ನು ಇನ್‌ಸ್ಟಾಗ್ರಾಂನ ‘ಬುಜ್ಜಿ’ ಖಾತೆಯಲ್ಲಿ ಹಾಕಿದ್ದರು. ಅದನ್ನು ಗಮನಿಸಿದ ಬಸವೇಶ್ವರ ನಗರ ಠಾಣೆಯ ಪೊಲೀಸರು, ಇಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಫೈಬರ್ ಮಚ್ಚನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು ಪತ್ತೆಯಾಗಿತ್ತು. ಬಳಿಕ ಸಾಕ್ಷ್ಯ ನಾಶ ಪಡಿಸಿದ್ದ ಆರೋಪದಡಿ ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.