ಶ್ರೀನಗರ ಕಿಟ್ಟಿ, ರಚಿತಾ ರಾಮ್
ಶ್ರೀನಗರ ಕಿಟ್ಟಿ, ರಚಿತಾ ರಾಮ್ ಜೋಡಿಯಾಗಿ ನಟಿಸಿರುವ ‘ಸಂಜು ವೆಡ್ಸ್ ಗೀತಾ–2’ ಸಿನಿಮಾ ಜ.10ರಂದು ತೆರೆ ಕಾಣಲಿದೆ. ಈ ಸಿನಿಮಾ ಕುರಿತು ನಾಯಕ ಶ್ರೀನಗರ ಕಿಟ್ಟಿ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ...
ಚಿತ್ರದಲ್ಲಿ ನಿಮ್ಮ ಪಾತ್ರವೇನು?
ಇದು ರೇಷ್ಮೆ ಬೆಳೆಗಾರನ ಕಥೆ. ಹೀಗಾಗಿ ರೇಷ್ಮೆ ಬೆಳೆಗಾರನಾಗಿ ಕಾಣಿಸಿಕೊಂಡಿರುವೆ. ಶಿಡ್ಲಘಟ್ಟ ರೇಷ್ಮೆ ಬೆಳೆಗೆ ಜನಪ್ರಿಯ. ಇಲ್ಲಿ ರೇಷ್ಮೆ ದೇಶದ ಬೇರೆ ಕಡೆಗಳಿಗೆ ಹೋಗುತ್ತದೆ. ನಮ್ಮ ರೈತರಿಗೆ ಸರಿಯಾದ ಬೆಲೆ ಸಿಗುವುದಿಲ್ಲ. ವರ್ಷಕ್ಕೆ ನೂರಾರು ಜನ ಇದರಿಂದಾಗಿ ಆತ್ಮಹತ್ಯೆ ಮಾಡುಕೊಳ್ಳುತ್ತಿದ್ದಾರೆ. ಹೀಗಾಗಿ ನನ್ನದೇ ಕಂಪನಿ ಮಾಡಿ ಊರಿನ ರೈತರಿಗೆ ನ್ಯಾಯ ಒದಗಿಸುವ ಪಾತ್ರ. ನಮ್ಮ ರೇಷ್ಮೆಯನ್ನು ಬ್ರ್ಯಾಂಡ್ ಮಾಡುವ ಕಥೆ. ಅಲ್ಲಿನ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಕ್ರಮದತ್ತ ಬೆಳಕು ಚೆಲ್ಲಿದ್ದೇವೆ. ಜೊತೆಗೆ ‘ಸಂಜು ವೆಡ್ಸ್ ಗೀತಾ’ದಂತೆ ಇಲ್ಲಿಯೂ ಪ್ರೇಮಕಥೆ ಬರುತ್ತದೆ. ಉತ್ಕಟವಾದ ಪ್ರೇಮಕಥೆ. ಪ್ರತಿ ಹುಡುಗಿಯೂ ತನಗೆ ಇಂಥ ಹುಡುಗ ಸಿಗಬೇಕು ಎಂದು ಬಯಸುವಂತಹ ಪಾತ್ರ. ಪ್ರೀತಿಯ ಬಲೆಗೆ ಬೀಳುವ ಹುಡುಗನಾಗಿಯೂ ಕಾಣಿಸಿಕೊಳ್ಳುತ್ತೇನೆ. ಬೆಳೆಗಾರನ ಜೊತೆಗೆ ನಾಯಕನ ವೈಯಕ್ತಿಕ ಬದುಕು, ಪ್ರೀತಿ ಎಲ್ಲವೂ ಈ ಪಾತ್ರದಲ್ಲಿ ಕಾಣಿಸುತ್ತದೆ.
‘ಸಂಜು ವೆಡ್ಸ್ ಗೀತಾ’ದ ಕಥೆಯೇ ಮುಂದುವರಿಯುತ್ತಾ...
