ADVERTISEMENT

‘ಸಮಯದ ಹಿಂದೆ ಸವಾರಿ...’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 19:45 IST
Last Updated 22 ನವೆಂಬರ್ 2018, 19:45 IST
ರಾಹುಲ್ ಹೆಗಡೆ
ರಾಹುಲ್ ಹೆಗಡೆ   

ವಿಭಿನ್ನ ಕಥಾವಸ್ತುವಿನೊಂದಿಗೆ ವಿಶಿಷ್ಟ ಚಿತ್ರವೊಂದನ್ನು ನಿರ್ಮಿಸಬೇಕೆಂದು ಗುರಿ ಹೊತ್ತ ರಂಗಕರ್ಮಿಗಳು ಆಯ್ಕೆ ಮಾಡಿಕೊಂಡ ವಿಷಯ: ಪತ್ತೇದಾರಿಕೆ. ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ರಂಗಪಯಣ ಮತ್ತು ಸಾತ್ವಿಕ ತಂಡದ ಸದಸ್ಯರು ಜೊತೆಗೂಡಿ ‘ಸಮಯದ ಹಿಂದೆ ಸವಾರಿ’ ಎಂಬ ಪತ್ತೇದಾರಿ ಚಿತ್ರ ನಿರ್ಮಿಸಿದ್ದಾರೆ. ಸೆನ್ಸಾರ್ ಮಂಡಳಿ ‘ಯು’ ಪ್ರಮಾಣಪತ್ರ ನೀಡಿದ್ದು, ಚಿತ್ರ ಶೀಘ್ರವೇ ಬಿಡುಗಡೆ ಆಗುವ ನಿರೀಕ್ಷೆಇದೆ.

ಪತ್ರಕರ್ತ ಜೋಗಿಯವರ ‘ನದಿಯ ನೆನಪಿನ ಹಂಗು’ ಕಾದಂಬರಿಯಲ್ಲಿ ‘ರಘುನಂದನನಿಗೆ ಸುದ್ದಿ ತಿಳಿಯೋ ಹೊತ್ತಿಗೆ ನಿರಂಜನ ಸತ್ತು 36 ಗಂಟೆಗಳಾಗಿತ್ತು ಎಂಬ ಒಂದು ಸಾಲು’ ಈ ಚಿತ್ರಕ್ಕೆ ಮೂಲ ಪ್ರೇರೇಪಣೆ. ಸ್ನೇಹಿತನೊಬ್ಬನ ಕೊಲೆಯ ಸುತ್ತ ನಡೆಯುವ ಬೆಳವಣಿಗೆಗಳ ಮತ್ತು ಅನಿರೀಕ್ಷಿತ ತಿರುವುಗಳ ಆಧಾರಿತ ಈ ಚಿತ್ರವು ಅಂತಿಮ ಕ್ಷಣದವರೆಗೂ ಕುತೂಹಲ ಕಾಯ್ದುಕೊಳ್ಳುತ್ತದೆ.ಸಮಯದೊಂದಿಗೆ ಪೈಪೋಟಿಗೆ ಬಿದ್ದವರಂತೆ ನಡೆಯುವ ತನಿಖೆ, ಬದಲಾವಣೆ ಎಲ್ಲವೂ ರೋಚಕ. ಮುಂದಿನ ದೃಶ್ಯ ಹೀಗೆ ಇರುತ್ತದೆ ಎಂದು ಯೋಚಿಸುವ ಹೊತ್ತಿಗೆ, ಚಿತ್ರ ಇನ್ನೇನೂ ತಿರುವು ಪಡೆದುಕೊಂಡಿರುತ್ತೆ. ಚಿತ್ರದ ಅಂತಿಮ ದೃಶ್ಯದವರೆಗೆ ಕುತೂಹಲ ಮುಂದುವರೆಯುತ್ತದೆ.

‘ಹಲವು ವರ್ಷಗಳಿಂದ ಗೀತ ಗಾಯನ ಮತ್ತು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಜೋಗಿಯವರ ‘ನದಿಯ ನೆನಪಿನ ಹಂಗು’ ಕಾದಂಬರಿ ಓದಿದಾಗ, ಅದನ್ನು ಆಧರಿಸಿ ‘ಬಲ್ಲ ಮೂಲಗಳ ಪ್ರಕಾರ’ ಎಂಬ ನಾಟಕ ರೂಪಿಸಿ, ಪ್ರದರ್ಶನ ನೀಡಿದೆವು. ಉತ್ತಮ ಪ್ರತಿಕ್ರಿಯೆ ದೊರೆಯಿತು. ನಂತರ ಅದನ್ನೇ ಚಲನಚಿತ್ರ ರೂಪಕ್ಕೆ ಹೊರತರುವ ಇಂಗಿತ ವ್ಯಕ್ತಪಡಿಸಿದಾಗ, ಜೋಗಿಯವರು ಅನುಮತಿ ನೀಡಿದರು. ಚಿತ್ರಕಥೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡು ಚಿತ್ರವನ್ನು ನಿರ್ಮಿಸಿ ಬಿಡುಗಡೆಗೆ ಸಿದ್ಧರಾಗಿದ್ದೇವೆ’ ಎಂದು ಚಿತ್ರ ನಿರ್ದೇಶಕ ರಾಜಗುರು ಹೊಸಕೋಟೆ ತಿಳಿಸಿದರು.

