ADVERTISEMENT

ಟಾಲಿವುಡ್ | ‘ಸಾಮಜವರಗಮನ’ ಸಂಚಲನ: ಒಂದೇ ದಿನಕ್ಕೆ 92 ಲಕ್ಷ ಹಿಟ್ಸ್

ಪೃಥ್ವಿರಾಜ್ ಎಂ ಎಚ್
Published 30 ಸೆಪ್ಟೆಂಬರ್ 2019, 10:41 IST
Last Updated 30 ಸೆಪ್ಟೆಂಬರ್ 2019, 10:41 IST
   

ಟಾಲಿವುಡ್‌ ಚಿತ್ರರಂಗದ ‘ಮಾತಿನ ಮಾಂತ್ರಿಕ’ ಎಂದೇ ಖ್ಯಾತರಾಗಿರುವ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್‌, ತಮ್ಮ ಚಿತ್ರದ ಹಾಡುಗಳ ವಿಷಯದಲ್ಲೂ ವಿಶೇಷ ಕಾಳಜಿ ವಹಿಸುತ್ತಾರೆ. ಈವರೆಗಿನ ಅವರ ಚಿತ್ರಗಳ ಹಾಡುಗಳ ಸಾಹಿತ್ಯ ಅವರ ಸಾಹಿತ್ಯಾಭಿರುಚಿಗೆ ಹಿಡಿದ ಕನ್ನಡಿ.

ಸ್ಟೈಲಿಶ್‌ಸ್ಟಾರ್‌ ಅಲ್ಲು ಅರ್ಜುನ್ ಜೊತೆ ‘ಜುಲಾಯಿ’, ‘ಸನ್‌ ಆಫ್‌ ಸತ್ಯಮೂರ್ತಿ’ಯಂತಹ ಉತ್ತಮ ಚಿತ್ರಗಳನ್ನು ನೀಡಿದ್ದ ತ್ರಿವಿಕ್ರಮ್‌ ಈಗ ಮತ್ತೊಮ್ಮೆ ಅವರೊಂದಿಗೆ ಜೊತೆಗೆ ‘ಅಲಾ ವೈಕುಂಠಪುರಮುಲೋ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪೂಜಾ ಹೆಗ್ಡೆ ಈ ಚಿತ್ರದ ನಾಯಕಿ.

ಈ ಚಿತ್ರದ ಹಾಡೊಂದನ್ನು ‘ಪ್ರೊಮೊ ಸಾಂಗ್‌’ ರೂಪದಲ್ಲಿ ಈಚೆಗಷ್ಟೇ ಚಿತ್ರತಂಡ ಯೂಟ್ಯೂಬ್‌ಗೆ ಸೇರಿಸಿದೆ. ಬಿಡುಗಡೆಯಾದ ಒಂದೇ ದಿನದಲ್ಲಿ ಸುಮಾರು 92ಲಕ್ಷ ಜನ ವೀಕ್ಷಿಸಿದ್ದು, ಮೂರು ಲಕ್ಷ ಲೈಕ್ಸ್ ಪಡೆದಿರುವುದು ದಾಖಲೆ. ಅಲ್ಲದೇ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ.

ADVERTISEMENT

‘ಸಿರಿವೆನ್ನೆಲ’ ಸೀತಾರಾಮಶಾಸ್ತ್ರಿ ಬರೆದಿರುವ ಸಾಹಿತ್ಯ, ಸಿನಿಮಾ ಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸಿದೆ. ನಾಯಕಿಯ ಪ್ರೀತಿ ಗಳಿಸಲು ನಾಯಕನ ಪರಿಪಾಟಲನ್ನು ಸುಂದರವಾಗಿ ಈ ಹಾಡಿನಲ್ಲಿ ವಿವರಿಸಿದ್ದಾರೆ.

ಕರ್ನಾಟಕ ಸಂಗೀತದ ಜನಪ್ರಿಯಕೀರ್ತನೆ ‘ಸಾಮಜವರಗಮನ’. ಇದರ ಮೊದಲ ಪದವನ್ನೇ ಪ್ರಧಾನವಾಗಿಟ್ಟುಕೊಂಡು ಇಡೀ ಹಾಡನ್ನು ಬರೆದಿದ್ದಾರೆ ಕವಿ.

‘ನಿನ್ನ ಕಾಲನ್ನು ಹಿಡಿದು ಬಿಡದು ಎನುತಿದೆ ನೋಡೇ ನನ್ನ ಕಣ್ಣು, ಆ ನೋಟಗಳನು ತುಳಿಯಬೇಡ ದಯೆ ಇಲ್ಲವೇ ಹೆಣ್ಣೆ’ ಎಂದು ಹಾಡಿನ ಮೊದಲ ಸಾಲು ಆರಂಭವಾಗಿದೆ. ನಾಯಕ ತನ್ನ ಕಣ್ಣುಗಳಿಂದಲೇ ನಾಯಕಿಯ ಕಾಲ ಹಿಡಿಯುತ್ತಾನೆ ಎಂದು ಹೇಳಿರುವುದು ವಿಶೇಷ ರೂಪಕ.

