ADVERTISEMENT

ಬೆಳ್ಳಿ ಪರದೆ: ದರ್ಶನ್‌ ಜತೆ ನಟಿಸುವಾಸೆ

ರಮೇಶ ಕೆ
Published 11 ಜೂನ್ 2019, 6:48 IST
Last Updated 11 ಜೂನ್ 2019, 6:48 IST
ಸುಶ್ಮಿತಾ
ಸುಶ್ಮಿತಾ   

ಬೆಳ್ಳಿಪರದೆ ಮೇಲೆ ನಟಿಯರನ್ನು ಕಣ್ತುಂಬಿಕೊಳ್ಳುತ್ತಿದ್ದ ಹುಡುಗಿಗೆ ಮುಂದೊಂದು ದಿನ ಅದೇ ಪರದೆ ಮೇಲೆ ತಾನು ಕಾಣಿಸಿಕೊಳ್ಳಬೇಕು ಎಂಬ ಆಸೆ ಚಿಗುರೊಡೆಯಿತು. ಪಿಯುಸಿ ಮುಗಿದ ಮೇಲೆ ಧಾರಾವಾಹಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿ ಕೊಂಡು ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು.

ಮೈಸೂರಿನ ಕುವೆಂಪು ನಗರದ ನಿವಾಸಿ ಸುಶ್ಮಿತಾ ರಾಮ್‌ಕಲಾ ಆ ಕಲಾವಿದೆ.

‘ಯಾರೇ ನೀ ಮೋಹಿನಿ’, ‘ರಾಜಕುಮಾರಿ’, ‘ರಾಧಾ ರಮಣ’, ‘ಮಿಥುನ ರಾಶಿ’ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಮನೆ ಮಾತಾಗಿದ್ದಾರೆ. ಬಣ್ಣದ ಲೋಕದ ಪಯಣದ ಬಗ್ಗೆ ಸುಶ್ಮಿತಾ ‘ಮೆಟ್ರೊ’ ದೊಂದಿಗೆ ಮಾತನಾ ಡಿದ್ದಾರೆ.

ADVERTISEMENT

‘ಚಿಕ್ಕಂದಿ ನಲ್ಲಿ ಅಪ್ಪ ನೊಂದಿಗೆ ಸಿನಿಮಾ ನೋಡಲು ಟಾಕೀಸ್‌ಗೆ ಹೋಗುತ್ತಿದ್ದೆ. ಆಗ ನಟಿಯರನ್ನು ನೋಡಿ, ಅವರಂತೆ ನಾನು ಒಂದು ದಿನ ದೊಡ್ಡ ನಟಿ ಆಗಬೇಕು ಎಂಬ ಆಸೆ ಹುಟ್ಟಿಕೊಂಡಿತು. ಅಂದಿನಿಂದ ನನ್ನ ಗುರಿ ನಟನೆಯತ್ತಲೇ ಸಾಗಿತು. ಪಿಯುಸಿ ಮುಗಿದ ಮೇಲೆ ಸಿನಿಮಾ ಒಂದಕ್ಕೆ ಅವಕಾಶ ಸಿಕ್ಕಿತು, ಆದರೆ ಕಾರಣಾಂತರದಿಂದ ಒಪ್ಪಿಕೊಳ್ಳಲಿಲ್ಲ. ನಂತರ ತಂದೆಯ ಸ್ನೇಹಿತರೊಬ್ಬರ ಸಹಾಯದಿಂದ ‘ಯಾರೇ ನೀ ಮೋಹಿನಿ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅಮ್ಮನ ಸಹಕಾರವೂ ಇತ್ತು, ನನ್ನ ಆಸೆಯೂ ಅದೇ ಆಗಿದ್ದರಿಂದ ಒಪ್ಪಿಕೊಂಡೆ’ ಎಂದು ಧಾರಾವಾಹಿ ಪ್ರವೇಶ ಮಾಡಿದ ಸಂದರ್ಭ ವಿವರಿಸಿದರು.

‘ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜಕುಮಾರಿ ಧಾರಾವಾಹಿಯ ವಿಲನ್‌ ಪಾತ್ರ ಹೆಚ್ಚು ಹೆಸರು ತಂದುಕೊಟ್ಟಿದೆ. ಚಿರು ನಾಯಕ. ನನ್ನ ತಾಯಿ ಹಾಗೂ ನಾನು ಇಬ್ಬರೂ ವಿಲನ್‌ಗಳೇ. ಹಿಮಗಿರಿಯಲ್ಲಿ ಚಿರು ಹುಡುಗಿಯೊಬ್ಬಳನ್ನು ಇಷ್ಟಪಟ್ಟಿರುತ್ತಾನೆ, ಆದರೆ ನನಗೆ ಅವನ ಮೇಲೆ ಹೆಚ್ಚು ಪ್ರೀತಿ, ಏನೇ ಆಗಲೀ ಅವನನ್ನು ಪಡೆಯಬೇಕು ಎಂಬ ಹಂಬಲ, ಅದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧಳಿರುತ್ತೇನೆ’ ಎಂದು ಪಾತ್ರದ ಬಗ್ಗೆ ವಿವರಿಸಿದರು.

