ADVERTISEMENT

ಸಾಮಾನ್ಯರಿಗೆ ವಸ್ತ್ರವಿನ್ಯಾಸ ಮಾಡುವುದಿಷ್ಟ

ಮಂಜುಶ್ರೀ ಎಂ.ಕಡಕೋಳ
Published 6 ಮಾರ್ಚ್ 2019, 19:30 IST
Last Updated 6 ಮಾರ್ಚ್ 2019, 19:30 IST
ರಿನಾ ಢಾಕಾ
ರಿನಾ ಢಾಕಾ   

ನಿಮ್ಮನ್ನು ಬುದ್ಧಿವಂತ ಮಹಿಳೆಯರ ವಸ್ತ್ರವಿನ್ಯಾಸಕಿ ಎಂತಲೇ ಗುರುತಿಸುತ್ತಾರಲ್ಲ...
ನಿಜ. ಸೌಂದರ್ಯ ಮತ್ತು ಬುದ್ಧಿವಂತಿಕೆಯ ಸಮ್ಮಿಶ್ರಣವಾಗಿರುವ ಮಹಿಳೆಯರಿಗೆ ಹೆಚ್ಚು ವಸ್ತ್ರವಿನ್ಯಾಸ ಮಾಡಿದ್ದೇನೆ. ಹಾಗಾಗಿ, ಮಹಿಳಾ ಬರಹಗಾರರು ನನ್ನನ್ನು ಈ ರೀತಿ ಗುರುತಿಸುತ್ತಿರಬಹುದು. ಸ್ವಂತ ಬಲದಿಂದ ಆತ್ಮವಿಶ್ವಾಸ ರೂಢಿಸಿಕೊಂಡಿರುವ, ಜೀವನದ ಹೋರಾಟದ ಹಾದಿಯಲ್ಲಿ ಯಶಸ್ಸು ಗಳಿಸಿದವರಿಗೆ ವಸ್ತ್ರವಿನ್ಯಾಸ ಮಾಡುವುದು ನನಗಿಷ್ಟ.

ನಿಮ್ಮ ಹೊಸ ಸಂಗ್ರಹದ ಬಗ್ಗೆ ಹೇಳಿ
ಈಚೆಗೆ ಬ್ಲೆಂಡರ್ಸ್ ಪ್ರೈಡ್‌ ಮ್ಯಾಜಿಕಲ್ ನೈಟ್‌ಗಾಗಿ ವಿಶೇಷ ಸಂಗ್ರಹವನ್ನು ರೂಪಿಸಿದ್ದೇನೆ. ಸಾಮಾನ್ಯವಾಗಿ ಕತ್ತಲೆ ಎಂದರೆ ನಮ್ಮಲ್ಲಿ ಕೆಟ್ಟದ್ದು ಎಂಬರ್ಥದ ಭಾವವಿದೆ. ಕತ್ತಲೆಯಲ್ಲೂ ಭರವಸೆಯ ಕಿರಣವೊಂದಿರುತ್ತದೆ ಎಂಬುದು ನನ್ನ ನಂಬಿಕೆ. ಅದನ್ನು ಆಧರಿಸಿಯೇ ಈ ಸಂಗ್ರಹವನ್ನು ವಿನ್ಯಾಸ ಮಾಡಿದ್ದೇನೆ. ಇದಕ್ಕಾಗಿ ಕಪ್ಪು ಬಣ್ಣವನ್ನು ಹೆಚ್ಚು ಬಳಸಿದ್ದೇನೆ. ಇದರ ಜತೆಗೆ ಕಡು ಹಸಿರು, ತಿಳಿ ಗುಲಾಬಿ, ಬೂದು, ಮರೂನ್ ಬಣ್ಣಗಳ ಸಮ್ಮಿಶ್ರಣವೂ ಇದರಲ್ಲಿದೆ.

