ADVERTISEMENT

‘ಬಾಬ್ಬಿ’ಯಿಂದ ‘ಮುಲ್ಕ್‌’ವರೆಗೆ... ನಟ ರಿಷಿ ಕಪೂರ್ ಪಯಣ

ಬಿ.ಎಂ.ಹನೀಫ್
Published 1 ಮೇ 2020, 6:25 IST
Last Updated 1 ಮೇ 2020, 6:25 IST
ರಿಷಿ ಕಪೂರ್‌
ರಿಷಿ ಕಪೂರ್‌   

ರಿಷಿ ಕಪೂರ್‌..! ಹಿಂದಿ ಚಿತ್ರರಂಗದ ಲವರ್‌ ಬಾಯ್‌, ಚಾಕೊಲೇಟ್‌ ಹೀರೊ, ರೊಮ್ಯಾಂಟಿಕ್‌ ಹೀರೊ, ಆ್ಯಂಗ್ರಿ ಮ್ಯಾನ್‌! ಏನು ಬೇಕಾದರೂ ಕರೆಯಬಹುದು. ಅದಕ್ಕೆ ಕಾರಣಗಳೂ ಇವೆ. ಅಜ್ಜ, ಅಪ್ಪ, ಸೋದರರು ಎಲ್ಲರೂ ಚಿತ್ರರಂಗದಲ್ಲಿ ದುಡಿದವರೇ. ಸಿನಿಮಾ ಕುಟುಂಬದಲ್ಲಿ ಹುಟ್ಟಿ, ಸಿನಿಮಾದೊಂದಿಗೆ ಬೆಳೆದು, ಸಿನಿಮಾದಲ್ಲಿ ನಟಿಸುತ್ತಿರುವ ಕಾಲದಲ್ಲೇ ತೀರಿಕೊಂಡ ರಿಷಿ ಕಪೂರ್‌ ಬಿಟ್ಟು ಹೋದ ನೆನಪುಗಳಿಗೆ ಲೆಕ್ಕವಿಲ್ಲ. ಹಿಂದಿ ಚಿತ್ರರಂಗದಲ್ಲಿ ಸದಾ ನೆನಪಿರುವ ‘ಮುಗುಳ್ನಗೆಯ ಮುದ್ದು ಮುಖ’ ರಿಷಿ ಕಪೂರ್‌ ಅವರದ್ದು.

1973ರಲ್ಲಿ ತೆರೆಗೆ ಬಂದ ಚಿತ್ರ ‘ಬಾಬ್ಬಿ’, ಇವತ್ತಿಗೂ ಟ್ರೆಂಡ್‌ಸೆಟ್ಟರ್‌ ಎಂದೇ ಖ್ಯಾತಿ ಹೊಂದಿದೆ. ಅದು ರಿಷಿಗೆ ಬಾಲಿವುಡ್‌ನಲ್ಲಿ ಭದ್ರ ಸ್ಥಾನವೊಂದನ್ನು ಕಲ್ಪಿಸಿಕೊಟ್ಟ ಸಿನಿಮಾ. ಅದಕ್ಕೂ ಮುನ್ನ ಅಪ್ಪ ರಾಜ್‌ಕಪೂರ್‌ ಚಿತ್ರಗಳಲ್ಲಿ (ಮೇರಾ ನಾಮ್‌ ಜೋಕರ್‌) ಪುಟ್ಟ ಪಾತ್ರಗಳಲ್ಲಿ ನಟಿಸಿದ್ದುಂಟು. ಆದರೆ, ಹೀರೊ ಆದದ್ದು ‘ಬಾಬ್ಬಿ’ಯಲ್ಲಿ. ಅಪ್ಪನೇ ನಿರ್ದೇಶಕ. ಶ್ರೀಮಂತ ಹಿಂದೂ ಕುಟುಂಬದ ಹುಡುಗ, ಬಡ ಕ್ರಿಶ್ಚಿಯನ್‌ ಹುಡುಗಿಯನ್ನು ಪ್ರೀತಿಸುವ ಕಥೆ. ಆ ಕಾಲದಲ್ಲಿ ಅದು ಎರಡು ರೀತಿಯಿಂದ ಪರಿಣಾಮ ಬೀರುವಂಥದ್ದು.

