ADVERTISEMENT

‌ಚಿತ್ರಪಟ: ಶಿಶಿರ್‌ ಝಾ – ಮೌನದ ಹೆಣಿಗೆಯಲ್ಲಿ ಸತ್ಯದರ್ಶನದ ಹಂಬಲ

ನಿರ್ದೇಶಕ ಶಿಶಿರ್‌ ಝಾ ಅವರ ನಿರ್ದೇಶನದ ‘ಧರ್ತಿ ಲತಾರ್‌ ರೆ ಹೊರೊ’ ಚಿತ್ರ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಂಸೆ ಗಿಟ್ಟಿಸಿಕೊಂಡಿದೆ.

ಕೋಡಿಬೆಟ್ಟು ರಾಜಲಕ್ಷ್ಮಿ
Published 9 ಜುಲೈ 2023, 1:23 IST
Last Updated 9 ಜುಲೈ 2023, 1:23 IST
ಶಿಶಿರ್‌ ಝಾ ಚಿತ್ರ: ನಿಹಾಲ್‌ ಪ್ರಭು ದೇಸಾಯಿ
ಶಿಶಿರ್‌ ಝಾ ಚಿತ್ರ: ನಿಹಾಲ್‌ ಪ್ರಭು ದೇಸಾಯಿ   

ಮಂಗಳೂರಿನಲ್ಲಿ ಇತ್ತೀಚೆಗೆ ನಿಟ್ಟೆ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್ ನಡೆಯಿತು. ಅಲ್ಲಿ ಪ್ರದರ್ಶಿತವಾದ ’ಧರ್ತಿ ಲತಾರ್‌ ರೆ ಹೊರೊ’ (tortoise under the earth) ಎಂಬ ಸಂತಾಲಿ ಭಾಷೆಯ ಚಿತ್ರ ನಿರ್ದೇಶಕ ಶಿಶಿರ್‌ ಝಾ ತಮ್ಮ ಸಿನಿಪ್ರಯೋಗದ ಒಳಹೊರಗನ್ನು ತೆರೆದಿಟ್ಟಿದ್ದಾರೆ.

–––

'ಪ್ರತಿಯೊಂದು ಊರಿನಲ್ಲಿ ಅಥವಾ ಭೂಪ್ರದೇಶದಲ್ಲಿ ಮನುಷ್ಯನ ಇರುವಿಕೆ ಇರಲಿ, ಇಲ್ಲದಿರಲಿ ಆ ಪ್ರದೇಶವು ಸದಾ ಜೀವಂತಿಕೆಯಿಂದ ಕೂಡಿರುತ್ತದೆ. ಮರಗಳು ಚಿಗುರುತ್ತವೆ. ಕೀಟಗಳು ಹಾರುತ್ತವೆ. ನೀರು ಚಲಿಸುತ್ತ, ಹುಳುಹುಪ್ಪಟೆಗಳು ಜಿಗಿಯುತ್ತ ತೆವಳುತ್ತಾ... ಈ ಜೀವಂತಿಕೆಯು ತನ್ನದೇ ಆದೊಂದು ಗತಿ ಅಥವಾ ಗಡಿಯಾರವನ್ನು ಹೊಂದಿದೆ. ಹಾಗೆಂದು ಎಲ್ಲ ಜೀವಿಗಳಿಗೂ ಒಂದೇ ಗಡಿಯಾರವನ್ನು ಅನ್ವಯಿಸುವಷ್ಟು ಒರಟಾದ ಗತಿಯಲ್ಲ ಅದು. ಈ ಜೀವಲೋಕದ ಗತಿಶೀಲತೆಯನ್ನು ಗಡಿಯಾರದ ಹಂಗಿಲ್ಲದೆಯೇ ಚಿತ್ರೀಕರಿಸುವ ಉದ್ದೇಶದೊಂದಿಗೆ ನಾನು ಸಿನಿಮಾ ಮಾಡಿದ್ದೇನೆ’ ಎಂದು ಶಿಶಿರ್‌ ಝಾ ಮಾತಿನ ಮಧ್ಯೆ ಹೇಳಿದರು.

