ADVERTISEMENT

ನಟನೆಯಲ್ಲಿ ಹುಡುಕಾಟ ನಿರಂತರ: ಸಂಪತ್‌ ಸಿನಿಪಯಣ

ವಿನಾಯಕ ಕೆ.ಎಸ್.
Published 5 ಜೂನ್ 2025, 0:30 IST
Last Updated 5 ಜೂನ್ 2025, 0:30 IST
<div class="paragraphs"><p>ಸಂಪತ್‌ ಮೈತ್ರೇಯ</p></div>

ಸಂಪತ್‌ ಮೈತ್ರೇಯ

   
ಪೋಷಕ ಕಲಾವಿದನಾಗಿ ಸಾಕಷ್ಟು ಚಿತ್ರಗಳು ಅಭಿನಯಿಸಿರುವ ಸಂಪತ್‌ ಮೈತ್ರೇಯ ಮುಖ್ಯಭೂಮಿಕೆಯಲ್ಲಿರುವ ‘ನೀತಿ’ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಈ ನೆಪದಲ್ಲಿ ಅವರು ತಮ್ಮ ಸಿನಿಪಯಣವನ್ನು ಮೆಲುಕು ಹಾಕಿದರು.

‘ಒಂದೇ ಮನೆಯಲ್ಲಿ ಒಂದು ರಾತ್ರಿ ನಡೆಯುವ ವಿಭಿನ್ನ ಕಥೆಯಿದು. ಸಿನಿಮಾದಲ್ಲಿ ಮುಖ್ಯವಾಗಿ ಎರಡೇ ಪಾತ್ರಗಳಿರುವುದು. ಉಳಿದ ಪಾತ್ರಗಳು ಅಲ್ಲಲ್ಲಿ ಆಗಾಗ ಬಂದು ಹೋಗುತ್ತವೆ. ಸಸ್ಪೆನ್ಸ್‌, ಥ್ರಿಲ್ಲರ್‌ ಜಾನರ್‌ನ ಸಿನಿಮಾವಿದು. ನಾನು ಒಂದು ಪಾತ್ರದಲ್ಲಿದ್ದರೆ, ಖುಷಿ ರವಿ ಇನ್ನೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದು ‘ನೀತಿ’ ಸಿನಿಮಾದ ಮಾಹಿತಿಯೊಂದಿಗೆ ಮಾತು ಪ್ರಾರಂಭಿಸಿದರು ಸಂಪತ್‌.

‘ನೀತಿ’ ಚಿತ್ರಕ್ಕೆ ರಾಜಗೋಪಾಲ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಪ್ರವೀಣ್ ಅಥರ್ವ ಕೂಡ ಚಿತ್ರದಲ್ಲಿದ್ದಾರೆ. ರೂಸಿಕ್ ಸಂಗೀತ ಸಂಯೋಜನೆಯಿದೆ. ಹಂಗೇರಿ ದೇಶದ ‘ಪಿಲ್‌ಹಾರ್ಮೋನಿಕ್ ಆರ್ಕೆಸ್ಟ್ರಾ’ದಲ್ಲಿ ಚಿತ್ರದ ಸಂಗೀತದ ಕೆಲಸಗಳು ನಡೆದಿರುವುದು ವಿಶೇಷ ಎಂದಿದೆ ಚಿತ್ರತಂಡ. ಪ್ರದೀಪ್ ಪದ್ಮಕುಮಾರ್‌ ಛಾಯಾಚಿತ್ರಗ್ರಹಣ, ಆರ್.ರಾಜ್‌ಕುಮಾರ್‌ ಸಂಕಲನವಿದೆ.

