ADVERTISEMENT

ಸಿನಿ ಸುದ್ದಿ | ನಟಿ ಬೃಂದಾ ಬುಟ್ಟಿಯಲ್ಲಿ ಐದು ಸಿನಿಮಾಗಳು

​ಪ್ರಜಾವಾಣಿ ವಾರ್ತೆ
Published 2 ಮೇ 2025, 0:43 IST
Last Updated 2 ಮೇ 2025, 0:43 IST
ಬೃಂದಾ ಆಚಾರ್ಯ 
ಬೃಂದಾ ಆಚಾರ್ಯ    

‘ನೆನಪಿರಲಿ’ ಪ್ರೇಮ್‌ ನಟನೆಯ ‘ಪ್ರೇಮಂ ಪೂಜ್ಯಂ’ ಸಿನಿಮಾ ಮೂಲಕ ನಾಯಕಿಯಾಗಿ ಚಂದನವನಕ್ಕೆ ಹೆಜ್ಜೆ ಇಟ್ಟ ನಟಿ ಬೃಂದಾ ಆಚಾರ್ಯ ಅವರು ತಮ್ಮ ಐದು ಕನ್ನಡ ಸಿನಿಮಾಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. 

‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ‘ಶಿವಾನಿ’ಯಾಗಿ ಮಿಂಚಿದ್ದರು ಬೃಂದಾ. ಇದರ ಬೆನ್ನಲ್ಲೇ ಸಾಲು ಸಾಲು ಅವಕಾಶಗಳು ಅರಸಿ ಬಂದವು. ದೀಕ್ಷಿತ್‌ ಶೆಟ್ಟಿ ಜೊತೆಗೆ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ’, ನಿರೂಪ್‌ ಭಂಡಾರಿ ಜೊತೆಗೆ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’, ದುನಿಯಾ ವಿಜಯ್‌ ಜೊತೆಗೆ ‘ಮಾರುತ’, ಸತ್ಯಪ್ರಕಾಶ್‌ ಜೊತೆಗೆ ‘ಎಕ್ಸ್‌ ಆ್ಯಂಡ್‌ ವೈ’ ಹಾಗೂ ಅಜಯ್‌ ರಾವ್‌ ನಟನೆಯ ಸಿನಿಮಾವೊಂದರಲ್ಲಿ  ಬಣ್ಣಹಚ್ಚಿದ್ದಾರೆ. ‘ಈ ಎಲ್ಲಾ ಸಿನಿಮಾಗಳ ಚಿತ್ರೀಕರಣ ಹಾಗೂ ಡಬ್ಬಿಂಗ್‌ ಪೂರ್ಣಗೊಂಡು ರಿಲೀಸ್‌ಗೆ ಸಜ್ಜಾಗಿವೆ. ಈ ಪೈಕಿ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ’ ಜುಲೈನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ’ ಎನ್ನುತ್ತಾ ‘ಸಿನಿಮಾ ಪುರವಣಿ’ಯೊಂದಿಗೆ ಮಾತಿಗೆ ಇಳಿದರು ಬೃಂದಾ.  

