ADVERTISEMENT

ರಕ್ಷಿತ್‌ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾ ಟ್ರೇಲರ್‌ ಮೇ 16ಕ್ಕೆ

​ಪ್ರಜಾವಾಣಿ ವಾರ್ತೆ
Published 10 ಮೇ 2022, 7:15 IST
Last Updated 10 ಮೇ 2022, 7:15 IST
'777 ಚಾರ್ಲಿ' ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ
'777 ಚಾರ್ಲಿ' ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ   

ನಟ ರಕ್ಷಿತ್‌ ಶೆಟ್ಟಿ ಅಭಿನಯದ ‘777 ಚಾರ್ಲಿ’ಪ್ಯಾನ್‌ ಇಂಡಿಯಾ ಸಿನಿಮಾದ ಟ್ರೇಲರ್‌ ಮೇ 16ರಂದು ಮಧ್ಯಾಹ್ನ 12.12ಕ್ಕೆ ಬಿಡುಗಡೆಯಾಗಲಿದೆ. ವಿಶ್ವದಾದ್ಯಂತ ಜೂನ್‌ 10ರಂದು ರಿಲೀಸ್‌ ಆಗಲಿರುವ ಈ ಸಿನಿಮಾದ ಟ್ರೇಲರ್‌ ಪೋಸ್ಟರ್‌ ಅನ್ನು ರಕ್ಷಿತ್‌ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಬಿಡುಗಡೆ ಹೊಸ್ತಿಲಿನಲ್ಲಿ ‘777 ಚಾರ್ಲಿ’ ಸಖತ್‌ ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ‘ಲೈಫ್‌ ಆಫ್‌ ಧರ್ಮ’ ಹಾಗೂ ‘ಲೈಫ್‌ ಆಫ್‌ ಚಾರ್ಲಿ’ ಟೀಸರ್‌ಗಳು ಯುಟ್ಯೂಬ್‌ನಲ್ಲಿ ಲಕ್ಷಾಂತರ ವ್ಯೂವ್ಸ್‌ ಪಡೆದಿದೆ. ಚಿತ್ರದ ‘ಟಾರ್ಚರ್‌’ ಹಾಡಿನಲ್ಲಿ ‘ಧರ್ಮ’ನಿಗೆ ‘ಚಾರ್ಲಿ’ ನೀಡುತ್ತಿರುವ ಟಾರ್ಚರ್‌, ಧರ್ಮ–ಚಾರ್ಲಿ ನಡುವಿನ ಟಾಮ್‌ ಆ್ಯಂಡ್‌ ಜೆರಿ ಜಗಳ ಪ್ರೇಕ್ಷಕರನ್ನು ಸೆಳೆದಿದೆ. ಸುಮಾರು ಎರಡೂವರೆ ವರ್ಷದ ಬಳಿಕ ರಕ್ಷಿತ್‌ ಶೆಟ್ಟಿ ಅವರು ಈ ಸಿನಿಮಾ ಮುಖಾಂತರ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಹಿಂದಿ ಅವತರಣಿಕೆಯನ್ನು ಯುಎಫ್‌ಒ ಸಂಸ್ಥೆ ವಿತರಣೆ ಮಾಡಲಿದ್ದು, ಈ ಪ್ಯಾನ್‌ ಇಂಡಿಯಾ ಸಿನಿಮಾ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ.

ಚಿತ್ರದ ಕನ್ನಡ ಆವೃತ್ತಿಯ ಡಿಜಿಟಲ್‌ ಹಾಗೂ ಸ್ಯಾಟಲೈಟ್‌ ಪ್ರಸಾರದ ಹಕ್ಕನ್ನು ಕಲರ್ಸ್‌ ಕನ್ನಡ ಹಾಗೂ ವೂಟ್‌ ಪಡೆದುಕೊಂಡಿದೆ. ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣಲಿದೆ. ಸಂಗೀತಾ ಶೃಂಗೇರಿ, ನಟ, ನಿರ್ದೇಶಕ ರಾಜ್‌ ಬಿ.ಶೆಟ್ಟಿ, ಡ್ಯಾನಿಶ್‌ ಸೇಠ್‌ ತಾರಾಗಣದಲ್ಲಿದ್ದಾರೆ. ಜಿ.ಎಸ್‌.ಗುಪ್ತ ಹಾಗೂ ರಕ್ಷಿತ್‌ ಶೆಟ್ಟಿ ಈ ಚಿತ್ರದ ನಿರ್ಮಾಪಕ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.