ADVERTISEMENT

ಸಖತ್‌ ಸದ್ದು ಮಾಡುತ್ತಿರುವ ‘ಸೈಯಾರ’

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 19:44 IST
Last Updated 23 ಜುಲೈ 2025, 19:44 IST
ಅನೀತ್‌
ಅನೀತ್‌   

ಸದ್ಯ ಬಾಲಿವುಡ್‌ನಲ್ಲಿ ‘ಸೈಯಾರ’ ಚಿತ್ರದ ಸದ್ದು ಜೋರಾಗಿದೆ. ಬಿಡುಗಡೆಯಾಗಿ ನಾಲ್ಕು ದಿನಗಳೊಳಗೆ ₹100 ಕೋಟಿ ಗಳಿಕೆ ಕಂಡಿರುವ ಚಿತ್ರ, ವಾರದ ದಿನಗಳಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬುಧವಾರ ಬೆಂಗಳೂರೊಂದರಲ್ಲಿಯೇ 250ಕ್ಕೂ ಹೆಚ್ಚು ಪರದೆಗಳಲ್ಲಿ ಚಿತ್ರ ಪ್ರದರ್ಶನಗೊಂಡಿದ್ದು, ಶೇಕಡ 90 ರಷ್ಟು ಪ್ರದರ್ಶನಗಳು ಹೌಸ್‌ಫುಲ್‌! 

ಹೊಸ ಜೋಡಿಯಾದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಬಾಲಿವುಡ್‌ನಲ್ಲಿ ಸದ್ಯ ಅಕ್ಷರಶಃ ಮೋಡಿ ಮಾಡಿದ್ದಾರೆ. ರೀಲ್ಸ್‌ಗಳಲ್ಲಿಯೂ ಈ ಸಿನಿಮಾದ್ದೇ ಸದ್ದು. ಇವರಿಬ್ಬರ ನಟನೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಹಾಗಂತ ಇಡೀ ಚಿತ್ರ ಹೊಸಬರದ್ದು ಎನ್ನಲಾಗದು. ತೆರೆಯ ಮೇಲಿನ ಜೋಡಿ ಮಾತ್ರ ಹೊಸತು. ತೆರೆಯ ಹಿಂದಿನ ಜಾದೂಗಾರರು ನಿರ್ದೇಶಕ ಮೋಹಿತ್‌ ಸೂರಿ ಹಾಗೂ ಯಶ್‌ರಾಜ್‌ ಫಿಲ್ಮ್ಸ್‌.

‘ಆಶಿಕಿ–2’ ಖ್ಯಾತಿಯ ಮೋಹಿತ್‌ ಸೂರಿ, ‘ಸೈಯಾರ’ದಲ್ಲಿಯೂ ಅದೇ ಸೂತ್ರ ಅಳವಡಿಸಿಕೊಂಡು ಗೆದ್ದಿದ್ದಾರೆ. ಮ್ಯೂಸಿಕಲ್‌ ಲವ್‌ ಸ್ಟೋರಿಯನ್ನು ಇವತ್ತಿನ ತಲೆಮಾರಿಗೆ ಬೇಕಾದಂತೆ ಹೇಳಿದ್ದಾರೆ. ಹೀಗಾಗಿ ಕಾಲೇಜು ಹುಡುಗರು ಹಾಗೂ ಯುವಪಡೆ ಚಿತ್ರಮಂದಿರಗಳತ್ತ ನುಗ್ಗುತ್ತಿವೆ. ಇವರ  ‘ಹಮಾರಿ ಅದೂರಿ ಕಹಾನಿ’, ‘ಹಾಫ್‌ ಗರ್ಲ್‌ಫ್ರೆಂಡ್‌’ ಮುಂತಾದ ಚಿತ್ರಗಳು ಕೂಡ ಸಂಬಂಧಗಳ ಸುತ್ತ ಸುತ್ತುವ ಕಥೆಯನ್ನೇ ಹೊಂದಿದ್ದವು. 

ADVERTISEMENT

ಯಶ್‌ರಾಜ್‌ ಫಿಲ್ಮ್ಸ್‌ ಹತ್ತಾರು ಹಿಟ್‌ ಸಿನಿಮಾಗಳನ್ನು ನೀಡಿರುವ ಸಂಸ್ಥೆ. ಆದರೆ ಈ ಚಿತ್ರವನ್ನು ಹೆಚ್ಚು ಪ್ರಚಾರವಿಲ್ಲದೆ ತೆರೆಗೆ ತಂದಿತ್ತು. ಚಿತ್ರದ ಕಂಟೆಂಟ್‌ ಅನ್ನು ಎಲ್ಲಿಯೂ ಹೆಚ್ಚು ಬಿಟ್ಟುಕೊಡಬಾರದೆಂಬ ಕಾರಣಕ್ಕೆ ನಿರ್ಮಾಣ ಸಂಸ್ಥೆ ಈ ಕಾರ್ಯತಂತ್ರಕ್ಕೆ ಮಾರು ಹೋಗಿತ್ತು ಎಂಬ ಮಾತು ಕೇಳಿಬಂದಿತ್ತು. ಆದರೆ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ ಜನಮನ್ನಣೆ ಗಳಿಸಿದ್ದವು. ಯುವ ಪ್ರೇಮಿಗಳು ಚಿತ್ರಮಂದಿರಗಳಲ್ಲಿಯೇ ಭಾವುಕರಾಗಿ ಕಣ್ಣೀರು ಹಾಕುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದು ಕೂಡ ಚಿತ್ರಕ್ಕೆ ಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಿದೆ.

ಬಾಲಿವುಡ್‌ಗೆ ನವಚೈತನ್ಯ

ಬಾಲಿವುಡ್‌ನಲ್ಲಿ ಹೊಸ ನಾಯಕ–ನಾಯಕಿಯ ಚಿತ್ರ ಗೆಲ್ಲದೇ ಬಹಳ ಕಾಲವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಯಶಸ್ಸು ಕಂಡ ಬಹುತೇಕ ಚಿತ್ರಗಳು ಈಗಾಗಲೇ ಸ್ಟಾರ್‌ಗಳೆನಿಸಿಕೊಂಡ ನಟರದ್ದು ಅಥವಾ ಜನಪ್ರಿಯ ನಟರದ್ದು. ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಜೋಡಿಯ ಗೆಲುವು ಚಿತ್ರೋದ್ಯಮಕ್ಕೆ ಹೊಸ ಭರವಸೆ ನೀಡಿದೆ. ಜತೆಗೆ ಈ ಇಬ್ಬರಿಗೂ ಈಗಲೇ ಹೊಸ ಅವಕಾಶಗಳು ಹುಡುಕಿಕೊಂಡು ಬಂದಿವೆ.

ಈ ವರ್ಷ ‘ಛಾವ’ ಚಿತ್ರ ₹600 ಕೋಟಿ ಗಳಿಸಿ ದಾಖಲೆ ಬರೆದಿತ್ತು. ‘ಹೌಸ್‌ಫುಲ್‌–5’, ‘ಸಿತಾರೆ ಜಮೀನ್‌ ಪರ್‌’ ಚಿತ್ರಗಳು ಉತ್ತಮ ಗಳಿಕೆ ಕಂಡಿದ್ದವು. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡು ವ್ಯಾಪಕ ಯಶಸ್ಸು ಪಡೆದ ಚಿತ್ರಗಳ ಸಾಲಿಗೆ ‘ಸೈಯಾರ’  ಸೇರ್ಪಡೆಗೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.