‘ಈ ವರ್ಷ ಐದು ಸಿನಿಮಾಗಳಲ್ಲಿ ಕನಿಷ್ಠ ಮೂರು ಸಿನಿಮಾಗಳು ಬಿಡುಗಡೆ ಆಗಲಿವೆ. ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ’ ಸಿನಿಮಾದಲ್ಲಿ ಬ್ಯಾಂಕ್‌ ಅಕೌಂಟೆಂಟ್‌ ಪಾತ್ರ ಮಾಡಿದ್ದೇನೆ. ನಾನು ನಿಜ ಜೀವನದಲ್ಲಿ ಇರುವುದಕ್ಕಿಂತ ಬಹಳ ಗಂಭೀರವಾದ ಪಾತ್ರವಿದು. ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವನ್ನು ಬಹಳ ನಾಜೂಕಿನಿಂದ ನಿರ್ದೇಶಕರಾದ ಅಭಿಷೇಕ್‌ ಬರೆದಿದ್ದಾರೆ. ‘ಮಾರುತ’ ಸಿನಿಮಾ ಒಂದು ಕೌಟುಂಬಿಕ ಚಿತ್ರ. ನೈಜ ಘಟನೆ ಆಧಾರಿತ ಸಾಮಾಜಿಕ ವಿಷಯವನ್ನು ಇಟ್ಟುಕೊಂಡು ಈ ಸಿನಿಮಾದ ಕಥೆ ಬರೆಯಲಾಗಿದೆ. ಇದರಲ್ಲಿ ನಾನು ಓರ್ವ ಮುಗ್ಧ ಹುಡುಗಿಯ ಪಾತ್ರ ಮಾಡಿದ್ದೇನೆ. ಐದು ಸಿನಿಮಾಗಳಲ್ಲಿ ಹೊಸ ಅನುಭವ ಆಗಿದೆ. ‘ಜೂಲಿಯೆಟ್‌’ ಸಿನಿಮಾದಲ್ಲಿ ಪ್ರಯೋಗಾತ್ಮಕ ಪಾತ್ರ ಮಾಡಿದೆ. ಒಳ್ಳೆಯ ನಿರ್ಮಾಣ ಸಂಸ್ಥೆ, ಖ್ಯಾತ ನಟರ ಜೊತೆ ನಟಿಸಿದ್ದೇನೆ. ಭಿನ್ನವಾದ ಪಾತ್ರಗಳು ಎಲ್ಲಾ ಸಿನಿಮಾಗಳಲ್ಲಿ ಸಿಕ್ಕಿದ್ದವು. 2025ರಲ್ಲಿ ನಾನು ಹಲವು ಕಥೆಗಳನ್ನು ಕೇಳಿದ್ದೇನೆ. ಇದರಲ್ಲಿ ಒಂದೆರಡು ಒಪ್ಪಿಕೊಂಡಿದ್ದೇನೆ. ಪಾತ್ರಗಳ ಆಯ್ಕೆಯಲ್ಲಿ ಸ್ವಲ್ಪ ಗಂಭೀರವಾಗುತ್ತಿದ್ದೇನೆ. ಹಳೆಯ ಪಾತ್ರಗಳೇ ಮರುಕಳಿಸಬಾರದು ಎನ್ನುವ ಉದ್ದೇಶ ಇದರಲ್ಲಿದೆ’ ಎಂದರು. 

ADVERTISEMENT

‘ಒಳ್ಳೆಯ ಸಿನಿಮಾ ಬಂದರೆ ಜನ ಕೈಬಿಡಲ್ಲ ಎನ್ನುವ ನಂಬಿಕೆಯೇ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾ ನಿರ್ಮಾಣವಾಗುವುದರ ಹಿಂದಿನ ಶಕ್ತಿ. ಈ ಸಂದರ್ಭದಲ್ಲಿ ಭರವಸೆ ಇಟ್ಟುಕೊಂಡು ಕೆಲಸ ಮಾಡುವುದು ಮುಖ್ಯವಾಗುತ್ತದೆ. ಪರ ಭಾಷೆಗಳಿಂದಲೂ ನನಗೆ ಅವಕಾಶಗಳು ಬಂದಿವೆ. ಒಂದು ತಮಿಳು ಹಾಗೂ ಇನ್ನೊಂದು ತೆಲುಗಿನಿಂದ ಬಂದಿತ್ತು. ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ’ ಸಿನಿಮಾ ತೆಲುಗಿನಲ್ಲೂ ಬಿಡುಗಡೆ ಆಗಲಿದೆ. ನನಗೆ ನಿರಂತರವಾಗಿ ಸಿನಿಮಾ ಮಾಡುತ್ತಿರಬೇಕು. ಕನ್ನಡದಲ್ಲೇ ಒಳ್ಳೆಯ ಸಿನಿಮಾದ ಅವಕಾಶಗಳು ಬರುತ್ತಿವೆ. ಪರಭಾಷೆಯಲ್ಲಿ ನಟಿಸಲೇಬೇಕು ಎನ್ನುವ ಉದ್ದೇಶದಿಂದ ಬಂದ ಎಲ್ಲಾ ಪಾತ್ರಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ’ ಎನ್ನುತ್ತಾರೆ ಬೃಂದಾ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.