ADVERTISEMENT

ಬೆಳ್ಳಿತೆರೆಯಲ್ಲಿಂದು ಸಿನಿಮಾ ಸುಗ್ಗಿ! ಹಲವು ಚಿತ್ರಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 23:30 IST
Last Updated 9 ಫೆಬ್ರುವರಿ 2023, 23:30 IST
ಭಾವನಾ ರಾವ್‌
ಭಾವನಾ ರಾವ್‌   

ಸ್ಯಾಂಡಲ್‌ವುಡ್‌ನ ಬೆಳ್ಳಿಪರದೆಗಳಲ್ಲಿ ಈ ವಾರ ಸಿನಿಮಾ ಸುಗ್ಗಿ. ಹತ್ತಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಇಂದು(ಫೆ.10) ತೆರೆಕಾಣುತ್ತಿದ್ದು, ಈ ಪೈಕಿ ಬಹುತೇಕ ಸಿನಿಮಾಗಳು ಹೊಸಬರದ್ದಾಗಿವೆ.

‘ಪ್ರೇಮಿಗಳ ದಿನ’ದ ಹಿನ್ನೆಲೆಯಲ್ಲಿ ‘ದೂದ್‌ಪೇಢ’ ದಿಗಂತ್‌ ಮತ್ತೆ ತೆರೆ ಮೇಲೆ ಬರಲಿದ್ದಾರೆ. ತಮ್ಮ ಮೊದಲನೇ ಸಿನಿಮಾ ‘ಲೈಫು ಇಷ್ಟೇನೆ’ ರಿರಿಲೀಸ್‌ ಮಾಡುವ ಮೂಲಕ ನಿರ್ದೇಶಕ ಪವನ್‌ ಕುಮಾರ್‌ ಪ್ರೇಮಿಗಳಿಗೆ ಉಡುಗೊರೆ ನೀಡುತ್ತಿದ್ದಾರೆ! ಬೆಂಗಳೂರಿನಲ್ಲೇ ಮಲ್ಟಿಪ್ಲೆಕ್ಸ್‌ನ 11 ಪರದೆಗಳಲ್ಲಿ ಈ ಸಿನಿಮಾ ಫೆ.10ಕ್ಕೆ ರಿರಿಲೀಸ್‌ ಆಗುತ್ತಿದೆ. ಜೊತೆಗೆ ಮೈಸೂರು, ಹುಬ್ಬಳ್ಳಿ, ಮಂಗಳೂರು ಹಾಗೂ ಕುಂದಾಪುರದ ಮಲ್ಟಿಪ್ಲೆಕ್ಸ್‌ನಲ್ಲೂ ಸಿನಿಮಾ ಬಿಡುಗಡೆಯಾಗುತ್ತಿದೆ.

‘ಹೊಂದಿಸಿ ಬರೆಯಿರಿ’: ರಾಮೇನಹಳ್ಳಿ ಜಗನ್ನಾಥ್‌ ಅವರ ನಿರ್ದೇಶನದ ಚೊಚ್ಚಲ ಚಿತ್ರ ‘ಹೊಂದಿಸಿ ಬರೆಯಿರಿ’ ತೆರೆಕಂಡಿದೆ. ಬಹುತಾರಾಗಣದ ಈ ಚಿತ್ರವು ಐದು ಜನ ಸ್ನೇಹಿತರ ಬದುಕಿನ ಕಥೆ ಹಾಗೂ ಭಾವನಾತ್ಮಕ ಪಯಣವನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಒಳಗೊಂಡ ಕಲಾವಿದರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಶಾಂತಿ ಸಾಗರ್ ಹೆಚ್. ಜಿ. ಛಾಯಾಗ್ರಹಣ ಚಿತ್ರಕ್ಕಿದೆ. ಮಾಸ್ತಿ, ಪ್ರಶಾಂತ್ ರಾಜಪ್ಪ ಹಾಗೂ ರಾಮೇನಹಳ್ಳಿ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ADVERTISEMENT

