ADVERTISEMENT

Sandalwood: ‘ಶ್ರೀಮತಿ ಸಿಂಧೂರ’ದಲ್ಲಿ ವಿಜಯ್‌ ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 23:30 IST
Last Updated 2 ಅಕ್ಟೋಬರ್ 2025, 23:30 IST
<div class="paragraphs"><p>ಪ್ರಿಯಾ ಹಾಗೂ ವಿಜಯ್‌ ರಾಘವೇಂದ್ರ</p></div>

ಪ್ರಿಯಾ ಹಾಗೂ ವಿಜಯ್‌ ರಾಘವೇಂದ್ರ

   

ವಿಜಯ್‌ ರಾಘವೇಂದ್ರ ನಾಯಕನಾಗಿ ನಟಿಸುತ್ತಿರುವ ‘ಶ್ರೀಮತಿ ಸಿಂಧೂರ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರಕ್ಕೆ ಅನಂತರಾಜ್‌.ಆರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

‘ಒಂದು ಉತ್ತಮ ಕುಟುಂಬದಿಂದ ಬಂದ ವ್ಯಕ್ತಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ. ಪಾತ್ರ ಚೆನ್ನಾಗಿದೆ. ಹೀಗಾಗಿ ಚಿತ್ರ ಒಪ್ಪಿಕೊಂಡೆ. ನನಗೆ ಇಂಥದ್ದೇ ಪಾತ್ರ ಮಾಡಬೇಕೆಂದಿಲ್ಲ. ಉತ್ತಮ ಕಥೆ, ಪಾತ್ರ ಹೊಂದಿರುವ ಚಿತ್ರಗಳನ್ನು ಒಪ್ಪಿಕೊಳ್ಳುತ್ತೇನೆ. ಇತ್ತೀಚೆಗೆ ಕೌಟುಂಬಿಕ ಕಥೆಯ ಚಿತ್ರಗಳು ಕಡಿಮೆಯಾಗಿವೆ. ಆದರೆ ಈ ಚಿತ್ರ ಆ ಕೊರತೆ ನೀಗಿಸುತ್ತದೆ. ಇಲ್ಲಿ ಎಲ್ಲರೂ ಅನುಭವಸ್ಥರು. ಈ ತಂಡದ ಹಲವರ ಜತೆ ಕೆಲಸ ಮಾಡಿದ್ದೇನೆ. ನಿರ್ದೇಶಕರ ಜತೆ ‘ಮಸ್ತ್‌ ಮಜ ಮಾಡಿ’ ಚಿತ್ರದಲ್ಲಿ ನಟಿಸಿದ್ದೆ. ಚಿತ್ರರಂಗದ ಸ್ಥಿತಿ ಗೊತ್ತಿದ್ದರೂ ಉತ್ತಮ ಚಿತ್ರಕ್ಕೆ ಬಂಡವಾಳ ಹೂಡುವ ಧೈರ್ಯ ಮಾಡಿರುವ ನಿರ್ಮಾಪಕರಿಗೆ ಧನ್ಯವಾದಗಳು’ ಎಂದರು ವಿಜಯ್‌ ರಾಘವೇಂದ್ರ.

ADVERTISEMENT

ಡಿ.ಎನ್.ನಾಗೀರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಪ್ರಿಯಾ ಚಿತ್ರದ ನಾಯಕಿ. ‘ನಾನು ಈ ಹಿಂದೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ನಿರ್ಮಾಪಕರು ಹೇಳಿದ ಒಂದೆಳೆಯನ್ನು ವಿಸ್ತರಿಸಿ ಈ ಕಥೆ ಮಾಡಿದ್ದೇವೆ. ಚಿತ್ರದಲ್ಲಿ ಆಂಜನೇಯನ ಕಥೆಯೂ ಬರುತ್ತದೆ. ಆಪರೇಷನ್‌ ಸಿಂಧೂರಕ್ಕೂ ಈ ಕಥೆಗೂ ಸಂಬಂಧವಿಲ್ಲ. ಶೀರ್ಷಿಕೆಯಲ್ಲಿ ಒಂದು ಧನಾತ್ಮಕ ಅಂಶವಿದೆ ಎಂದು ಈ ಶೀರ್ಷಿಕೆ ಆಯ್ದುಕೊಂಡಿದ್ದೇವೆ. ಮೂಡಿಗೆರೆ, ಸಕಲೇಶಪುರ, ಚಿಕ್ಕಮಗಳೂರು ಮುಂತಾದೆಡೆ ಚಿತ್ರೀಕರಿಸುವ ಯೋಜನೆಯಿದೆ. ಅ.23ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ’ ಎಂದು ನಿರ್ದೇಶಕರು ಮಾಹಿತಿ ನೀಡಿದರು.

‘ವಿಜಯ್‌ ರಾಘವೇಂದ್ರ ನಟನೆಯ ‘ಮಾಲ್ಗುಡಿ ಡೇಸ್‌ ಚಿತ್ರದ ಆಡಿಷನ್‌ಗೆ ಹೋಗಿದ್ದೆ. ಆದರೆ ಆಯ್ಕೆ ಆಗಿರಲಿಲ್ಲ. ಅವರ ಜತೆ ನಟಿಸಬೇಕೆಂಬುದು ಹಲವು ವರ್ಷಗಳ ಕನಸು. ಈ ಚಿತ್ರದ ಮೂಲಕ ನನಸಾಗುತ್ತಿದೆ. ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಎಲ್ಲರು ಅನುಭವಸ್ಥರೇ ಇರುವ ತಂಡದಲ್ಲಿ ನಾನೇ ಚಿಕ್ಕವಳು. ವಿಜಯ್‌ ರಾಘವೇಂದ್ರ ಅವರು ಚಿತ್ರದ ನಾಯಕ ಎಂದಾಕ್ಷಣ ಕಥೆಯನ್ನೂ ಕೇಳಲಿಲ್ಲ’ ಎಂದರು ಪ್ರಿಯಾ.

ಮಾರುತಿ, ಸುಷ್ಮಾ, ಮಾನಸಿ ಸುಧೀರ್‌, ಗಣೇಶ್‌ರಾವ್‌ ಕೇಸರ್‌ಕರ್‌ ಮುಂತಾದವರು ಚಿತ್ರದಲ್ಲಿದ್ದಾರೆ. ರಾಜೇಶ್‌ ರಾಮನಾಥನ್‌ ಸಂಗೀತ, ಪಿ.ಕೆ.ಎಚ್‌ ದಾಸ್‌ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.