ADVERTISEMENT

BIFFES 2022: ಚಿತ್ರೋತ್ಸವದಲ್ಲಿ ಸಿಗದ ಅವಕಾಶ– ‘ಪೆದ್ರೊ’, ‘ನೀಲಿಹಕ್ಕಿ’ಯ ಅಳಲು

ಚಿತ್ರೋತ್ಸವದಲ್ಲಿ ತೆರೆ ಸಿಗದ ಬೇಸರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 10:11 IST
Last Updated 2 ಮಾರ್ಚ್ 2022, 10:11 IST
‘ಪೆದ್ರೊ’ ಸಿನಿಮಾದ ದೃಶ್ಯ
‘ಪೆದ್ರೊ’ ಸಿನಿಮಾದ ದೃಶ್ಯ   

ಬೆಂಗಳೂರು: 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಪೆದ್ರೋ’ ಹಾಗೂ ‘ನೀಲಿಹಕ್ಕಿ’ ಪ್ರದರ್ಶನಕ್ಕೆ ಅವಕಾಶ ಸಿಗದಿರುವುದಕ್ಕೆ ಈ ಚಿತ್ರಗಳ ನಿರ್ದೇಶಕರು ಬೇಸರ ಹೊರಹಾಕಿದ್ದಾರೆ.

ತಮ್ಮ ಸಂಸ್ಥೆಯ ನಿರ್ಮಾಣದ ‘ಪೆದ್ರೋ’ ಚಿತ್ರದ ಪ್ರದರ್ಶನಕ್ಕೆ ಅವಕಾಶ ಸಿಗದಿರುವುದಕ್ಕೆ ನಿರ್ಮಾಪಕ ರಿಷಬ್‌ ಶೆಟ್ಟಿ ಬೇಸರ ಹೊರಹಾಕಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿರಿಷಬ್‌ ಅವರ ಬಹಿರಂಗ ಪತ್ರವೊಂದನ್ನು ಪ್ರಕಟಿಸಿರುವ ‘ಪೆದ್ರೊ’ ಚಿತ್ರದ ನಟ ರಾಜ್‌ ಬಿ. ಶೆಟ್ಟಿ, ‘ ‘ಪೆದ್ರೊ’ ಚಿತ್ರದ ಖಾಸಗಿ ಪ್ರದರ್ಶನ ನಡೆದಾಗ ಖ್ಯಾತ ನಿರ್ದೇಶಕರು, ಕಲಾವಿದರು ವೀಕ್ಷಿಸಿ ಬೆನ್ನುತಟ್ಟಿದ್ದರು. ಆ ಚಿತ್ರದ ಟ್ರೇಲರ್‌ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಿದ್ದರೂ ‘ಪೆದ್ರೋ’ ಸಿನಿಮಾ ಬೆಂಗಳೂರಿನ ಚಿತ್ರೋತ್ಸವಕ್ಕೆ ರುಚಿಸಿಲ್ಲ. ಕೆಲವೊಮ್ಮೆ ಕಹಿಗುಳಿಗೆಯನ್ನೂ ನುಂಗಬೇಕು ಆರೋಗ್ಯದ ದೃಷ್ಟಿಯಿಂದ’ ಎಂದು ಹೇಳಿದ್ದಾರೆ.

ADVERTISEMENT

‘ಸಿನಿಮಾ ಎಂಬ ನದಿಗೆ ಎಲ್ಲ ತೊರೆಗಳು ಬಂದು ಸೇರಬೇಕು. ನಮ್ಮಲ್ಲಿಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅದಕ್ಕೆ ತಡೆಗಾಲು ಒಡ್ಡುವ ಪ್ರಯತ್ನ ಮಾಡಿದ್ದಾರೆ. ನಾವೆಲ್ಲ ಇವತ್ತು ಕುಳಿತಿರುವ ಜಾಗ ಸಿನಿಮಾ ಎಂಬ ಮಾಧ್ಯಮ ನೀಡಿದ ಭಕ್ಷೀಸು. ಒಂದು ಸಿನಿಮಾ ಜನರಿಗೆ ತಲುಪುವುದನ್ನು ತಪ್ಪಿಸುತ್ತೇವೆ ಎಂದುಕೊಂಡರೆ ನೀರನ್ನು ಹಿಮ್ಮುಖ ಹರಿಸುತ್ತೇವೆ ಎಂದುಕೊಂಡಂತೆ’ ಎಂದು ಕಿಡಿ ಕಾರಿದ್ದಾರೆ.

ಸಿನಿಮಾವನ್ನು ಎಲ್ಲಿ ನೋಡಬಹುದು ಎಂದು ಕೇಳುತ್ತಿರುವ ಪ್ರೀತಿಯ ಜನರಲ್ಲಿ ಒಂದೇ ಕೋರಿಕೆ ದಯವಿಟ್ಟು ಹೀಗೆ ಎಂದಿಗೂ ನಮ್ಮೊಂದಿಗಿರಿ. ಪೆದ್ರೊವನ್ನು ನಿಮ್ಮೆಡೆಗೆ ತಲುಪಿಸುವುದು ನಮ್ಮ ಬದ್ಧತೆ ಎಂದಿದ್ದಾರೆ.

‘ನೀಲಿಹಕ್ಕಿ’ ಚಿತ್ರಕ್ಕೂ ಚಿತ್ರೋತ್ಸವದಲ್ಲಿ ಪ್ರದರ್ಶನದ ಅವಕಾಶ ಸಿಗದಿರುವುದಕ್ಕೆ ನಿರ್ದೇಶಕ ಗಣೇಶ ಹೆಗಡೆ ಬೇಸರ ಹೊರಹಾಕಿದ್ದಾರೆ. ಟೊರಾಂಟೋ, ಗೋವಾದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಈ ಚಿತ್ರಕ್ಕೆ ನಮ್ಮಲ್ಲೇ ಅವಕಾಶ ಸಿಕ್ಕಿಲ್ಲ. ಬೆಂಗಳೂರಿನ ಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶಿಸಲು ಬೇಕಾದ ಮಾನದಂಡಗಳೇನು ಎಂಬುದನ್ನು ಹುಡುಕುತ್ತಿದ್ದೇನೆ ಎಂದು ಅವರು ಬೇಸರ ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.