ADVERTISEMENT

‘ಚಿತ್ರದ ಬಹುತೇಕ ಚಿತ್ರೀಕರಣ ಕುಂದಾಪುರದಲ್ಲಿ ನಡೆದಿದ್ದು, ಒಂದೊಂದು ಪಾತ್ರವೂ ಕೂಡ ಇಲ್ಲಿ ಪ್ರಾಮುಖ್ಯತೆ ಹೊಂದಿದೆ. ಒಬ್ಬ ಸ್ನೇಹಿತನ ಕೊಲೆ ಎಷ್ಟೆಲ್ಲ ಅನಿರೀಕ್ಷಿತ ಬೆಳವಣಿಗೆ, ಅಚಾತುರ್ಯ ಮತ್ತು ಅವಘಡಗಳಿಗೆ ಕಾರಣವಾಗುತ್ತದೆ ಎಂಬುದನ್ನು ಚಿತ್ರವು ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತದೆ. ಇಡೀ ಚಿತ್ರ ತಂಡವು ಹೊಸಬರಿಂದ ಕೂಡಿದ್ದು, ಹೊಸ ಆಲೋಚನೆಗಳೊಂದಿಗೆ ಮೂಡಿ ಬಂದಿದೆ. ಈ ಚಿತ್ರವು ಪ್ರೇಕ್ಷಕರ ಮನಗೆದ್ದರೆ, ಇಡೀ ತಂಡದ ಶ್ರಮ ಸಾರ್ಥಕ’ ಎಂದು ಅವರು ಹೇಳಿದರು.

ಬಂಟ್ ಲಯನ್ಸ್ ಇಂಟರ್‌ನ್ಯಾಷನಲ್ ಅರ್ಪಣೆಯ ಈ ಚಿತ್ರದ ನಿರ್ಮಾಪಕರು ರಾಹುಲ್ ಹೆಗ್ಡೆ, ರಂಜಿತ್ ಶೆಟ್ಟಿ ಮತ್ತು ಪ್ರವೀಣ್ ಹೆಗ್ಡೆ. ಚಿತ್ರಕಥೆ-ಸಾಹಿತ್ಯ-ಸಂಗೀತ-ಸಂಭಾಷಣೆ-ನಿರ್ದೇಶನದ ಜವಾಬ್ದಾರಿ ಹೊತ್ತಿರುವ ರಾಜಗುರು ಹೊಸಕೋಟೆ ಚಿತ್ರದ ಕುರಿತು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರ ತಂಡದಲ್ಲಿನ ಬಹುತೇಕ ಮಂದಿ ಇದೇ ಮೊದಲ ಬಾರಿಗೆ ಚಿತ್ರರಂಗಕ್ಕೆ ಪರಿಚಿತವಾಗುತ್ತಿರುವುದು ವಿಶೇಷ.

ರಾಹುಲ್ ಹೆಗ್ಡೆ ನಾಯಕನಾಗಿದ್ದು, ಪ್ರಕೃತಿ ಗ್ಲೋರಿ ನಾಯಕಿಯಾಗಿದ್ದಾರೆ. ಪ್ರವೀಣ್, ಶಿವಶಂಕರ, ಕಿರಣ್ ವಟಿ ಮುಂತಾದ ತಾರಾಗಣವುಳ್ಳ ಈ ಚಿತ್ರಕ್ಕೆ ಕಲಾ ಸ್ಪರ್ಶವನ್ನು ಶಶಿಧರ ಅಡಪ ಅವರು ನೀಡಿದ್ದರೆ, ಸುನೀತ್ ಹಲಗೇರಿ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರದ ಮೂಲಕ ಕಾದಂಬರಿ ಆಧಾರಿತ ಚಲನಚಿತ್ರಗಳು ಮತ್ತು ಪತ್ತೇದಾರಿ ವಿಷಯಗಳು ಪುನಃ ಜೀವ ಪಡೆದರೆ ಒಂದು ರೀತಿಯಲ್ಲಿ ಒಳ್ಳೆಯದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.