ADVERTISEMENT

ನಟಿ ಅಂಕಿತಾ ಅಮರ್‌ ಸಂದರ್ಶನ: ಇಬ್ಬನಿ ತಂದ ಹೊಸ ಹನಿ

ಅಭಿಲಾಷ್ ಪಿ.ಎಸ್‌.
Published 15 ಮೇ 2025, 23:30 IST
Last Updated 15 ಮೇ 2025, 23:30 IST
ಅಂಕಿತಾ 
ಅಂಕಿತಾ    
ನಟಿ ಅಂಕಿತಾ ಅಮರ್‌ ಇಲ್ಲಿಯವರೆಗೆ ಮಾಡಿರುವ ಒಟ್ಟು ಸಿನಿಮಾಗಳು ನಾಲ್ಕು. ಇವುಗಳಲ್ಲಿ ಎರಡು ತೆರೆಕಂಡಿವೆ. ಕಳೆದ ವರ್ಷ ತೆರೆಕಂಡ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಅಂಕಿತಾ ಸಿನಿಬದುಕಿಗೆ ತಿರುವು ನೀಡಿದೆ. ಅಂಕಿತಾ ಇದೀಗ ಉಪೇಂದ್ರ ನಟನೆಯ ‘ಭಾರ್ಗವ’ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹೊಸ ಪ್ರಾಜೆಕ್ಟ್‌ ಬಗ್ಗೆ ಅಂಕಿತಾ ಮಾತು.

ಸಿನಿ ಪಯಣದ ಮೇಲೆ ‘ಇಬ್ಬನಿ ತಬ್ಬಿದ ಇಳೆಯಲಿ’ ಪರಿಣಾಮ...

ನನಗೆ ಈ ಸಿನಿಮಾವೇ ಎಲ್ಲವನ್ನೂ ಕೊಟ್ಟಿದೆ. ಇಡೀ ತಂಡ ಬಹಳ ಕಷ್ಪಪಟ್ಟು, ಇಷ್ಟಪಟ್ಟು ಮಾಡಿದ ಸಿನಿಮಾವಿದು. ಅಲ್ಲಿ ಹಾಕಿದ ಶ್ರಮವೇ ಇಂದು ಇಂತಹ ಅವಕಾಶಗಳು ತೆರೆದುಕೊಳ್ಳಲು ಕಾರಣವಾಗಿದೆ. ‘ಇಬ್ಬನಿ..’ ಸಿನಿಮಾದ ನಿರ್ಮಾಪಕರು, ನಿರ್ದೇಶಕರು ಪೂರ್ಣವಾದ ನಂಬಿಕೆ ಇಟ್ಟು ನನಗೆ ಆ ಪಾತ್ರ ನೀಡಿದ್ದರು. ಹೊಸಬರ ಮೇಲೆ ಭರವಸೆ ಇಟ್ಟ ವೇದಿಕೆಯದು. ಸದ್ಯ ಚಿತ್ರರಂಗದಲ್ಲಿ ಇಂತಹ ಅವಕಾಶ ನೀಡುವುದು ಬಹಳ ಮುಖ್ಯ. ನಟನೆಯನ್ನೇ ಸರ್ವಸ್ವ ಎಂದುಕೊಂಡಿದ್ದ ನನಗೆ ಇದೊಂದು ಅತ್ಯುತ್ತಮ ವೇದಿಕೆಯಾಯಿತು. ಉಪೇಂದ್ರ ಅವರು ಈ ಸಿನಿಮಾದಲ್ಲಿನ ನನ್ನ ನಟನೆಯನ್ನು ನೋಡಿಯೇ ‘ಭಾರ್ಗವ’ದಲ್ಲಿ ಅವಕಾಶ ನೀಡಿದ್ದಾರೆ. ಅವರು ಈ ಸಿನಿಮಾ ನೋಡದೇ ಹೋಗಿದ್ದರೆ ಅವಕಾಶ ಸಿಗುತ್ತಿತ್ತೋ ಇಲ್ಲವೋ ತಿಳಿಯದು.

‘ಭಾರ್ಗವ’ ಪ್ರಾಜೆಕ್ಟ್‌ ದೊರಕಿದ್ದು ಹೇಗೆ?