ಬಡವ–ಶ್ರೀಮಂತರ ಘರ್ಷಣೆಯ ಜೊತೆಗೆ ಅಂತರ್ಧರ್ಮೀಯ ಮದುವೆಯ ಕಥೆ. ಷೋಮ್ಯಾನ್‌ ಎಂಬ ಹೆಸರಿಗೆ ತಕ್ಕಂತೆ ರಾಜ್‌ಕಪೂರ್,‌ ಮೇಲ್ನೋಟದ ಈ ಹುಸಿಘರ್ಷಣೆಯ ಕಥೆಗೆ, ಸ್ವಿಮಿಂಗ್‌ ಪೂಲ್‌ನಲ್ಲಿ ಕಥಾನಾಯಕಿ (ಡಿಂಪಲ್‌ ಕಪಾಡಿಯಾ)ಯನ್ನು ಟೂ ಪೀಸ್‌ನಲ್ಲಿ ಮುಳುಗೇಳಿಸಿದ್ದು ಹದಿಹರೆಯದ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿತು. ಆಗಿನ್ನೂ ಆಕೆಗೆ 15ರ ಹರೆಯ. ‘ಹಮ್‌ ತುಮ್‌ ಏಕ್‌ ಕಮ್‌ರೇ ಮೆ ಬಂಧ್‌ ಹೋ...’ ಎನ್ನುವುದು ಆಗ ಮನೆಮಾತಾದ ಹಾಡು. ಬಾಕ್ಸ್ಆಫೀಸ್‌ನಲ್ಲಿ ಚಿತ್ರ ಆ ಕಾಲದಲ್ಲೇ ₹ 30 ಕೋಟಿ ಬಾಚಿತು. ಬಾಲಿವುಡ್‌ನಲ್ಲಿ ಈವರೆಗೆ ಬಂದ ಅತ್ಯಧಿಕ ಕಲೆಕ್ಷನ್‌ನ 20 ಚಿತ್ರಗಳಲ್ಲಿ ಇದೂ ಒಂದು ಎಂದು ದಾಖಲೆಯ ಪುಸ್ತಕದಲ್ಲಿದೆ. ‘ಚಾಕೊಲೇಟ್‌ ಹೀರೊ’ ಎನ್ನುವ ಹೆಸರೂ ಬಹುಶಃ ಅದೇ ಮೊದಲ ಬಾರಿಗೆ ಹಿಂದಿ ಚಿತ್ರರಂಗದಲ್ಲಿ ಅಚ್ಚೊತ್ತಿದ್ದು.

ADVERTISEMENT

1973ರಿಂದ 2000ದವರೆಗೆ ಸುಮಾರು 92 ಸಿನಿಮಾಗಳಲ್ಲಿ ರಿಷಿ ನಟಿಸಿದರು. ಮೂರು ದಶಕಗಳಲ್ಲಿ ರೊಮ್ಯಾಂಟಿಕ್‌ ಹೀರೊ ಎಂಬ ಇಮೇಜ್‌ಗೆ ಅಂಟಿಕೊಂಡೇ ಉಳಿದರು. 80ರ ದಶಕದಲ್ಲಿ ಸಿಂಗಲ್‌ ಹೀರೊಗಳ ಸಿನಿಮಾಗಳ ಕಲೆಕ್ಷನ್‌ ಕಡಿಮೆಯಾಗ ತೊಡಗಿದಾಗ ಮಲ್ಟಿಸ್ಟಾರ್‌‌ಗಳ ಯುಗ ಆರಂಭವಾಗಿತ್ತು. ಆಗಲೂ ರಿಷಿ ಅನಿವಾರ್ಯವೇ ಆಗಿದ್ದರು. ಮನಮೋಹನ್‌ ದೇಸಾಯಿ ಎಂಬ ಇನ್ನೊಬ್ಬ ಷೋಮ್ಯಾನ್‌ ನಿರ್ದೇಶಕರ ‘ಅಮರ್‌ ಅಕ್ಬರ್‌ ಅಂತೋನಿ’ ಇದಕ್ಕೆ ಸಾಕ್ಷಿ. ಅಮಿತಾಭ್‌, ವಿನೋದ್‌ ಖನ್ನಾ ಮತ್ತು ರಿಷಿ ಕಾಂಬಿನೇಷನ್‌. ಆ ಬಳಿಕ ಬಾಕ್ಸ್‌ಆಫೀಸ್‌ನಲ್ಲಿ ಗೆದ್ದ ‘ನಸೀಬ್’ ಚಿತ್ರ ಇದರ ಪುನರಾವರ್ತನೆ. ಅಮಿತಾಭ್‌, ಶತ್ರುಘ್ನ ಸಿನ್ಹಾ ಮತ್ತು ರಿಷಿ ಕಪೂರ್‌.