ADVERTISEMENT

’ಧರ್ತಿ ಲತಾರ್‌ ರೆ ಹೊರೊ’ (tortoise under the earth) ಎಂಬ ಸಂತಾಲಿ ಭಾಷೆಯ ಚಿತ್ರ ನಿರ್ದೇಶಕ ಶಿಶಿರ್‌ ಝಾ ತಮ್ಮ ವಿಳಂಬಗತಿಯ ಚಿತ್ರದ ಬಗ್ಗೆ ಅಷ್ಟೇ ನಿಧಾನವಾಗಿ ವಿವರಿಸಿದರು. ಮಂಗಳೂರಿನಲ್ಲಿ ನಡೆದ ‘ನಿಟ್ಟೆ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವೆಲ್‌’ನಲ್ಲಿ ಈ ಚಿತ್ರ ಪ್ರದರ್ಶನ ಆರಂಭವಾದಾಗ ಚಿತ್ರವೇಕೋ ಬಹಳ ನಿಧಾನಗತಿಯಲ್ಲಿದೆ ಎಂದು ಅನಿಸಲಾರಂಭಿಸಿತು. ಆ ಗತಿಯ ಬಗೆಗೆ ಅವರು ಹೇಳುತ್ತಾ ಹೋದರು: ‘ಜಾರ್ಖಂಡ್‌ನ ತುರಮ್‌ಧಿ ಎಂಬ ಆ ಊರಿನಲ್ಲಿ ವರ್ಷ ಕಾಲ ಜೀವನ ಮಾಡಿದ್ದೇನೆ. ರೈತ ದಂಪತಿಯ ಜೊತೆಗೇ ವಾಸಿಸುತ್ತಾ ಅವರ ಬದುಕನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದೇನೆಯೇ ಹೊರತು ಅವರಿಗೆ ನಟಿಸುವಂತೆ ಸೂಚನೆ ಕೊಟ್ಟಿಲ್ಲ. ಜಾರ್ಖಂಡ್‌ನ ದೈನಂದಿನ ಜೀವನವು ಬಹಳ ಜೀವಂತಿಕೆಯಿಂದ ಕೂಡಿದ್ದು, ಅದನ್ನು ಇದ್ದ ಹಾಗೆಯೇ ಗ್ರಹಿಸಬೇಕು ಎಂಬ ಉದ್ದೇಶದಿಂದ ‘ನೈಜ ಸಮಯ’ವನ್ನು ಅನ್ವಯಿಸಿ ಚಿತ್ರ ಮಾಡಿರುವೆ. ಜೀವನಕ್ಕೆ ತನ್ನದೇ ಆದ ಸಮಯಗತಿ ಇದೆಯಲ್ಲವೇ. ಸಮಯದ ಸಂವೇದನೆಯನ್ನು ಈ ಸಿನಿಮಾದಲ್ಲಿ ಸೆರೆ ಹಿಡಿಯಬೇಕಿತ್ತು. ಜೀವಲೋಕದ ಗತಿಯು ಜೆಸಿಬಿ ಓಡಿದಷ್ಟು ವೇಗವಾಗಿ ಇರುವುದಿಲ್ಲ. ದೃಶ್ಯಗಳನ್ನು ಎಡಿಟ್‌ ಮಾಡಿದಷ್ಟು ಕ್ಷಿಪ್ರವಾಗಿಯೂ ಸಾಗುವುದಿಲ್ಲ. ಪ್ರಕೃತಿಯ ಮಡಿಲಿನಲ್ಲಿಯೇ ಇರುವ ರೈತರ ಜೀವನ ಹೇಗೆ ನಡೆಯುತ್ತದೆ ಎನ್ನುವುದನ್ನು ಒಂದೆರಡು ದಿನಗಳ ಶೂಟಿಂಗ್‌ನಲ್ಲಿ ಸೆರೆ ಹಿಡಿಯಬಹುದು ಎಂದು ನನಗೆ ಅನಿಸಿದ್ದಿಲ್ಲ. ಅವರೊಂದಿಗೆ ದೀರ್ಘಕಾಲದ ಒಡನಾಟವಿದ್ದಾಗ ಮಾತ್ರ ಅವರ ಸುಖ ದುಃಖದ ಅಭಿವ್ಯಕ್ತಿ ಹೇಗಿರುತ್ತದೆ ಎಂದು ಅರಿಯಬಹುದು. ಅವರ ಬದುಕಿನ ಕ್ಷಣಗಳಿಗೆ ಮತ್ತಷ್ಟು ಭಾವತೀವ್ರತೆಯನ್ನು ಹೇರಿ‌, ಅಲ್ಲಿ ನಮ್ಮ ಮನರಂಜನೆಗೆ ಬೇಕಾದ ರಸವನ್ನು ಸೇರಿಸಿಲ್ಲ. ಹಾಗಾಗಿ ಚಿತ್ರವು ಬಹಳ ನಿಧಾನಗತಿಯಲ್ಲಿದೆ ಎಂದು ಆರಂಭಕ್ಕೆ ಅನಿಸಬಹುದು. ಆದರೆ  ಸಾಗುತ್ತಿದ್ದಂತೆಯೇ ನೋಡುಗರು ಸಹಜವಾಗಿಯೇ ಭಾವುಕರಾಗಿ ಬಿಡುತ್ತಾರೆ. ಇದು ಡಾಕ್ಯುಮೆಂಟರಿಯಂತಹುದೇ ಚಿತ್ರ. ನೋಡುವಿಕೆಗೆ ಅನುಕೂಲವಾಗುವಂತೆ ವಿಷಯವನ್ನು ಹೇಳುತ್ತಾ ಸಾಗಿದ್ದೇವೆ.’