ಇಲ್ಲ ಆ ಕಥೆ ಅಥವಾ ಪಾತ್ರದ ಮುಂದುವರಿಕೆ ಇದಲ್ಲ. ಅಲ್ಲಿ ನಾಯಕ–ನಾಯಕಿ ಇಬ್ಬರೂ ಸತ್ತಿರುತ್ತಾರೆ. ಹೀಗಾಗಿ ಅಲ್ಲಿನ ಕಥೆ ಬರುವುದಿಲ್ಲ. ಆ ಶೀರ್ಷಿಕೆ ಬ್ರ್ಯಾಂಡ್ ಆಗಿತ್ತು. ಅದನ್ನು ಬಳಸಿಕೊಂಡಿದ್ದೇವೆ. ಅದೇ ರೀತಿಯ ಕಥೆ. ಪಾತ್ರ ಪೋಷಣೆ ಕೂಡ ಮೊದಲ ಭಾಗದಂತೆ ಇದೆ. ಹಾಡುಗಳೇ ಚಿತ್ರದ ಜೀವಾಳ. ‘ಸಂಜು ವೆಡ್ಸ್ ಗೀತಾ’ದಲ್ಲಿಯೂ ಹಾಡುಗಳು ಸೊಗಸಾಗಿದ್ದವು. ಎಲ್ಲ ಹಾಡುಗಳು ಹಿಟ್ ಆಗಿದ್ದವು. ಅವುಗಳನ್ನು ಕವಿರಾಜ್ ಬರೆದಿದ್ದರು. ಇದರಲ್ಲಿಯೂ ಅವರೇ ಎಲ್ಲ ಹಾಡುಗಳನ್ನು ಬರೆದಿದ್ದಾರೆ. ಎದೆಗೆ ನಾಟುವ ರೀತಿಯಲ್ಲಿ ಬರೆದಿದ್ದಾರೆ. ‘ಸಂಜು ವೆಡ್ಸ್ ಗೀತಾ’ದ ಹಾಡಿನ ಸಾಲುಗಳಿಗೆ ನಾನು ವೈಯಕ್ತಿಯವಾಗಿ ಅಭಿಮಾನಿಯಾಗಿದ್ದೆ.
ಮೊದಲ ಭಾಗಕ್ಕಿಂತ ಎಷ್ಟು ಭಿನ್ನವಾಗಿರುತ್ತದೆ?
‘ಸಂಜು ವೆಡ್ಸ್ ಗೀತಾ’ ನನ್ನ ಕೆರಿಯರ್‌ಗೆ ತಿರುವು ಕೊಟ್ಟ ಸಿನಿಮಾ. ಈ ಸಿನಿಮಾದಲ್ಲಿಯೂ ಅದೇ ರೀತಿಯ ಮ್ಯಾಜಿಕ್ ನಿರೀಕ್ಷೆ ಮಾಡುತ್ತಿರುವೆ. ಗೆಳೆಯ ನಾಗಶೇಖರ್ ನನಗಾಗಿ ಈ ಚಿತ್ರ ಮಾಡಿಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಹಳೆಯ ತಂಡ ಬಹುತೇಕ ಪುನರಾವರ್ತನೆಗೊಂಡಿದೆ. ತುಂಬ ವಿಸ್ತಾರವಾದ ಕಥೆ. ಅದನ್ನು ಎಲ್ಲರಿಗೂ ಅರ್ಥವಾಗುವಂತೆ ನಿರ್ದೇಶಕರು ಸ್ಕ್ರೀನ್‌ಪ್ಲೆ ಮಾಡಿದ್ದಾರೆ. ಸಿನಿಮಾದಲ್ಲಿ ಅದ್ದೂರಿತನವಿದೆ. ಒಂದು ನವಿರಾದ ಪ್ರೇಮಕಥೆಯ ಜೊತೆಗೆ ಮಾಸ್ ಅಂಶಗಳು ಇವೆ. ತಾಂತ್ರಿಕವಾಗಿ ತುಂಬ ಶ್ರೀಮಂತವಾಗಿದೆ. ಇವತ್ತಿಗೆ ಬೇಕಾದ ಮನರಂಜನೆ ಇದೆ. ಶ್ರಮ ಹಾಕದೆ ಯಾವ ಕೆಲಸವೂ ಆಗಲ್ಲ ಎಂದು ನಂಬಿಕೊಂಡು ಬಂದವನು. ಈ ಚಿತ್ರದಲ್ಲಿ ಎಲ್ಲರ ಶ್ರಮ ಹೆಚ್ಚಿದೆ. ಹೀಗಾಗಿ ಚಿತ್ರವೂ ಉತ್ತಮವಾಗಿ ಮೂಡಿಬಂದಿದೆ.
ಗೌಳಿ’ಯ ಮಾಸ್ ಅವತಾರದಿಂದ ಮತ್ತೆ ಪ್ರೇಮಕಥೆಯತ್ತ ಹೊರಳಿದ್ದೇಕೆ?
ಪ್ರತಿ ಸಿನಿಮಾದಲ್ಲಿಯೂ ಭಿನ್ನವಾಗಿದ್ದನ್ನು ಪ್ರಯತ್ನಿಸುತ್ತೇನೆ. ಎಲ್ಲ ಸಿನಿಮಾಗಳನ್ನು ಪ್ರೀತಿ ಮತ್ತು ಶ್ರಮದಿಂದ ಮಾಡಿರುತ್ತೇವೆ. ಅದೇ ರೀತಿ ‘ಗೌಳಿ’ಯಲ್ಲಿ ಭಿನ್ನವಾದ ಕಥೆ ಇಟ್ಟುಕೊಂಡು ಪ್ರಯತ್ನ ಮಾಡಿದ್ದೆವು. ಸಿನಿಮಾಗೆ ಪ್ರಶಂಸೆ ಮಾತು ಕೇಳಿಬಂತು. ಆದರೆ ಚಿತ್ರಮಂದಿರದಲ್ಲಿ ಇನ್ನಷ್ಟು ಪ್ರೋತ್ಸಾಹ ಸಿಗಬೇಕಿತ್ತು. ಹಾಗಂತ ಮಾಸ್ ನಾಯಕನಾಗಿಯೇ ಮುಂದುವರಿಯಬೇಕೆಂದು ಮಾಡಿದ್ದಲ್ಲ. ಈಗ ಮತ್ತೆ ಪ್ರೇಮಕಥೆ ಸಿಕ್ಕಿದೆ.