ರಿಷಿ ಕಪೂರ್‌ ಸಿನಿಮಾಗಳಲ್ಲಿ ಅವರಿಗಿಂತ ಹೆಚ್ಚು ಹೀರೊಯಿನ್‌ಗಳೇ ವಿಜೃಂಭಿಸಿದ್ದೂ ಈ ಕಾಲಮಾನದಲ್ಲಿ ಗಮನ ಸೆಳೆದ ಇನ್ನೊಂದು ವಿದ್ಯಮಾನ. ‘ಚಾಂದಿನಿ’ ಮತ್ತು ‘ನಗೀನಾ’ದ ಶ್ರೀದೇವಿ ಮತ್ತು ‘ಸರ್‌ಗಮ್’ನ ಜಯಪ್ರದಾ ಇದಕ್ಕೆ ಉದಾಹರಣೆ. ಹಾಗೆಂದು ಆ ಚಿತ್ರಗಳಲ್ಲಿ ಆ ಕಾಲದ ಬೇರೆ ಹೀರೊಗಳನ್ನು ಕಲ್ಪಿಸಿಕೊಳ್ಳುವಂತಿರಲಿಲ್ಲ. ‘ಲೈಲಾ ಮಜ್ನೂ’, ‘ಪ್ರೇಮಗ್ರಂಥ್’‌, ‘ರಫೂ ಚಕ್ಕರ್’‌ ಹೀಗೆ ರಿಷಿಯಿಂದಲೇ ಗೆದ್ದ ಚಿತ್ರಗಳೂ ಸಾಕಷ್ಟಿವೆ. 92ರಲ್ಲಿ ಬಂದ ಶಾರೂಕ್‌ –ದಿವ್ಯಾ ಭಾರತಿ ಅಭಿನಯದ ‘ದೀವಾನಾ’ ಚಿತ್ರ ಗೆಲ್ಲಲೂ ರಿಷಿಯ ನಟನೆ ಮುಖ್ಯವಾಗಿತ್ತು. ರಿಷಿ ನಟಿಸಿದ್ದ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳ ಸೂಪರ್‌ಹಿಟ್‌ ಹಾಡುಗಳು ಇವತ್ತಿಗೂ ಸಿನಿಪ್ರೇಕ್ಷಕರ ಕಿವಿಗಳಲ್ಲಿ ಗುಂಯ್‌ಗುಡುತ್ತಿವೆ. ಆ ಹಾಡುಗಳ ಜೊತೆಗೇ ರಿಷಿಯ ಮುದ್ದುಮುಖವೂ.

ವೃತ್ತಿಜೀವನದಲ್ಲಿ ಇತ್ತೀಚಿನ ವರ್ಷಗಳಲ್ಲಿ ರಿಷಿಕಪೂರ್‌ ಸುದ್ದಿ ಮಾಡಿದ್ದು, ಅಭಿನಯ ಮತ್ತು ಕಥೆಯೇ ಮುಖ್ಯವಾಗಿದ್ದ ಬ್ರಿಜ್‌ ಮಾದರಿಯ ಚಿತ್ರಗಳಲ್ಲಿ. ‘ಕಪೂರ್‌ ಅಂಡ್‌ ಸನ್ಸ್’‌, ‘ಮುಲ್ಕ್’‌, ‘ಡಿ ಡೇ’ ಮತ್ತು ‘102 ನಾಟೌಟ್’‌ ಇವುಗಳಲ್ಲಿ ಮುಖ್ಯವಾದವು. ಭಾರತೀಯ ಮುಸ್ಲಿಂ ಕುಟುಂಬವೊಂದರ ಕಥೆಯನ್ನು ಹೇಳಿದ (ನಿರ್ದೇಶಕ ಅನುಭವ್‌ ಸಿನ್ಹಾ) ‘ಮುಲ್ಕ್‌’ನ ವಿವಾದ, ರಿಷಿ ಒಳಗಿದ್ದ ಆ್ಯಂಗ್ರಿ ಮ್ಯಾನ್‌ನನ್ನೂ ಹೊರಕ್ಕೆಳೆಯಿತು.