ADVERTISEMENT

‘ಇಬ್ಬನಿ ತಬ್ಬಿದ ಇಳೆಯಲಿ’ ನನ್ನ ಮೊದಲ ಕಮರ್ಷಿಯಲ್‌ ಸಿನಿಮಾ. ಇದು ಸೇರಿ ಇಲ್ಲಿಯವರೆಗೆ ನಾಲ್ಕು ಸಿನಿಮಾಗಳನ್ನು ಮಾಡಿದ್ದೇನೆ. ಆದರೆ ಯಾವುದಕ್ಕೂ ಆಡಿಷನ್‌ ನೀಡಿಲ್ಲ. ಎಲ್ಲಾ ಅವಕಾಶಗಳೂ ನೇರವಾಗಿ ಬಂದಿತ್ತು. ಚಿತ್ರರಂಗಕ್ಕೆ ಹೊಸದಾಗಿ ಬಂದಾಗ ಮೊದಲ ಸಿನಿಮಾದ ಬಳಿಕ ಮುಂದೇನು ಎಂಬ ಯೋಚನೆ ಬಂದಿತ್ತು. ಯಾವ ರೀತಿ ಆಡಿಷನ್‌ ನೀಡಬೇಕು ಎಂಬುವುದೂ ನನಗೆ ತಿಳಿದಿಲ್ಲ. ಇಂತಹ ಸಂದರ್ಭದಲ್ಲೇ ಒಂದು ದಿನ ಬೆಳಗ್ಗೆ ನಿರ್ಮಾಪಕರಾದ ಸೂರಪ್ಪ ಬಾಬು ಅವರು ಫೋನ್‌ ಮಾಡಿದರು. ‘ಉಪೇಂದ್ರ ಅವರು ನಿಮ್ಮ ಸಿನಿಮಾ ನೋಡಿದ್ದಾರೆ. ಅವರು ಮಾತನಾಡುತ್ತಾರೆ’ ಎಂದು ಅವರ ಜೊತೆಗೇ ಇದ್ದ ಉಪೇಂದ್ರ ಅವರಿಗೆ ಮೊಬೈಲ್‌ ನೀಡಿದರು. ‘ಎಂತಹಾ ಅಭಿನೇತ್ರಿ ನೀವು, ನಿಮ್ಮ ಕಣ್ಣುಗಳು ಎಷ್ಟು ಚೆನ್ನಾಗಿ ಮಾತನಾಡುತ್ತವೆ. ನಿಮ್ಮ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದೇನೆ’ ಎಂದು ಉಪೇಂದ್ರ ಅವರು ಹೇಳಿದಾಗ ಒಂದು ಕ್ಷಣ ಇದು ಕನಸೇ ಎಂದೆನಿಸಿತು. ಹೀಗೆ ‘ಭಾರ್ಗವ’ ಸಿನಿಮಾದಲ್ಲಿ ಅವಕಾಶ ದೊರೆಯಿತು. ಉಪೇಂದ್ರ ಅವರಂತಹ ನಿರ್ದೇಶಕರು ಕರೆ ಮಾಡಿ ನನ್ನ ನಟನೆಯನ್ನು ಗುರುತಿಸಿ ಮಾತನಾಡಿದ್ದಾರೆ ಎನ್ನುವುದೇ ನನಗೆ ಹೆಮ್ಮೆಯ ವಿಷಯ.

ಉಪೇಂದ್ರ ಅವರ ಸಿನಿಮಾಗಳ ನೆನಪು...