ಈತನಕದ ಸಿನಿಪಯಣ ಹೇಗಿತ್ತು?
ಹೆಚ್ಚು ಏರಿಳಿತಗಳಿಲ್ಲ. ಪಯಣ ಅದೇ ರೀತಿ ಮುದ್ದಾಗಿ ಹೋಗುತ್ತಿದೆ. ಉತ್ತಮ ಸಿನಿಮಾಗಳು ಸಿಗುತ್ತಿವೆ. ಒಳ್ಳೊಳ್ಳೆ ಪಾತ್ರಗಳನ್ನು ಮಾಡುತ್ತಿರುವೆ.
ನಿಮ್ಮ ಮುಂದಿನ ಸಿನಿಮಾಗಳು...
‘ಟೆರರ್’ ಸಿನಿಮಾದಲ್ಲಿ ಪಾತ್ರ ಮಾಡುತ್ತಿದ್ದೇನೆ. ‘ಮಹಾದೇವ’, ‘ಮುಧೋಳ್’ ಚಿತ್ರಗಳಲ್ಲಿ ಖಳನಟನಾಗಿ ಕಾಣಿಸಿಕೊಂಡಿರುವೆ. ‘ಸಂಜು’ ತಂಡದ ಜೊತೆಯೇ ಇನ್ನೊಂದು ಸಿನಿಮಾ ಮಾತುಕತೆ ನಡೆಯುತ್ತಿದೆ.
ಸಂಜು ವೆಡ್ಸ್ ಗೀತಾ ಮ್ಯೂಸಿಕಲ್ ಹಿಟ್ ಸಿನಿಮಾ. ಹೀಗಾಗಿ ಈ ಚಿತ್ರದ ಹಾಡುಗಳಿಗೂ ಸಾಕಷ್ಟು ತಲೆಕೆಡಿಸಿಕೊಂಡಿದ್ದೆ. ಶ್ರೀಧರ್ ವಿ.ಸಂಭ್ರಮ್ ತುಂಬಾ ಚೆನ್ನಾಗಿ ಹಾಡು ಮಾಡಿಕೊಟ್ಟಿದ್ದಾರೆ. ಐದು ಹಾಡುಗಳಿದ್ದು ಅವೇ ಚಿತ್ರಕ್ಕೆ ಆಹ್ವಾನ ಪತ್ರಿಕೆ. ಹೀಗಾಗಿ ಪ್ರತ್ಯೇಕವಾಗಿ ಟ್ರೇಲರ್ ಬಿಡುವುದಿಲ್ಲ. ಇದು ರೇಷ್ಮೆ ಬೆಳೆಗಾರರ ಕಥೆ. ಈ ರೀತಿ ಕಥೆ ಮಾಡು ಎಂದು ಐಡಿಯಾ ಕೊಟ್ಟವರು ನಟ ಸುದೀಪ್. ಅವರ ಕನಸಿನ ಕಥೆ ಇದು. ಅವರ ಸಾಕಷ್ಟು ಮಾರ್ಗದರ್ಶನ ಈ ಚಿತ್ರಕ್ಕಿದೆ. ನಮ್ಮ ಶಿಡ್ಲಘಟ್ಟ, ಬೆಂಗಳೂರು ಗ್ರಾಮೀಣ ಭಾಗದ ರೇಷ್ಮೆ ಬೇರೆ ಊರಿಗೆ ಹೋಗಿ ಕಾಂಜಿವರಂ, ಧರ್ಮಾವರಂ ಮೊದಲಾದ ಬ್ರ್ಯಾಂಡ್ ಆಗಿ ನಮ್ಮ ಮಾರುಕಟ್ಟೆಗೆ ವಾಪಾಸ್ ಬರುತ್ತದೆ. ನಾವೇ ಯಾಕೆ ಇದನ್ನು ಬ್ರ್ಯಾಂಡ್ ಮಾಡಬಾರದು, ನಮ್ಮ ರೈತರು ಉದ್ದಾರವಾಗಬಾರದೆಂಬ ಆಲೋಚನೆ ಹೊಂದಿರುವ ಕಥೆ. ಸಂದೇಶದ ಜೊತೆಗೆ ನವಿರಾದ ಪ್ರೇಮವಿದೆ. ಹೀಗಾಗಿ ವಿದೇಶಗಳಲ್ಲಿಯೂ ಚಿತ್ರೀಕರಣ ಮಾಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ನಾಗಶೇಖರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.