‘ನಿನ್ನ ಕಣ್ಣಿಗೆ ಕಾವಲು ಕಾಯುತ್ತವೆ ಕಾಡಿಗೆಯಂತೆ ನನ್ನ ಕಣ್ಣುಗಳು. ನೀ ನಲಿಯುತ್ತಿದ್ದರೆ ಕೆಂಪಗೆ ಉರಿದು ಸಿಡಿಯುತಿದೆ ವಿರಹಗಳು. ನಾ ಉಸಿರಾಡಿದ ಗಾಳಿಗೆ ಉಯ್ಯಾಲೆಯಾಗಿ ತೂಗುತಿದ್ದರೆ ಮುಂಗುರುಳು. ನೀ ನೂಕಿದರೆ ಹೇಗೆ, ನಲುಗವೇ ಏರುಸಿರಿನ ನಿಷ್ಠೂರದ ವಿಲವಿಲಗಳು’ ಎಂದು ಪ್ರಾಸಬದ್ಧವಾಗಿ ಹಲವು ಭಾವಗಳನ್ನು ಚರಣದಲ್ಲಿ ಕವಿ ಪೋಣಿಸಿದ್ದಾರೆ.

ಈ ಪಲ್ಲವಿ ಮುಗಿಯುತ್ತಿದ್ದಂತೆಯೇ ‘ಸಾಮಜವರಗಮನ’ ಮತ್ತೊಂದು ಪಲ್ಲವಿ ಸಾಲು ಬರೆದಿರುವುದು ಹಾಡಿನ ವಿಶೇಷ.

ಈ ಪಲ್ಲವಿಯಲ್ಲಿ ‘ಸಾಮಜವರಗಮನ ನಿನ್ನ ಕಡೆಗೆ ಹರಿಯಿತು ಗಮನ, ಮನಸ ಮೇಲೆ ವಯಸಿಗಿರುವ ಹಿಡಿತ ಹೇಳ ತಗುದೆ’ ಎಂದು ಮನಸಿನ ಮೇಲೆ ವಯಸು ಬೀರುವ ಪ್ರಭಾವವನ್ನು ಸೊಗಸಾಗಿ ವರ್ಣಿಸಿದ್ದಾರೆ.

‘ಮಲ್ಲಿಗೆ ಮಾಸವೇ, ಮಂಜುಳ ಹಾಸವೇ, ಪ್ರತಿ ತಿರುವಿನಲ್ಲೂ ಎದುರುಬಿದ್ದ ಬೆಳದಿಂಗಳ ವನವೇ. ಅರಳಿದ ಪಿಂಚವೇ, ಸುಂದರ ಪ್ರಪಂಚವೇ’ ಎಂದು ಚರಣದಲ್ಲಿ ನಾಯಕಿಯ ಸೌಂದರ್ಯ ವರ್ಣಿಸಲು ಹಲವು ಉಪಮಾನ, ಉಪಮೇಯಗಳನ್ನು ಕವಿ ಬಳಿಸಿದ್ದಾರೆ.

‘ನನ್ನ ಗಾಳಿ ಸೋಕಿದರೂ, ನನ್ನ ನೆರಳು ಹಿಂಬಾಲಿಸಿದರೂ ಉಳುಕದೇ, ಪಲುಕದೇ ಹೇಗಿರುವೆ ಭಾಮೆ. ಎಷ್ಟೇ ಅಂಗಲಾಚಿದರೂ, ಇಷ್ಟೇನಾ ಅಂಗನೆ? ಮನವ ಮೀಟುವ ಮಧುರವಾದ ಮನವಿ ಕೇಳು ಲಲನೆ’ ಎಂದು ಎರಡನೇ ಚರಣದಲ್ಲಿ ನಾಯಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿರುವ ರೀತಿ ಆಕರ್ಷಕ.

ಸಂಗೀತ ನಿರ್ದೇಶಕ ತಮನ್ ಎಸ್‌. ಎಸ್‌. ಉತ್ತಮ ಸ್ವರಸಂಯೋಜನೆ ಮಾಡಿದ್ದು, ‘ತಮನ್ ಇಸ್‌ ಬ್ಯಾಕ್‌’ ಎಂದು ಹಲವರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಗಾಯಕ ಸಿದ್‌ ಶ್ರೀರಾಮ್‌ ಅದ್ಭುತವಾಗಿ ಹಾಡಿದ್ದಾರೆ. ಚಿತ್ರ ಜನವರಿಯಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.