ADVERTISEMENT

ಬನ್ಸಾಲಿ ಮುಂದೆ ಮತ್ತೆ ಸಲ್ಮಾನ್‌

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 19:46 IST
Last Updated 25 ಫೆಬ್ರುವರಿ 2019, 19:46 IST
ಸಂಜಯ್‌ ಲೀಲಾ ಬನ್ಸಾಲಿ ಹಾಗೂ ಸಲ್ಮಾನ್‌ ಖಾನ್‌
ಸಂಜಯ್‌ ಲೀಲಾ ಬನ್ಸಾಲಿ ಹಾಗೂ ಸಲ್ಮಾನ್‌ ಖಾನ್‌   

ಬಾಲಿವುಡ್‌ ದಿಗ್ಗಜರಾದ ಸಂಜಯ್ ಲೀಲಾ ಬನ್ಸಾಲಿ ಮತ್ತು ಸಲ್ಮಾನ್‌ ಖಾನ್‌ ಅಂದಾಜು ಎರಡು ದಶಕಗಳ ಬಳಿಕ ಒಟ್ಟಾಗುತ್ತಿದ್ದಾರೆ.ಲವ್‌ ಸ್ಟೋರಿಯೊಂದನ್ನು ಕೈಲಿ ಹಿಡಿದು ಕೂತಿರುವ ಬನ್ಸಾಲಿ, ತಮ್ಮ ಚಿತ್ರದ ನಾಯಕ ಸಲ್ಲೂ ಭಾಯ್‌ ಎಂದು ತೀರ್ಮಾನಿಸಿದ್ದಾರಂತೆ.

1996ರಲ್ಲಿ‘ಖಾಮೋಶಿ: ದಿ ಮ್ಯೂಸಿಕಲ್‌’, 1999ರಲ್ಲಿ ‘ಹಮ್‌ ದಿಲ್‌ ದೆ ಚುಕೇ ಸನಂ’ನಲ್ಲಿ ಸಲ್ಮಾನ್‌ ಖಾನ್‌ಗೆ ಬನ್ಸಾಲಿ ಆ್ಯಕ್ಷನ್‌–ಕಟ್‌ ಹೇಳಿದ್ದರು. ಅದಾದ ಬಳಿಕ, 2007ರ ‘ಸಾವರಿಯಾ’ದಲ್ಲಿನ ವಿಶೇಷ ಪಾತ್ರಕ್ಕಾಗಿ ಸಲ್ಲೂ ಭಾಯ್ ಬನ್ಸಾಲಿ ಸೆಟ್‌ಗೆ ಬಂದಿದ್ದರು. ಆದರೆ ಬನ್ಸಾಲಿ ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕರಾಗಿ ಕೊನೆಯದಾಗಿ ಕಾಣಿಸಿಕೊಂಡದ್ದು 1999ರಲ್ಲೇ. ಇದೀಗ, ಇಬ್ಬರೂ ದಿಗ್ಗಜರು ಒಟ್ಟಾಗುತ್ತಿರುವ ಸಂಗತಿಯನ್ನು ಸಲ್ಲೂ ಆಪ್ತ ತರಣ್‌ ಆದರ್ಶ್‌ ಟ್ವೀಟ್‌ ಮೂಲಕ ಪ್ರಕಟಿಸಿದ್ದಾರೆ. ಬನ್ಸಾಲಿ ಕ್ಯಾಂಪ್‌ ಕೂಡಾ ಇದನ್ನು ಖಚಿತಪಡಿಸಿದೆ.

ಲವ್‌ ಸ್ಟೋರಿಯಲ್ಲಿ ಸಲ್ಲೂ ಜೊತೆ ಡುಯೆಟ್‌ ಹಾಡುವವರು ಯಾರು ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ. ಮತ್ತೊಂದೆಡೆ, ಅವರು ‘ಭಾರತ್‌’ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಮತ್ತು ಚಿತ್ರೀಕರಣೋತ್ತರ ಕೆಲಸಗಳ ನಡುವೆ, ‘ನೋಟ್‌ಬುಕ್‌’ ಚಿತ್ರದ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಬನ್ಸಾಲಿ ಚಿತ್ರ ಮಾರ್ಚ್‌ ಮೊದಲ ವಾರದಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.