ಮಗಳನ್ನು ಕಳೆದುಕೊಂಡ ನೋವಿನಲ್ಲಿದ್ದ ಆ ರೈತ ದಂಪತಿಯು, ಯುರೇನಿಯಂ ಗಣಿಗಾರಿಕೆಗಾಗಿ ತಮ್ಮ ಜಮೀನನ್ನೂ ಕಳೆದುಕೊಳ್ಳಲಿಕ್ಕಿದ್ದರು. ಹಾಗೆಂದು ಗಣಿಗಾರಿಕೆಯ ವಿರುದ್ಧದ ಹೋರಾಟಗಳನ್ನು ಸೆರೆಹಿಡಿಯುವ ಗೋಜಿಗೆ ಹೋಗದ ಶಿಶಿರ್‌, ದುಃಖಿತಳಾದ ಅಮ್ಮ ಗುನುಗುವ ಹಾಡುಗಳನ್ನು ಬಳಸಿಕೊಂಡಿದ್ದಾರೆ. ಊರಿನಿಂದ ಒಕ್ಕಲೆಬ್ಬಿಸುತ್ತಿದ್ದಾರೆ ಎಂಬ ಸುದ್ದಿಕೇಳಿದ ಕೂಡಲೇ ದಂಪತಿ ಕಂಗಾಲಾಗುತ್ತಾರೆ. ಮಡದಿಯ ಮನಸ್ಸಿನಲ್ಲೇನಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುವ ಅವನು, ಆಕೆ ಪುನರ್ವಸತಿ ಕೇಂದ್ರಕ್ಕೆ ಹೋಗಲು ಮನಸ್ಸು ಮಾಡಿರುವುದನ್ನು ಅರಿಯುತ್ತಾನೆ. ಸಾವಿರಾರು ವರ್ಷಗಳಿಂದ ಅದೇ ನೆಲದಲ್ಲಿ ತಲೆಯೆತ್ತಿ ನಿಂತ ಮರಗಳೊಡನೆ ಅವನ ಮಾತುಕತೆ. ಬಾಲ್ಯದ ನೆನಪನ್ನು ಬಿಟ್ಟು ಬರಲಾರದ ಅವನು ಅವಳಿಂದ ಕಣ್ಮರೆಯಾಗುತ್ತಾನೆ. ಅವಳೋ ತಂತುಕಡಿದಂತೆ ಕುಸಿದು, ಗಂಡನನ್ನು ಹುಡುಕುತ್ತಾಳೆ. ಸಾವಿರ ವರ್ಷಗಳಷ್ಟು ದೀರ್ಘಕಾಲ ಬಾಳಿದ ಮರದ ಬಳಿಗೆ ಬಂದು ಕೈಮುಗಿದು ಕೇಳುತ್ತಾಳೆ: ‘ಎಲ್ಲವನ್ನೂ ಬಲ್ಲ, ಎಲ್ಲ ಸುದ್ದಿಯನ್ನು ಹೊಟ್ಟೆಯೊಳಗೆ ಹೊತ್ತುಕೊಂಡ ಓ ಮರವೇ, ನನ್ನ ಪತಿಯಿಲ್ಲದೆ ನಾನು ಬಾಳಲಾರೆ.. ಇಷ್ಟು ಎತ್ತರಕ್ಕೆ ಬೆಳೆದ ನೀನು ಅವನು ಹೋದ ದಾರಿಯನ್ನು ನೋಡಿರುತ್ತಿ. ಆ ದಾರಿಯನ್ನು ತೋರುವೆಯಾ..’ ವಿಲಂಬಿತ ರಾಗದಲ್ಲಿ ಆಕೆ ಹಾಡುವ ಈ ಪ್ರಾರ್ಥನೆಯು ನೋಡುಗರ ಕಣ್ಣಲ್ಲಿ ನೀರು ಜಿನುಗುವಂತೆ ಮಾಡದೇ ಇರದು.