ಷೋ ಸ್ಟಾಪರ್ ಯಾಮಿ ಗೌತಮ್‌ಗೆ ವಿನ್ಯಾಸ ಮಾಡಿರುವ ಉಡುಗೆಯ ವಿಶೇಷವೇನು?
ಯಾಮಿ ಸುಂದರಿ ಮಾತ್ರವಲ್ಲ ಬುದ್ಧಿವಂತೆ ಕೂಡಾ. ಆಕೆಯ ಪ್ರತಿ ಸಿನಿಮಾವೂ ಭಿನ್ನ. ಬ್ಲೆಂಡರ್ಸ್‌ ಪ್ರೈಡ್ ಮ್ಯಾಜಿಕಲ್ ನೈಟ್ ಷೋಸ್ಟಾಪರ್ ಆಗಿ ಆಕೆಯ ಲುಕ್ ನಮ್ಮ ವಿನ್ಯಾಸವನ್ನು ಪ್ರತಿನಿಧಿಸುವಂತಿರಬೇಕು. ಹಾಗಾಗಿ, ಯಾಮಿಗೆ ತೋಳಿಲ್ಲದ ಸರಳ–ಆಧುನಿಕ ಉಡುಗೆ ವಿನ್ಯಾಸ ಮಾಡಲಾಗಿದೆ. ಕಪ್ಪು ದಿರಿಸಿನಲ್ಲಿ ಯಾಮಿ ಸುಂದರವಾಗಿ ಕಾಣುತ್ತಾರೆ.

ADVERTISEMENT

ಅಂತರರಾಷ್ಟ್ರೀಯ ಮಟ್ಟದ ರೂಪದರ್ಶಿಯರು ನಿಮ್ಮ ಗ್ರಾಹಕರು. ನಿಮ್ಮ ಫೇವರಿಟ್ ಯಾರು?
ರೂಪದರ್ಶಿಯರೆಲ್ಲ ನಿರ್ದಿಷ್ಟ ಪ್ರಮಾಣದ ಅಂಗಸೌಷ್ಟವ, ಉದ್ದನೆಯ ಕಾಲುಗಳನ್ನೇ ಹೊಂದಿರುತ್ತಾರೆ. ಅಂಥವರಿಗೆ ವಸ್ತ್ರವಿನ್ಯಾಸ ಮಾಡುವುದು ವಿಶೇಷ ಸಂಗತಿಯಲ್ಲ. ಆದರೆ, ಯಾರು ರೂಪದರ್ಶಿ ಆಗಿರುವುದಿಲ್ಲವೋ ಅಂಥವರ ದೇಹಕ್ಕೆ ಒಪ್ಪುವ, ಅವರನ್ನು ಅಂದಗಾಣಿಸುವಂತೆ ಮಾಡುವುದು ವಸ್ತ್ರವಿನ್ಯಾಸಕಾರರಿಗೆ ಸವಾಲಿನ ಸಂಗತಿ.

ನನಗೆ ಇಂಥ ಸವಾಲುಗಳು ತುಂಬಾ ಇಷ್ಟ. ಬೆಂಗಳೂರಿನಲ್ಲೇ ಒಬ್ಬ ಗ್ರಾಹಕರಿದ್ದಾರೆ. ಅವರು ಪ್ಲಸ್ ಸೈಜ್ ಇದ್ದಾರೆ. ಅವರು ತಮ್ಮ ಉಡುಪುಗಳಲ್ಲಿ ಸುಂದರವಾಗಿ ಕಾಣಬೇಕೆಂಬುದು ನನ್ನಾಸೆ. ಸಾಮಾನ್ಯರಿಗೆ ವಸ್ತ್ರವಿನ್ಯಾಸ ಮಾಡುವುದು ನನಗಿಷ್ಟ.

ಈ ಬಾರಿಯ ಬೇಸಿಗೆಯ ಟ್ರೆಂಡ್ ಹೇಗಿದೆ?
ಈಗಂತೂ ಎಲ್ಲಾ ಕಾಲಕ್ಕೆ ಎಲ್ಲಾ ರೀತಿಯ ಉಡುಪುಗಳನ್ನು ಧರಿಸುತ್ತಿದ್ದಾರೆ. ಈ ಬೇಸಿಗೆಯಲ್ಲಿ ಚೆಕ್ಸ್, ನೀಲಿ, ಕಪ್ಪು–ಬಿಳುಪು, ಹಾಲಿನ ಬಿಳುಪಿನ ಬಣ್ಣಗಳು ಟ್ರೆಂಡಿಯಾಗಿವೆ. ಜ್ಯಾಮಿತಿಯ ವಿನ್ಯಾಸ ಮತ್ತು ಮಿಕ್ಸ್ ಅಂಡ್ ಮ್ಯಾಚ್ ಕೂಡಾ ಟ್ರೆಂಡ್‌ನ ಮುಂಚೂಣಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.