‘ಲಾಂಗ್‌ಡ್ರೈವ್‌’: ಗುಡ್‌ವೀಲ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಮಂಜುನಾಥ್‌ ಗೌಡ ಬಿ.ಆರ್. ನಿರ್ಮಿಸಿರುವ ರೊಮ್ಯಾಂಟಿಕ್ ಥ್ರಿಲ್ಲರ್ ಜಾನರ್‌ನ ಚಿತ್ರ ‘ಲಾಂಗ್‌ಡ್ರೈವ್’. ಯುವಜನತೆಯಲ್ಲಿ ಹೆಚ್ಚಾಗಿರುವ ಲಾಂಗ್‌ಡ್ರೈವ್‌ ಹೋಗುವ ಹವ್ಯಾಸವನ್ನೇ ಇಟ್ಟುಕೊಂಡು ಕಥೆ ಹೆಣೆದಿರುವ ಶ್ರೀರಾಜ್, ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಕೂಡಾ ಹೇಳಿದ್ದಾರೆ. ಅರ್ಜುನ್ ಯೋಗಿ, ಸುಪ್ರೀತಾ ಸತ್ಯನಾರಾಯಣ್, ತೇಜಸ್ವಿನಿ ಪ್ರಕಾಶ್ ಹಾಗೂ ಶಬರಿ ಮಂಜು ಈ ನಾಲ್ಕು ಪ್ರಮುಖ ಪಾತ್ರಗಳ ಸುತ್ತ ಚಿತ್ರದ ಕಥೆಯಿದೆ.

‘ಡಿಸೆಂಬರ್ 24’: 2015 ರಿಂದ 2019ರ ನಡುವೆ ಹುಲಿಯೂರು ದುರ್ಗ ಸುತ್ತಮುತ್ತ ಹಲವಾರು ಮಕ್ಕಳು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ ನೈಜ ಘಟನೆಯನ್ನು ಇಟ್ಟುಕೊಂಡು ತಯಾರಾದ ಹಾರರ್, ಥ್ರಿಲ್ಲರ್ ಚಿತ್ರ ‘ಡಿಸೆಂಬರ್ 24’. ಚಿತ್ರದಲ್ಲಿ ‘ಭಾಗ್ಯಲಕ್ಷ್ಮಿ’ ಖ್ಯಾತಿಯ ಭೂಮಿಕಾ ರಮೇಶ್, ಅಪ್ಪು ಬಡಿಗೇರ್ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ರಘು ಎಸ್. ನಿರ್ಮಾಣದ ಈ ಚಿತ್ರಕ್ಕೆ ವಿಶಾಲ್ ಆಲಾಪ್ ಸಂಗೀತ ನಿರ್ದೇಶನ ಮಾಡಿದ್ದಾರೆ.

‘18 ಟು 25’: ‘ಬಳ್ಳಾರಿ ದರ್ಬಾರ್’ ಖ್ಯಾತಿಯ ಸ್ಮೈಲ್ ಶ್ರೀನು ನಿರ್ದೇಶನದಲ್ಲಿ ಮೂಡಿಬಂದಿರುವ ಮತ್ತೊಂದು ಚಿತ್ರ ‘18 ಟು 25’. ‘ಓ ಮೈ ಲವ್’ ಬಳಿಕ ನಿರ್ದೇಶಕ ಸ್ಮೈಲ್ ಶ್ರೀನು ಕೈಗೆತ್ತಿಕೊಂಡಿರುವ ಈ ಪ್ರಾಜೆಕ್ಟ್‌ಗೆ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಅಭಿ ರಾಮ್ ಚಿತ್ರದ ನಾಯಕ. ಋಷಿ ತೇಜ, ಅಖಿಲ, ವಿದ್ಯಾಶ್ರೀ, ರಾಕ್‍ಲೈನ್ ಸುಧಾಕರ್, ಫಾರೂಖ್ ಖಾನ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಉಳಿದಂತೆ ಕ್ರಾಂತಿ ಚೈತನ್ಯ ನಿರ್ದೇಶನದ ಶಫಿ, ಅನಿತಾ ಭಟ್‌ ನಟನೆಯ ‘ಬೆಂಗಳೂರು 69’, ಕಮಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕವಿತಾ ಅರುಣ್ ಕುಮಾರ್ ನಿರ್ಮಿಸಿರುವ, ರಾಜೀವ್‌ ರಾಥೋಡ್‌, ದುನಿಯಾ ರಶ್ಮಿ ನಟನೆಯ ಚಿತ್ರ ‘ರಂಗಿನ ರಾಟೆ’, ವಿಜಯ್‌ ಜಗದಾಳ್‌ ನಿರ್ದೇಶಿಸಿ ನಟಿಸಿರುವ ‘ರೂಪಾಯಿ’, ಎನ್‌. ಮಂಜುನಾಥ್‌ ನಿರ್ದೇಶಿಸಿ, ನಟಿಸಿರುವ ‘ಒಂದಾನೊಂದು ಕಾಲದಲ್ಲಿ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳು ತೆರೆಕಾಣುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.