ಕೊಯ್ಲಿನ ನಂತರ ಪ್ರಕೃತಿಗೆ ಧನ್ಯವಾದ ಹೇಳುವ ಸೊಹ್ರಾಯಿ ಪೂಜೆಯೊಂದಿಗೆ ಆರಂಭವಾಗುವ ಚಿತ್ರವು, ಬಿತ್ತನೆಯ ಆಚರಣೆ ‘ಬಹಾ’ದೊಂದಿಗೆ ಮುಕ್ತಾಯವಾಗುತ್ತದೆ. ಆದಿವಾಸಿ ಜನರ ನಂಬಿಕೆಯ ಪ್ರಕಾರ,ಈ ಭೂಮಿಯು ನೀರಿನಲ್ಲಿ ಮುಳುಗಿತ್ತು. ಆದರೆ ಎರೆಹುಳುಗಳು ಮಣ್ಣನ್ನು ಕೊರೆದು ಕೊರೆದು ಆಮೆಯ ಬೆನ್ನ ಮೇಲೆ ರಾಶಿ ಹಾಕಿದವು. ಆದ್ದರಿಂದ ಈ ಭೂಭಾಗವನ್ನು ಆಮೆಯು ಹೊತ್ತುಕೊಂಡಿದೆ. ಗಣಿಗಾರಿಕೆಗಾಗಿ ಭೂಮಿಯನ್ನು ಅಗೆಯುತ್ತಾರೆ ಎಂಬ ಸುದ್ದಿ ಕೇಳಿದ ಪತ್ನಿ, ಪತಿ ಜಗರ್‌ನಾಥ್‌ ಬಳಿ ಕೇಳುತ್ತಾಳೆ: ‘ಇಷ್ಟೆಲ್ಲ ಅಗೆದು ಹಾಕಿದ್ದಾರಲ್ಲಾ.. ಅವರಿಗೆ ಆಮೆಯ ಬೆನ್ನು ಕಂಡಿತೇ ?’

ಅಹ್ಮದಾಬಾದ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡಿಸೈನ್‌ನಲ್ಲಿ ಓದಿದವರು ಶಿಶಿರ್‌. ಹನ್ಸ್‌ದಾ ಸೌವೇಂದ್ರ ಶೇಖರ್‌ ಬರೆದ ‘ಆದಿವಾಸಿಸ್‌ ವಿಲ್‌ನಾಟ್‌ ಡಾನ್ಸ್‌’ ಎಂಬ ಪುಸ್ತಕ ಓದಿದಾಗ, ಸಾಮಾಜಿಕ ಕಾರ್ಯಕರ್ತ ಜೀತ್ರಾಯಿ ಹನ್ಸದಾ ಅವರೊಡನೆ ಪ್ರವಾಸಗಳನ್ನು ಮಾಡಿದಾಗ ಯುರೇನಿಯಂ ಗಣಿಗಾರಿಕೆಯಿಂದ ಆದಿವಾಸಿ ಸಂತಾಲಿ ಸಮುದಾಯದ ಮೇಲೆ ಆಗುತ್ತಿರುವ ಕೆಟ್ಟ ಪರಿಣಾಮಗಳ ವಿರಾಟ್‌ ರೂಪದ ಅರಿವಾಯಿತು. ಕಾರ್ಪೊರೇಟ್‌ ಕೆಲಸ ಬಿಟ್ಟು ಸಿನಿಮಾ ಮಾಡಲು ಹೊರಟಾಗ ಶಿಶಿರ್‌ಗಿನ್ನೂ ಮೂವತ್ತು ಆಗಿರಲಿಲ್ಲ.  

