ರಿತನ್ಯಾ ವಿಜಯ್
ನಟ ದುನಿಯಾ ವಿಜಯ್ ಮಗಳು ರಿತನ್ಯಾ ವಿಜಯ್, ಜಡೇಶ್ ಕೆ.ಹಂಪಿ ನಿರ್ದೇಶನದ ‘ಲ್ಯಾಂಡ್‌ಲಾರ್ಡ್’ ಮುಖಾಂತರ ಬೆಳ್ಳಿತೆರೆಗೆ ಹೆಜ್ಜೆ ಇಡುತ್ತಿದ್ದಾರೆ. ಇತ್ತೀಚೆಗೆ ಅವರ ಪಾತ್ರವನ್ನು ಚಿತ್ರತಂಡ ಪರಿಚಯಿಸಿದ್ದು, ‘ಭಾಗ್ಯ’ ಎನ್ನುವ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅಪ್ಪನ ಸಲಹೆಯಂತೆ ಹೆಜ್ಜೆ ಇಡುತ್ತಿರುವ ರಿತನ್ಯಾ ತಮ್ಮ ಪಾತ್ರದ ಬಗ್ಗೆ ಮಾತಿಗಿಳಿದರು.
ಸಿನಿಮಾ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿದ್ದು ಪೂರ್ವನಿರ್ಧರಿವೇ’ ಎಂಬ ಪ್ರಶ್ನೆಗೆ, ‘ಖಂಡಿತಾ. ನಾನು ಹುಟ್ಟಿ ಬೆಳೆದಿದ್ದು ಸಿನಿಮಾ ವಾತಾವರಣದಲ್ಲೇ. ಚಿಕ್ಕವಯಸ್ಸಿನಲ್ಲಿ ಬಿಡುವಿದ್ದ ವೇಳೆಯನ್ನು ಸಿನಿಮಾ ಸೆಟ್‌ನಲ್ಲೇ ಕಳೆಯುತ್ತಿದ್ದೆ. ಮುಂದೆ ನಾನೂ ನಟಿಯಾಗಬೇಕು ಎನ್ನುವ ಆಸೆ ಆಗಲೇ ಇತ್ತು. ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅಪ್ಪನ ಪ್ರಭಾವವೂ ಇತ್ತು. ಡಿಗ್ರಿ ಮಾಡದೆ ನಿಮ್ಮನ್ನು ಸಿನಿಮಾಗೆ ಕಳುಹಿಸುವುದಿಲ್ಲ ಎಂದು ಅಪ್ಪ ಹೇಳಿದ್ದರು. ಕೊನೆಯ ಗುರಿ ಸಿನಿಮಾವಾಗಿದ್ದರೂ ಡಿಗ್ರಿ ಪೂರ್ಣಗೊಳಿಸುವತ್ತ ನನ್ನ ಚಿತ್ತವಿತ್ತು. ಹೈಸ್ಕೂಲ್, ಕಾಲೇಜಿನಲ್ಲಿ ಇರುವಾಗಲೇ ಅವಕಾಶಗಳು ಬಂದವು. ಆದರೆ ಆಗ ಅಪ್ಪನೇ ಸಿನಿಮಾದಿಂದ ದೂರವಿರಿಸಿದ್ದರು’ ಎಂದು ಆ ದಿನಗಳನ್ನು ನೆನಪಿಸಿಕೊಂಡರು.
‘ಡಿಗ್ರಿ ಬಳಿಕ ಮುಂಬೈನಲ್ಲಿರುವ ಅನುಪಮ್ ಖೇರ್ ಇನ್ಸ್ಟಿಟ್ಯೂಟ್‌ನಲ್ಲಿ ಅಭಿನಯದ ತರಬೇತಿ ಪಡೆದೆ. ಇದು ಪೂರ್ಣಗೊಂಡ ಬಳಿಕ ಕೆಲವು ನಾಟಕಗಳನ್ನು ಮಾಡಿದೆ. ಈ ಸಂದರ್ಭದಲ್ಲೇ ‘ಲ್ಯಾಂಡ್‌ಲಾರ್ಡ್’ ಚಿತ್ರದ ಕಥೆಯ ಮಾತುಕತೆಯಾಗುತ್ತಿತ್ತು. ಅಲ್ಲಿ ಬರುವ ನಾಯಕನ ಮಗಳ ಪಾತ್ರಕ್ಕೆ ಕಲಾವಿದರ ಹುಡುಕಾಟ ನಡೆಯುತ್ತಿತ್ತು. ಆ ಸಂದರ್ಭದಲ್ಲೇ ಮಗಳ ಪಾತ್ರವನ್ನು ರಿತನ್ಯಾ ಏಕೆ ಮಾಡಬಾರದು ಎಂದು ಜಡೇಶ್ ಅವರು ಕೇಳಿದ್ದರು. ಹೀಗೆ ನನಗೆ ಈ ಪಾತ್ರ ದೊರೆಯಿತು. ಬಹಳ ಖುಷಿಯಿಂದಲೇ ಇದನ್ನು ಒಪ್ಪಿಕೊಂಡೆ. ಕಥೆ ಕೇಳಿದ ಬಳಿಕ ‘ಭಾಗ್ಯ’ ಎನ್ನುವ ಪಾತ್ರದ ಬರವಣಿಗೆ ಚೆನ್ನಾಗಿದೆ ಅನಿಸಿತು. ಎರಡು ಶೇಡ್‌ಗಳಲ್ಲಿ ನಾನು ಇಲ್ಲಿ ಕಾಣಿಸಿಕೊಂಡಿದ್ದೇನೆ. ಇಡೀ ಕಥೆಯಲ್ಲಿ ಈ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ತಂದೆಯ ಸಿನಿಮಾದಲ್ಲಿ ಮಗಳ ಪಾತ್ರವನ್ನು ಮಗಳೇ ನಿರ್ವಹಿಸಲು ಸಿಗುವ ಅವಕಾಶ ವಿರಳ. ನನಗೆ ಆ ಅವಕಾಶ ದೊರೆತಿದೆ. ರಿಯಲ್–ರೀಲ್‌ನಲ್ಲೂ ನಾವು ತಂದೆ–ಮಗಳಾಗಿದ್ದೇವೆ. ಇದು ಜವಾಬ್ದಾರಿಯನ್ನೂ ಹೊರಿಸಿದೆ’ ಎನ್ನುತ್ತಾರೆ ರಿತನ್ಯಾ.
ಅಪ್ಪ ಸಿನಿಮಾ ಆಯ್ಕೆ ಬಗ್ಗೆ ಹೆಮ್ಮೆಯಿದೆ
‘ಪಾತ್ರವನ್ನು ನಿರ್ವಹಿಸಲು ಅಪ್ಪ ಹಾಗೂ ಜಡೇಶ್ ಅವರ ಸಲಹೆ ತೆಗೆದುಕೊಂಡೆ. ಪೂರ್ಣ ಕಥೆಯನ್ನು ಓದಿಕೊಂಡು ಈ ಪಾತ್ರ ಈ ರೀತಿಯಲ್ಲಿ ಬಂದರೆ ಚೆನ್ನಾಗಿರುತ್ತದೆ ಎಂದುಕೊಂಡು ಬದಲಾವಣೆಗಳನ್ನು ಮಾಡಿಕೊಂಡೆ. ಮಣ್ಣಿನ ಸೊಗಡಿನ ಕಥೆ ಹೇಳುವುದರಲ್ಲಿ ಜಡೇಶ್ ಅವರದ್ದು ಎತ್ತಿದ ಕೈ. ಅಪ್ಪನೂ ಬಹಳ ಭಿನ್ನವಾದ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಸಿನಿಮಾ ಆಯ್ಕೆಗಳ ಬಗ್ಗೆ ಹೆಮ್ಮೆ ಇದೆ’ ಎಂದರು.
ಮುಂದೆ ಯುವ ಜೊತೆ ಸಿನಿಮಾ
ನಿರ್ದೇಶಕ ಸೂರಿ ಆ್ಯಕ್ಷನ್ ಕಟ್ ಹೇಳಲಿರುವ ಯುವ ರಾಜ್‌ಕುಮಾರ್ ನಟನೆಯ ಮೂರನೇ ಸಿನಿಮಾದಲ್ಲೂ ರಿತನ್ಯಾ ನಾಯಕಿಯಾಗಿ ನಟಿಸಲಿದ್ದಾರೆ. ‘ಈ ಸಿನಿಮಾದ ಶೂಟಿಂಗ್ ಇನ್ನಷ್ಟೇ ಆರಂಭವಾಗಬೇಕಿದೆ. ಸದ್ಯದಲ್ಲೇ ಇದು ಆರಂಭವಾಗಲಿದೆ. ಹೊಸ ಕಥೆಗಳನ್ನು ಕೇಳುತ್ತಿದ್ದೇನೆ. ಒಂದು ಸಿನಿಮಾದ ಮಾತುಕತೆ ಅಂತಿಮ ಹಂತದಲ್ಲಿದೆ. ನಾನು ಬಹಳ ಯೋಚನೆ ಮಾಡಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಈ ಆಯ್ಕೆಯ ಪ್ರಕ್ರಿಯೆಯಲ್ಲಿ ಅಪ್ಪನ ಸಲಹೆಯನ್ನೂ ಕೇಳುತ್ತೇನೆ. ಇಬ್ಬರೂ ಚರ್ಚೆ ಮಾಡಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎನ್ನುತ್ತಾರೆ ರಿತನ್ಯಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.