ADVERTISEMENT

ರಂಗಭೂಮಿ ಕಲಾವಿದನಾಗಿ ಗುರುತಿಸಿಕೊಂಡ ಇವರು ಸಣ್ಣ, ಸಣ್ಣ ಪಾತ್ರಗಳೊಂದಿಗೆ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು. ಈತನಕ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಮೂರನೇ ಕೃಷ್ಣಪ್ಪ’, ‘ಬಿಸಿಲು ಕುದುರೆ’, ‘ಅನ್ನ’ ಮೊದಲಾದ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಇವರಿಗೆ ಬ್ರೇಕ್‌ ನೀಡಿದ್ದು ‘ಕಿರಗೂರಿನ ಗಯ್ಯಾಳಿಗಳು’, ‘ಕವಲು ದಾರಿ’ ಚಿತ್ರಗಳು.

‘ಕೆಜಿಎಫ್‌’ ಚಿತ್ರದಿಂದಲೂ ಒಂದಷ್ಟು ಅವಕಾಶ ಹೆಚ್ಚಾಯಿತು. ಈಗಲೂ ನನ್ನನ್ನು ‘ಕವಲು ದಾರಿ ಸಂಪತ್‌’ ಎಂದೇ ಕರೆಯುತ್ತಾರೆ. ಅಷ್ಟರಮಟ್ಟಿಗೆ ಆ ಪಾತ್ರ ಜನಪ್ರಿಯತೆ ನೀಡಿತು. ರಂಗಭೂಮಿ, ಚಿತ್ರರಂಗ ಸೇರಿದರೆ ಸುಮಾರು 25 ವರ್ಷಗಳ ಪಯಣವಿದು. ವಿವಿಧ ಪಾತ್ರಗಳ ಮೂಲಕ ನನ್ನನ್ನು ನಾನು ಹುಡುಕಿಕೊಳ್ಳುತ್ತ ಇರುತ್ತೇನೆ. ಈ ಹುಡುಕಾಟ ನಿರಂತರ. ಬಹುತೇಕ ಪ್ರಯೋಗಾತ್ಮಕ ಚಿತ್ರಗಳಲ್ಲಿಯೇ ಕೆಲಸ ಮಾಡಿದ್ದು ಹೆಚ್ಚು. ಕೆಲಸವಿದ್ದಾಗ ಖುಷಿಯಾಗುತ್ತದೆ. ಕೆಲಸವಿಲ್ಲದಿದ್ದಾಗ ಒಂದು ರೀತಿ ಬೇಸರ’ ಎನ್ನುತ್ತಾರೆ ಅವರು.

‘ಧರಣಿ’ ಚಿತ್ರದಲ್ಲಿ ಮುಖ್ಯ ಖಳನಾಯಕನಾಗಿ ನಟಿಸುತ್ತಿರುವೆ. ಜಡೇಶ್‌ ಹಂಪಿ ನಿರ್ದೇಶನದ ‘ಲ್ಯಾಂಡ್‌ಲಾರ್ಡ್‌’ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ದುನಿಯಾ ವಿಜಯ್‌ ಅವರ ‘ಸಿಟಿ ಲೈಟ್ಸ್‌’ ಚಿತ್ರದಲ್ಲಿಯೂ ಒಂದು ಸಣ್ಣ ಪಾತ್ರ ನೀಡಿದ್ದಾರೆ. ಟಿ.ಕೆ.ದಯಾನಂದ್‌ ನಿರ್ದೇಶನ ‘ಡೆಂಜಿ’ಯಲ್ಲೊಂದು ಪಾತ್ರ ಮಾಡಿರುವೆ. ‘ಮಾರಿಕ’ ಎಂಬ ಇನ್ನೊಂದು ಚಿತ್ರ ಚಿತ್ರೀಕರಣದಲ್ಲಿದೆ. ಹೀಗೆ ಒಂದಷ್ಟು ಸಿನಿಮಾಗಳು ಕೈಯ್ಯಲ್ಲಿವೆ’ ಎಂದು ತಮ್ಮ ಮುಂದಿನ ಯೋಜನೆಗಳ ಕುರಿತು ಅವರು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.