ಮುಂಬೈನ ಲೀಲಾವತಿ ಆಸ್ಪತ್ರೆ ಆವರಣದಲ್ಲಿ ನಟಿ ಕರೀನಾ ಕಪೂರ್
ಪಿಟಿಐ ಚಿತ್ರ
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಚಾಕು ಇರಿದ ಪ್ರಕರಣದಲ್ಲಿ, ಆಗಂತುಕನು ಮೊದಲಿಗೆ ಅವರ ಪುತ್ರ ಜೇ ಕೋಣೆಗೆ ನುಗ್ಗಿದ್ದ. ಜತೆಗೆ ₹1 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಚಾಕು ಹಿಡಿದು ಬಂದ ಆಗಂತುಕ ಮೊದಲಿಗೆ ಸೈಫ್ ಅವರ 4 ವರ್ಷದ ಪುತ್ರ ಜಹಾಂಗೀರ್ (ಜೇ) ಇರುವ ಕೋಣೆಯನ್ನು ಪ್ರವೇಶಿಸಿದ ಎಂದು ದಾದಿ ನೀಡಿರುವ ಹೇಳಿಕೆಯಲ್ಲಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಘಟನೆಯಲ್ಲಿ ಸೈಫ್ ಅಲಿ ಖಾನ್, ದಾದಿ ಮತ್ತು ಸಹಾಯಕರೊಬ್ಬರು ಗಾಯಗೊಂಡಿದ್ದಾರೆ. ಸೈಫ್‌ಗೆ ಆರು ಕಡೆ ಆಗಂತುಕ ಇರಿದಿದ್ದಾನೆ. ಬೆನ್ನುಮೂಳಗೆ ಚಾಕು ಹೊಕ್ಕಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡರು. ತಕ್ಷಣ ಅವರ ಪುತ್ರ ಇಬ್ರಾಹಿಂ ಆಟೋರಿಕ್ಷಾದಲ್ಲಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ಎರಡು ಶಸ್ತ್ರಚಿಕಿತ್ಸೆ ಬಳಿಕ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಬಾಂದ್ರಾ ಪಶ್ಚಿಮದಲ್ಲಿರುವ 12 ಮಹಡಿ ಕಟ್ಟಡದಲ್ಲಿ ಸೈಫ್ ಅವರ ಕುಟುಂಬವು ನಾಲ್ಕು ಅಂತಸ್ತುಗಳನ್ನು ಹೊಂದಿದೆ. ಅಲ್ಲಿ ನಟ ಸೈಫ್, ಅವರ ಪತ್ನಿ ಕರೀನಾ ಕಪೂರ್ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಈ ಮನೆಗೆ ಟಿ–ಶರ್ಟ್ ಮತ್ತು ಕೇಸರಿ ಸ್ಕಾರ್ಫ್ ತೊಟ್ಟ ವ್ಯಕ್ತಿಯೊಬ್ಬ ಹೊರಗಿನಿಂದ ಬಂದಿದ್ದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ.
ಮನೆಯೊಳಗೆ ಈತ ಪ್ರವೇಶಿಸಿದ್ದನ್ನು ಮೊದಲು ಗುರುತಿಸಿದ್ದು ದಾದಿ ಎಲಿಯಾಮಾ ಫಿಲಿಪ್ಸ್. ಸಪ್ಪಳ ಕೇಳಿಸಿ ಎದ್ದ ಇವರು, ಜೇ ಕೋಣೆಗೆ ಕರೀನಾ ಪ್ರವೇಶಿಸಿದರು ಎಂದು ಭಾವಿಸದರಂತೆ.
‘ಆ ಕೋಣೆಯ ಶೌಚಾಲಯದಿಂದ ವ್ಯಕ್ತಿಯೊಬ್ಬ ಹೊರಬರುವುದನ್ನು ಕಂಡೆ. ಆತ ನನ್ನನ್ನೂ ನೋಡಿದ. ಬೆರಳಲ್ಲೇ ಸನ್ಹೆ ಮಾಡಿದ ಆತ, ಸುಮ್ಮನಿರುವಂತೆ ಎಚ್ಚರಿಕೆ ನೀಡಿದ. ಜತೆಗೆ ₹1 ಕೋಟಿ ನೀಡುವಂತೆ ಬೇಡಿಕೆ ಇಟ್ಟ ಎಂದು ಪೊಲೀಸರಿಗೆ ಹೇಳಿಕೆ ನೀಡಿರುವುದಾಗಿ ಮೂಲಗಳು ಹೇಳಿವೆ.
‘ಆತನನ್ನು ತಡೆಯಲು ಯತ್ನಿಸಿದೆ. ಆದರೆ ಚಾಕುವಿನಿಂದ ಆತ ನನ್ನ ಮುಂಗೈ ಹಾಗೂ ಹಸ್ತಕ್ಕೆ ಇರಿದ. ಗಲಾಟೆಯ ಸದ್ದು ಕೇಳಿದ ಸೈಫ್ ಅವರು ಆತನನ್ನು ಹಿಡಿಯಲು ಯತ್ನಿಸಿದರು. ಅವರಿಗೆ ಆರು ಬಾರಿ ಆತ ಚಾಕುವಿನಿಂದ ಇರಿದ. ಬೆನ್ನುಮೂಳೆಗೆ ಹೊಕ್ಕಿದ ಚಾಕು ತುಂಡಾಯಿತು. ಮತ್ತೊಬ್ಬ ಸಹಾಯಕಿ ಗೀತಾ ಅವರ ಮೇಲೂ ದಾಳಿ ನಡೆಸಿದ ಆತ, ಅವರನ್ನೂ ಗಾಯಗೊಳಿಸಿದ ಎಂದು ಪೊಲೀಸರಿಗೆ ಹೇಳಿದ್ದಾರೆ.
ಈ ಪ್ರಕರಣವನ್ನೇ ಆಧಾರವಾಗಿಟ್ಟುಕೊಂಡಿರುವ ವಿರೋಧ ಪಕ್ಷಗಳು ಆಡಳಿತಾರೂಡ ಬಿಜೆಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಆರೋಪಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ‘ಈ ಪ್ರಕರಣವನ್ನೇ ನೆಪವಾಗಿಟ್ಟುಕೊಂಡು ಮುಂಬೈ ಸುರಕ್ಷಿತ ನಗರವಲ್ಲ ಎಂದು ಬಿಂಬಿಸುವ ಯತ್ನ ಮಾಡಬೇಡಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.