ADVERTISEMENT

ಅಣ್ಣಾವ್ರ ನೆನಪುಗಳು.. | ರಾಜಣ್ಣನ ‘ಕಾಯಕ ಪ್ರೀತಿ’

ಎಸ್‌.ನಾರಾಯಣ್‌
Published 24 ಏಪ್ರಿಲ್ 2020, 19:30 IST
Last Updated 24 ಏಪ್ರಿಲ್ 2020, 19:30 IST
ಡಾ. ರಾಜ್ ಜೊತೆ ಎಸ್. ನಾರಾಯಣ್
ಡಾ. ರಾಜ್ ಜೊತೆ ಎಸ್. ನಾರಾಯಣ್   

ಚಿಕ್ಕಮಗಳೂರಿನಲ್ಲಿ ಚಿತ್ರದ ಶೂಟಿಂಗ್‌. ಬೆಳಿಗ್ಗೆ 6 ಗಂಟೆಗೆ ಚಿತ್ರೀಕರಣ ಶುರು ಮಾಡುತ್ತಿದ್ದೆವು.ಪಾರ್ವತಮ್ಮ ರಾಜ್‌ಕುಮಾರ್‌ ಅವರು, ‘ರಾಜ್‌ಕುಮಾರ್‌ ಅ‌ವರಿಗೆ 72 ವಯಸ್ಸು, ಅಷ್ಟು ಬೇಗ ಅವರನ್ನು ಶೂಟಿಂಗ್‌ ಕರೆಸಿಕೊಳ್ಳುವುದು ಬೇಡ’ ಎಂದು ಹೇಳಿದ್ದರಿಂದ, ಅವರು 9 ಗಂಟೆಗೆ ಬರುತ್ತಿದ್ದರು.

ನಾವೆಲ್ಲ ಒಂದೇ ಹೋಟೆಲ್‌ನಲ್ಲಿ ಉಳಿದಿದ್ದೆವು. ಒಂದು ದಿನ ಬೆಳಿಗ್ಗೆ ರಾಜ್‌ಕುಮಾರ್‌ ಅವರು ಹೋಟೆಲ್‌ ಟೆರೇಸ್‌ ಮೇಲೆ ವ್ಯಾಯಾಮ ಮಾಡುತ್ತಿದ್ದರು. ನಾನು ಎಂದಿನಂತೆ 6 ಗಂಟೆಗೆ ಪ್ರೊಡಕ್ಷನ್‌ ಕಾರ್‌ನಲ್ಲಿ ಶೂಟಿಂಗ್‌ಗೆ ಹೊರಟೆ. ಅದನ್ನು ನೋಡಿದ ರಾಜ್‌ಕುಮಾರ್‌ ಅವರು ತಮ್ಮ ಸಹಾಯಕನ ಬಳಿ ‘ನಾರಾಯಣ್‌ ಎಲ್ಲಿಗೆ ಹೊರಟಿದ್ದು?’ ಎಂದು ಕೇಳಿದ್ದಾರೆ. ವಿಷಯ ಕೇಳಿ, ಸ್ನಾನ ಮಾಡಿ, ಪಂಚೆ ಸುತ್ತಿಕೊಂಡು, ನಾನು ಶೂಟಿಂಗ್‌ ಸ್ಥಳಕ್ಕೆ ಹೋಗುವ ಒಂದೆರಡು ನಿಮಿಷ ಮುನ್ನವೇ ಅವರೂ ತಲುಪಿಯಾಗಿತ್ತು.