ಸಾಮಾನ್ಯವಾಗಿ ಹೋರಾಟಕ್ಕೆ ಸಂಬಂಧಿಸಿದ ಸಿನಿಮಾಗಳಲ್ಲಿ ಪ್ರತಿಭಟನೆ, ಶೋಷಣೆಯ ಅನೇಕ ದೃಶ್ಯಗಳಿರುತ್ತವೆ. ‘ಅವೆಲ್ಲವೂ ಮಾಹಿತಿಗಳು. ಅದು ಇಂದು ನಮಗೆ ಎಲ್ಲಿ ಬೇಕಾದರೂ ಸಿಗುತ್ತದೆ. ಮಾಹಿತಿಯನ್ನು ವೈಭವೀಕರಿಸಿ ಹೇಳಿದಾಗ, ಆ ರೈತರ ಬಗ್ಗೆ ಭಾವನೆಯು ಉಕ್ಕಿ ಹರಿಯಬಹುದು. ಆದರೆ ನಿಜವಾಗಿಯೂ ಬದುಕು ಎಲ್ಲಿ ಸೋರಿಹೋಗುತ್ತಿದೆ, ಗಣಿಗಾರಿಕೆಯ ದೆಸೆಯಿಂದ ನಾಶವಾಗುತ್ತಿರುವ ಭಾವಲೋಕ, ನಂಬಿಕೆಗಳು ಯಾವುವು ಎಂಬುದನ್ನು ಗ್ರಹಿಸಬೇಕಿದ್ದರೆ ಮೌನವೇ ಉತ್ತಮ ಮಾಧ್ಯಮ. ಆ ಊರಿನ ಮೌನ ಹಾಗೂ ಪ್ರಕೃತಿಯ ಜೀವಂತಿಕೆಯ ರೂಪಕಗಳನ್ನು ಸೆರೆಹಿಡಿಯುವ ಪ್ರಯತ್ನ ಮಾಡಿದ್ದೇನೆ’ ಎಂದು ಶಿಶಿರ್‌ ಹೇಳುತ್ತಾರೆ.

ಬಿಹಾರದ ದರ್ಭಂಗಾ ಮೂಲದವರಾದ ಶಿಶಿರ್‌, ಮೈಥಿಲಿ ಸಮುದಾಯಕ್ಕೆ ಸೇರಿದವರು. ಜಾರ್ಖಂಡ್‌ನ ಈ ಊರು ಬಹಳ ದೂರವೇನಿಲ್ಲ. 2016ರಲ್ಲಿ ಅವರು ಕ್ಯೂಬಾದಲ್ಲಿ ಇರಾನಿ ಚಿತ್ರ ನಿರ್ದೇಶಕ ಅಬ್ಬಾಸ್‌ ಕಿರುಸ್ತೋಮಿ ಅವರು ನಡೆಸಿದ ಒಂದು ಸಿನಿಮಾ ಕಾರ್ಯಾಗಾರಕ್ಕೆ ತೆರಳಿದ್ದರು. ಅಲ್ಲಿಯೇ ‘ಥಿಯಾಮೋ’ ಎಂಬ ಸ್ಪಾನಿಷ್‌ ಚಿತ್ರವೊಂದನ್ನು ನಿರ್ದೇಶಿಸಿದ್ದರು. ಬದುಕನ್ನು ಅರ್ಥ ಮಾಡಿಕೊಳ್ಳಲು ಭಾಷೆಯು ಗೊತ್ತಿರಲೇಬೇಕೆಂದೇನಿಲ್ಲ ಎನ್ನುವ ಅವರ ಥಿಯರಿ ಕೇಳಿ ಅಬ್ಬಾಸ್‌ ಕೂಡ ಅಚ್ಚರಿಪಟ್ಟಿದ್ದರಂತೆ. ಇದೀಗ ಶಿಶಿರ್‌ ತಮ್ಮೂರಿಗೆ ಮರಳಿ, ಮೈಥೇಯಿ ಭಾಷೆಯಲ್ಲಿ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ‘ಗೊತ್ತಿರುವ ಭಾಷೆಯನ್ನೂ ಅರಿಯುವ ಅವಕಾಶವಿದು’ ಎಂದು ನಕ್ಕರು.

ಶಿಶಿರ್‌ ಝಾ ಚಿತ್ರ: ನಿಹಾಲ್‌ ಪ್ರಭು ದೇಸಾಯಿ
ಟಾರ್‌ಟಾಯಿಸ್‌ ಅಂಡರ್‌ದ ಅರ್ಥ್‌– ಚಿತ್ರದ ದೃಶ್ಯ
ಟಾರ್‌ಟಾಯಿಸ್‌ ಅಂಡರ್‌ದ ಅರ್ಥ್‌– ಚಿತ್ರದ ಪೋಸ್ಟರ್‌
ಟಾರ್‌ಟಾಯಿಸ್‌ ಅಂಡರ್‌ದ ಅರ್ಥ್‌– ಚಿತ್ರದ ದೃಶ್ಯ
ಟಾರ್‌ಟಾಯಿಸ್‌ ಅಂಡರ್‌ದ ಅರ್ಥ್‌– ಚಿತ್ರದ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.