ADVERTISEMENT

‘ಯು ಆರ್‌ ಮೈ ಹೀರೋ’ದಲ್ಲಿ ಹೀಗಿದ್ದಾರೆ ಸಂಹಿತಾ ವಿನ್ಯಾ

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 12:18 IST
Last Updated 10 ಜೂನ್ 2022, 12:18 IST
ಸಂಹಿತಾ ವಿನ್ಯಾ
ಸಂಹಿತಾ ವಿನ್ಯಾ   

ಮಾಡೆಲಿಂಗ್‌ನಿಂದ ಆರಂಭವಾದ ಸಂಹಿತಾ ವಿನ್ಯಾ ಅವರ ಪ್ರಯಾಣಸಿನಿಮಾವರೆಗೂ ಬಂದು ನಿಂತಿದೆ. ಈಗ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ.

ಅಂದಹಾಗೆ, ಆ ಸಿನಿಮಾ ಹೆಸರು ‘ಯೂ ಆರ್‌ ಮೈ ಹೀರೋ’. ಮೂಲ ತೆಲುಗಿನ ಈ ಸಿನಿಮಾ, ಹಿಂದಿಯಲ್ಲಿಯೂ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ. ಜೂನ್‌ 17ಕ್ಕೆ ತೆಲುಗು ಅವತರಣಿಕೆ ಬಿಡುಗಡೆಯಾಗಲಿದೆ. ಕನ್ನಡ, ತಮಿಳು, ಮಲಯಾಳಂಗೆ ಡಬ್‌ ಆಗಿ ತೆರೆಗೆ ಬರಲಿದೆ.

ಸಂಹಿತಾ ಹೇಳುವಂತೆ, ‘ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ನನ್ನ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಮೊದಲ ಸಲ ತೆಲುಗು ಟೀಮ್‌ ಜೊತೆಗೆ ಕೆಲಸ ಮಾಡಿದ್ದೇನೆ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ, ತೆಲುಗಿನಲ್ಲಿನ ವಾತಾರಣವೇ ಬೇರೆ ಇತ್ತು. ಚಿತ್ರದ ಬಹುತೇಕ ಶೂಟಿಂಗ್‌ ಹೈದರಾಬಾದ್‌ನಲ್ಲಿಯೇ ಮುಗಿದಿದೆ’ ಎನ್ನುತ್ತಾರೆ.

ADVERTISEMENT

‘ಯೂ ಆರ್‌ ಮೈ ಹೀರೋ’ ಇದೊಂದು ಹಾರರ್‌ ಸಿನಿಮಾ. ಯಾವುದೋ ಒಂದು ಕಾರಣಕ್ಕೆ ಮನೆಯೊಂದನ್ನು ಸೇರಿಕೊಳ್ಳುತ್ತೇನೆ. ಅಲ್ಲಿ ದೆವ್ವದ ಕಾಟ ಶುರುವಾಗುತ್ತದೆ. ಅದರ ಕಾಟ ಹೇಗಿರುತ್ತದೆ? ಕೊನೆಗೆ ಅದರ ಆಟಕ್ಕೆ ಬ್ರೇಕ್‌ ಹಾಕುವುದು ಹೇಗೆ? ಹಾರರ್‌ ಟಚ್‌ ಜತೆಗೆ ಸಸ್ಪೆನ್ಸ್‌ ರೀತಿಯಲ್ಲಿ ಸಿನಿಮಾ ನೋಡಿಸಿಕೊಂಡು ಸಾಗಲಿದೆ’ ಎನ್ನುತ್ತಾರೆ ಅವರು.

ಮಾಡೆಲಿಂಗ್‌ನಲ್ಲಿರುವ ಸಂಹಿತಾ, ಮೆಟ್‌ ಗಾಲಾ ಕಾರ್ಯಕ್ರಮದಲ್ಲಿಯೂ ಹೆಜ್ಜೆ ಹಾಕಿದ್ದಾರೆ. 60ಕ್ಕೂ ಅಧಿಕ ಫ್ಯಾಷನ್‌ ಶೋಗಳಲ್ಲಿ ಸಂಹಿತಾ ಶೋ ಸ್ಟಾಪರ್‌ ಆಗಿ ಭಾಗವಹಿಸಿದ್ದಾರೆ. ಆ ಎಲ್ಲ ಶೋಗಳಿಗೆ ಫಾರೆವರ್‌ ನವೀನ್‌ ಕುಮಾರ್‌ ಫ್ಯಾಷನ್‌ ಡಿಸೈನರ್‌ ಆಗಿದ್ದರು. ಈ ಸಿನಿಮಾಕ್ಕೂ ಅವರೇ ವಸ್ತ್ರ ವಿನ್ಯಾಸ ಮಾಡಿದ್ದಾರೆ.

‘ಯೂ ಆರ್‌ ಮೈ ಹೀರೋ’ದಲ್ಲಿ ದೊಡ್ಡ ತಾರಾಬಳಗವೇ ಇದೆ. ಫಿರೋಜ್‌ ಖಾನ್‌, ಸನಾ ಖಾನ್, ಸಂಹಿತಾ ವಿನ್ಯಾ, ಐಶ್ವರ್ಯಾ, ಮಿಲಿಂದ್‌ ಗುನಾಜಿ, ಮೇಕಾ ರಾಮಕೃಷ್ಣ, ಆನಂದ್‌ ಸೇರಿ ಹಲವರು ನಟಿಸಿದ್ದಾರೆ. ಶೇರ್‌ ಎಂಬುವವರು ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಂಗೀತ, ಕತೆ, ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಮಿನ್ನಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಪ್ರವೀಣ್‌ ಕಾವೇಟಿ ಛಾಯಾಗ್ರಹಣ, ಡಿ ವೆಂಕಟ್‌ ಪ್ರಭು ಅವರ ಸಂಕಲನ, ಸಾಯಿರಾಜ್‌ ನೃತ್ಯ ನಿರ್ದೇಶನವಿದೆ.

ಇನ್ನು ಕನ್ನಡದಲ್ಲಿ 'ಯಾಕೋ ಬೇಜಾರು' ಮತ್ತು ‘ದಿ ಕೇಸ್‌ ಅಫ್‌ ಹಂಸ’ ಸಿನಿಮಾದ ಕೆಲಸಗಳನ್ನು ಮುಗಿಸಿರುವ ವಿನ್ಯಾ, ತಮಿಳಿನ ಸಿನಿಮಾವೊಂದಕ್ಕೂ ಸಹಿ ಮಾಡಿದ್ದಾರೆ. ಕನ್ನಡದಲ್ಲಿ ‘ಹಾಲುತುಪ್ಪ’, ‘ಅಮೃತಗಳಿಗೆ’, ‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’, ‘ವಿಷ್ಣು ಸರ್ಕಲ್‌’, ‘ಸೂತ್ರಧಾರಿ’ ಚಿತ್ರಗಳು ತೆರೆಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.