‘ನೀವ್ಯಾಕೆ ಇಷ್ಟು ಬೇಗ ಬಂದ್ರಿ‘ ಎಂದು ಕೇಳಿದ್ದಕ್ಕೆ, ‘ಬೆಳಗಿನ ವೇಳೆಯ ಚಿತ್ರೀಕರಣದ ಬಗ್ಗೆ ನನಗೆ ಹೇಳ್ಳೇ ಇಲ್ಲವಲ್ಲಾ‘ ಅಂತ ಪ್ರೀತಿಯಿಂದ ಗದರಿದರು. ‘ನಂಗೆ ವಯಸ್ಸಾಯ್ತು ಅಂದ್ಕೊಂಡ್ರಾ ? ನನಗೂ ಬೆಳಗಿನ ವಾತಾವರಣದಲ್ಲಿ ಶೂಟಿಂಗ್ ಮಾಡೋದು ಇಷ್ಟ‘ ಅಂದರು. ನಂತರ ಶೂಟಿಂಗ್‌ ಇದ್ದಾಗಲೆಲ್ಲಾ ಸಮಯ ನೋಡದೇ ಬರುತ್ತಿದ್ದರು. ಇದು ಅವರಿಗೆ ಕಾಯಕದ ಮೇಲಿದ್ದ ಶ್ರದ್ಧೆ, ಅರ್ಪಣೆಗೆ ಉದಾಹರಣೆಯಷ್ಟೇ.

ADVERTISEMENT

ಇನ್ನೊಮ್ಮೆ ಕಂಠೀರವ ಸ್ಟುಡಿಯೊದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಸಂಜೆ 4.30ಕ್ಕೆ ಅವರ ಭಾಗದ ಚಿತ್ರೀಕರಣ ಮುಗಿಯಿತು. ‘ನೀವು ಮನೆಗೆ ಹೊರಡಿ ಅಣ್ಣಾ‘ ಎಂದೆ. ನಂತರ ಜಯಪ್ರದಾ ಅವರ ದೃಶ್ಯದ ಚಿತ್ರೀಕರಣ ಮುಂದುವರಿಸಿದೆವು. ಸ್ವಲ್ಪ ಹೊತ್ತಾದ ಮೇಲೆ ನಂತರ ಒಂದು ಮೂಲೆಯಲ್ಲಿ ವ್ಯಕ್ತಿಯೊಬ್ಬರು ಕುಳಿತಿದ್ದಾರೆ. ಕತ್ತಲೆಯಲ್ಲಿ ಕಾಣುತ್ತಿರಲಿಲ್ಲ. ಹೋಗಿ ನೋಡಿದಾಗ, ಅರೆ, ಅಣ್ಣಾವ್ರು. ‘ಯಾಕೆ ನೀವು ಮನೆಗೆ ಹೋಗಲಿಲ್ಲವಾ?‘ ಎಂದು ಕೇಳಿದೆ.‘ಇಲ್ಲ, ನಾನು ಶೂಟಿಂಗ್ ನೋಡ್ತಿದ್ದೆ‘ ಎಂದರು ಅಣ್ಣಾವ್ರು. ಮರುದಿನ ಸೆಟ್‌ಗೆ ಬಂದವರು ‘ನಿನ್ನೆ ನನ್ನ ಭಾಗದ್ದನ್ನು ಚಿತ್ರೀಕರಿಸಿದಿರಲ್ಲಾ, ಆ ಎರಡು ದೃಶ್ಯಗಳನ್ನು ಪುನಃ ಚಿತ್ರೀಕರಣ ಮಾಡಿ.‘ ಎಂದು ವಿನಂತಿಸಿಕೊಂಡರು. ಏಕೆ ಅಂತ ಕೇಳಿದರೆ, ‘ನನ್ನ ದೃಶ್ಯದ ಕೌಂಟರ್‌ ದೃಶ್ಯದಲ್ಲಿ ಜಯಪ್ರದಾ ಅದ್ಭುತವಾಗಿ ನಟಿಸಿದ್ದಾರೆ. ನಾನೂ ಇನ್ನು ಸ್ವಲ್ಪ ಚೆನ್ನಾಗಿ ಅಭಿನಯಿಸಬಹುದಿತ್ತು’ ಎಂದು ಹೇಳುತ್ತಾ ಶೂಟಿಂಗ್‌ಗೆ ಸಿದ್ಧರಾದರು. ಆ ಎರಡೂ ದೃಶ್ಯಗಳುಎಕ್ಸ್‌ಲೆಂಟ್‌... ಎಕ್ಸ್‌ಲೆಂಟ್...‌ ಎಕ್ಸ್‌ಲೆಂಟ್‌... ಅದು ಅವರಿಗೆ ನಟನೆಯ ಮೇಲಿದ್ದ ಪ್ರೀತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.