ಬಾಲ್ಯದಲ್ಲಿ ಶಿವಣ್ಣ ಹಾಗೂ ಉಪೇಂದ್ರ ಅವರ ಸಿನಿಮಾಗಳು ಬಿಡುಗಡೆಯಾಗುತ್ತಿದ್ದ ಸಂದರ್ಭಗಳು ನೆನಪಿನಲ್ಲಿವೆ. ಉದಯ ಮ್ಯೂಸಿಕ್‌ ಚಾನೆಲ್‌ನಲ್ಲಿ ‘ಕುಟುಂಬ’ ಸಿನಿಮಾದ ‘ತಳುಕ್ಕು ಬಳುಕಿನ..’ ಹಾಡು ಬಂದಾಗ ಓಡೋಡಿ ಬಂದು ನೋಡುತ್ತಿದ್ದೆವು. ಉಪೇಂದ್ರ ಅವರ ಸಿನಿಮಾಗಳನ್ನು ಅರ್ಥಮಾಡಿಕೊಂಡಿದ್ದೇ ಪಿಯುಸಿ ನಂತರದ ದಿನಗಳಲ್ಲಿ. ಉಪೇಂದ್ರ ಅವರನ್ನು ಏಕೆ ಜನ ಇಷ್ಟಪಡುತ್ತಾರೆ ಎಂದು ಅರಿವಾಗಿದ್ದೇ ಆವಾಗ. ಒಂದು ಹಂತದವರೆಗೆ ನಮಗೆ ಹೀರೊ, ಹೀರೊಯಿನ್‌ ಅಷ್ಟೇ ಮುಖ್ಯವಾಗುತ್ತಾರೆ. ಬಳಿಕ ನಿರ್ದೇಶನವೆಂಬ ವಿಷಯ ಹತ್ತಿರವಾಗುತ್ತದೆ. ಸಿನಿಮಾವೊಂದಕ್ಕೆ ನಿರ್ದೇಶನವೆಂಬುವುದು ಎಷ್ಟು ಮುಖ್ಯವೆನ್ನುವುದನ್ನು ತಿಳಿಸಿಕೊಟ್ಟವರಲ್ಲಿ ಉಪೇಂದ್ರ ಅವರೂ ಒಬ್ಬರು. ಅವರಲ್ಲಿ ಇರುವಂತಹ ಭಿನ್ನ ಆಲೋಚನೆ, ಕಥೆ ಹೇಳುವ ಸೂತ್ರ, ವಿಭಿನ್ನವಾಗಿ ಶೀರ್ಷಿಕೆ ಇಡುವ ಯೋಚನೆ, ಅವರ ಮಾತುಗಳು–ಅದರೊಳಗಿನ ಅರ್ಥ ಬಹಳ ಕುತೂಹಲ ಹುಟ್ಟಿಸುತ್ತದೆ.   

‘ಸೂಪರ್‌’ ಸಿನಿಮಾದ ಆರಂಭಿಕ ದೃಶ್ಯಗಳನ್ನು ನೋಡಿ ನಮ್ಮ ಭಾರತವೂ ಹೀಗೆ ಆಗಬಾರದೇ ಎಂಬ ಆಸೆ ಮೂಡಿತ್ತು. ‘ಉಪ್ಪಿ–2’ ಸಿನಿಮಾದ ‘ಯೋಚನೆ ಮಾಡದೆ ಹೇಳ್ತೀನಿ ಯೋಚನೆ ಮಾಡಬೇಡ’ ಎಂಬ ವಾಕ್ಯವು ಬಹಳ ಚಿಂತನೆಗೆ ದೂಡಿತ್ತು. ‘ಅನಾಥರು’, ‘ಕಲ್ಪನಾ’ ನಟನೆಯಲ್ಲಿ ಇಷ್ಟವಾದ ಸಿನಿಮಾಗಳು. ಉಪೇಂದ್ರ ಅವರ ಕಣ್ಣಿನ ಚಲನೆಯನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದ ಸಂದರ್ಭಗಳೂ ನೆನಪಾಗುತ್ತಿವೆ.  

ಅಂಕಿತಾ ಕೈಯಲ್ಲಿರುವ ಹೊಸ ಪ್ರಾಜೆಕ್ಟ್‌ಗಳು...

ನಾನು ಮೊದಲು ಒಪ್ಪಿಕೊಂಡಿದ್ದ ‘ಅಬಜಬದಬ’ ಶೂಟಿಂಗ್‌ ಅರ್ಧದಲ್ಲೇ ನಿಂತಿದೆ. ನಟ ಶೈನ್‌ ಶೆಟ್ಟಿ ಜೊತೆಗಿನ ‘ಜಸ್ಟ್‌ ಮ್ಯಾರೀಡ್‌’ ಸಿನಿಮಾದ ಶೂಟಿಂಗ್‌, ಡಬ್ಬಿಂಗ್‌ ಪೂರ್ಣಗೊಂಡು ರಿಲೀಸ್‌ಗೆ ಸಜ್ಜಾಗಿದೆ. ನಿರೂಪ್‌ ಭಂಡಾರಿ ಜೊತೆಗಿನ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಸಿನಿಮಾದ ಶೂಟಿಂಗ್‌ ಪೂರ್ಣಗೊಂಡಿದ್ದು ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಎರಡು ಸ್ಕ್ರಿಪ್ಟ್‌ಗಳು ಮಾತುಕಥೆ ಹಂತದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.