ಸಾಮಾನ್ಯವಾಗಿ ಸಮಾರಂಭಗಳಲ್ಲಿ ತಮಾಷೆಯ ಮೂಡ್‌ನಲ್ಲಿರುತ್ತಿದ್ದ ರಿಷಿ ಪತ್ರಿಕಾಗೋಷ್ಠಿಯಲ್ಲಿ ಸಿಟ್ಟಿಗೆದ್ದದ್ದನ್ನು ಕಂಡದ್ದು ಆಗಲೇ. ಆ ಸಿನಿಮಾ ಪಾಕಿಸ್ತಾನದಲ್ಲಿ ನಿಷೇಧಕ್ಕೆ ಒಳಗಾಯಿತು. ಭಾರತದಲ್ಲೂ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಯಿತು. ವಿವಾದಗಳಿಗೆ ಜಗ್ಗದ ರಿಷಿ ಕಪೂರ್‌, ‘ಒಂದು ದೇಶ ಸೃಷ್ಟಿಯಾಗುವುದೇ ಜನರಿಂದಮತ್ತು ಅವರ ಅಂತಃಸತ್ವದಿಂದ. ಹೌದು, ನಾನು ಸೆಕ್ಯುಲರಿಸ್ಟ್‌. ಮಾನವೀಯತೆಯಲ್ಲಿ ವಿಶ್ವಾಸ ಇರುವವನು’ ಎಂದು ಸಮಾರಂಭಗಳಲ್ಲೂ ಗಟ್ಟಿ ಧ್ವನಿಯಲ್ಲಿ ಮಾತನಾಡತೊಡಗಿದ್ದು ‘ಮುಲ್ಕ್‌’ ಚಿತ್ರದಲ್ಲಿ ಅವರ ಮುಸ್ಲಿಂ ತಂದೆಯ ಪಾತ್ರಕ್ಕೆ ಅನುಗುಣವಾಗಿಯೇ ಇತ್ತು.

ನೇರ ನಡೆ, ನುಡಿ ಹಿಂದೆಯೂ ಅವರ ವ್ಯಕ್ತಿತ್ವದ ಅಂಗವೇ ಆಗಿತ್ತು. 2017ರಲ್ಲಿ ಪ್ರಕಟವಾದ ಆತ್ಮಕಥೆ ‘ಖುಲ್ಲಂಖುಲ್ಲಾ: ರಿಷಿಕಪೂರ್‌ ಅನ್‌ಸೆನ್ಸಾರ್ಡ್‌’ ಕೂಡಾ ವಿವಾದ ಉಂಟು ಮಾಡಿತ್ತು. ಮೊದಲ ಚಿತ್ರ ‘ಬಾಬ್ಬಿ’ಯ ನಟನೆಗೆ ಫಿಲಂಫೇರ್‌ ಅತ್ಯುತ್ತಮ ನಟ ಪ್ರಶಸ್ತಿ ಪಡೆದದ್ದನ್ನು ರಿಷಿ ಇಲ್ಲಿ ನೆನಪಿಸಿಕೊಂಡಿದ್ದಾರೆ.

‘ಆಗ ಅತ್ಯುತ್ತಮ ನಟ ಪ್ರಶಸ್ತಿಗೆ ಅಮಿತಾಭ್‌ ಬಚ್ಚನ್‌ ಅವರ ಜಂಜೀರ್‌ ಚಿತ್ರದ ಪಾತ್ರವೂ ಸ್ಪರ್ಧೆಯಲ್ಲಿತ್ತು. ನಾನು ಆ ಪ್ರಶಸ್ತಿಯ ಸಲುವಾಗಿ ಒಬ್ಬರಿಗೆ ₹ 30,000 ಕೊಟ್ಟಿದ್ದೆ’ ಎಂದು ಆತ್ಮಕಥೆಯಲ್ಲಿ ಬರೆದದ್ದು ದೊಡ್ಡ ಕೋಲಾಹಲ ಉಂಟು ಮಾಡಿತ್ತು. ‘ಆದರೆ ಆ ವ್ಯಕ್ತಿಯಿಂದಲೇ ಪ್ರಶಸ್ತಿ ಸಿಕ್ಕಿತೋ ಅಥವಾ ಆತ ಒಬ್ಬ ಫ್ರಾಡ್‌ ಆಗಿದ್ದನೋ ಗೊತ್ತಿಲ್ಲ’ ಎಂದು ರಿಷಿ ಪುಸ್ತಕದಲ್ಲಿ ಬರೆದಿದ್ದರು.

ಕ್ಯಾನ್ಸರ್‌ ವಿರುದ್ಧ ಎರಡು ವರ್ಷಗಳ ಕಾಲ ರಿಷಿ ಕಪೂರ್‌ ನಡೆಸಿದ ಯುದ್ಧದಲ್ಲಿ ಗೆಲ್ಲಲಾಗಲಿಲ್ಲ. ಆದರೆ, 100ಕ್ಕೂ ಹೆಚ್ಚು ಸಿನಿಮಾಗಳ ಮೂಲಕ ಭಾರತೀಯ ಚಿತ್ರರಸಿಕರ ಹೃದಯ ಗೆದ್ದದ್ದು ಮಾತ್ರ ಮರೆಯಲಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.