ನಟನೆಗಾಗಿ ಯಾವುದೇ ತರಬೇತಿ ಪಡೆಯದಸುಶ್ಮಿತಾಗೆ ಸಿನಿಮಾದಲ್ಲಿ ಹೆಸರು ಮಾಡುವ ಗುರಿಯಿದೆ. ಅದಕ್ಕಾಗಿ ಬಹಳಷ್ಟು ಸೈಕಲ್‌ ಹೊಡೆದಿದ್ದಾರೆ. ಬೆಂಗಳೂರಿನ ಸಿಲ್ವರ್‌ ಸ್ಟಾರ್‌ ಫ್ಯಾಷನ್‌ ಸ್ಕೂಲ್‌ನಲ್ಲಿ ಮಾಡೆಲ್‌ ಆಗಿಯೂ ಮಿಂಚುತ್ತಿದ್ದಾರೆ.

2018ರಲ್ಲಿ ನಡೆದ ‘ಮಿಸ್ಟರ್‌ ಅಂಡ್‌ ಮಿಸ್‌ ಕರ್ನಾಟಕ’ ಸ್ಪರ್ಧೆಯಲ್ಲಿ ಷೋಸ್ಟಾಪರ್‌ ಆಗಿ ಮಿಂಚಿದ್ದಾರೆ. ‘ಮಿಸ್ಟರ್‌ ಅಂಡ್‌ ಮಿಸ್‌ ಡೆಕತ್ಲಾನ್‌ ಸ್ಪರ್ಧೆಯಲ್ಲಿ ಪಾಲ್ಗೊಂಡು ರನ್ನರ್‌ ಅಪ್‌ ಆಗಿದ್ದಾರೆ. ಕಳೆದ ವರ್ಷ ಹೈದರಾಬಾದ್‌ನಲ್ಲಿ ನಡೆದ ಬ್ಯೂಟಿ ಪೆಜೆಂಟ್‌ನಲ್ಲಿಯೂ ಕಾಣಿಸಿಕೊಂಡು ಹೆಸರು ಮಾಡಿದ್ದಾರೆ.

‘ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ ಮಾಡುವ ಆಸೆಯೂ ಇದೆ. ಆದರೆ ಸಿನಿಮಾ ನನ್ನ ಮೊದಲ ಆದ್ಯತೆ. ಉತ್ತಮ ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದೇನೆ. ಸ್ಯಾಂಡಲ್‌ವುಡ್‌ನಲ್ಲಿ ರಾಧಿಕಾ ಪಂಡಿತ್‌ ನಟನೆ ಇಷ್ಟವಾಗುತ್ತದೆ. ಹೀರೊಗಳಲ್ಲಿ ದರ್ಶನ್‌ ಅವರೊಂದಿಗೆ ನಟಿಸಲು ತುಂಬಾ ಆಸೆಯಿದೆ. ನಟಿಯಾಗದಿದ್ದರೂ ತಂಗಿ, ಸ್ನೇಹಿತೆ ಪಾತ್ರವಾದರೂ ಅವರೊಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡರೆ ಸಾಕು’ ಎಂದರು.

ದೇಹದ ಫಿಟ್‌ನೆಸ್‌ಗಾಗಿ ವರ್ಕೌಟ್‌: 5.7 ಅಡಿ ಎತ್ತರವಿರುವ ಸುಶ್ಮಿತಾ ಅವರು, ದೇಹದ ಫಿಟ್‌ನೆಸ್‌ ಕಾಯ್ದುಕೊಳ್ಳಲು ಜಿಮ್‌ನಲ್ಲಿ ದಿನಕ್ಕೆ ಎರಡೂವರೆ ಗಂಟೆ ಕಸರತ್ತು ಮಾಡುತ್ತಾರೆ. ಬೆಳಿಗ್ಗೆ ಹಾಗೂ ರಾತ್ರಿ ಚಪಾತಿ, ಪಲ್ಯ ತಿನ್ನುತ್ತಾರೆ. ಮಧ್ಯಾಹ್ನ ಮಾತ್ರ ರಾಗಿ ಮುದ್ದೆ ತರಕಾರಿ ಸಾರು ಬೇಕಂತೆ. ಜ್ಯೂಸ್ ಹಾಗೂ ಹಣ್ಣುಗಳನ್ನು ತಿನ್ನುವ ಮೂಲಕ ಸರಳ ಡಯೆಟ್‌ ಪಾಲಿಸುತ್ತಾರೆ.

ಸದ್ಯ ಮದುವೆ ಬೇಡ: ‘ಇನ್ನೂ ಐದಾರು ವರ್ಷ ಮದುವೆ ಮಾಡಿಕೊಳ್ಳುವುದಿಲ್ಲ. ಚಂದನವನದಲ್ಲಿ ಹೆಸರಾಂತ ನಾಯಕಿಯಾಗುವ ಕನಸು ಕಾಣುತ್ತಿದ್ದೇನೆ. ಅದು ನನಸಾಗುವವರೆಗೂ ಪ್ರಯತ್ನ ಬಿಡುವುದಿಲ್ಲ, ಬೆಳ್ಳಿಪರದೆ ಮೇಲೆ ಮಿಂಚುತ್ತೇನೆ’ ಎಂದು ಮುಗುಳ್ನಗುತ್ತಾರೆ ಸುಶ್ಮಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.