ನಟಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭಗೊಂಡಿವೆ. ಚಿತ್ರದಲ್ಲಿ ರಾಜಕಾರಣಿ ಎಲ್. ಆರ್. ಶಿವರಾಮೇಗೌಡ ಕೂಡ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಡಿತರ ವ್ಯವಸ್ಥೆಯ ಸುತ್ತ ನಡೆಯುವಂಥ ಕಥಾಹಂದರದ ಚಿತ್ರಕ್ಕೆ ಸಾತ್ವಿಕ್ ಪವನ್ ಕುಮಾರ್ ನಿರ್ದೇಶನವಿದೆ.
‘ನಾನು ಸುಮಾರು ನಾಲ್ಕು ದಶಕಗಳಿಂದ ರಾಜಕಾರಣದಲ್ಲಿದ್ದೇನೆ. ಜನಪ್ರತಿನಿಧಿಯಾಗಿ ಆಯ್ಕೆಯಾಗಿ ಬಂದರೂ, ಮಂತ್ರಿಯಾಗುವ ಅದೃಷ್ಟ ನನಗೆ ಸಿಗಲಿಲ್ಲ ಎಂಬ ಬೇಸರವಿದೆ. ಆದರೆ ಈ ಸಿನಿಮಾದಲ್ಲಿ ಬರೀ ಮಂತ್ರಿಯಲ್ಲ, ರಾಜ್ಯದ ಮುಖ್ಯಮಂತ್ರಿಯಾಗಿಯೇ ಕಾಣಿಸಿಕೊಂಡಿದ್ದೇನೆ. ಸಿನಿಮಾರಂಗದ ಜೊತೆಗೆ ಮೊದಲಿನಿಂದಲೂ ನಂಟಿದ್ದರೂ, ಯಾವತ್ತೂ ಅಭಿನಯಿಸಿರಲಿಲ್ಲ. ಅಭಿನಯ ನನಗೊಂದು ಹೊಸ ಅನುಭವ ಕೊಟ್ಟಿದೆ. ಇಂದಿನ ಪಡಿತರ ವ್ಯವಸ್ಥೆ ಪರಿಸ್ಥಿತಿಯನ್ನು ಬಿಂಬಿಸುವ ಸಿನಿಮಾವಾಗಿದ್ದು, ಎಲ್ಲರಿಗೂ ಇಷ್ಟವಾಗುತ್ತದೆ’ ಎಂದರು ಎಲ್. ಆರ್. ಶಿವರಾಮೇಗೌಡ.
ನಟಿ ರಾಗಿಣಿ ದ್ವಿವೇದಿ ಪಾರ್ವತಿ ಎಂಬ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನನ್ನ ಸಿನಿಮಾ ಜೀವನದಲ್ಲಿ ಇಲ್ಲಿಯವರೆಗೂ ಮಾಡಿರದ ಅಪರೂಪದ ಪಾತ್ರ ಈ ಸಿನಿಮಾದಲ್ಲಿದೆ. ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಏನೇನು ವ್ಯವಹಾರಗಳು, ಅವ್ಯವಹಾರಗಳು ನಡೆಯುತ್ತದೆ ಎಂಬುದನ್ನು ಸಮಾಜಕ್ಕೆ ತೋರಿಸುವಂಥ ದಿಟ್ಟ ಮಹಿಳೆಯ ಪಾತ್ರ ಈ ಸಿನಿಮಾದಲ್ಲಿದೆ. ನನಗೆ ಗೊತ್ತಿರುವಂತೆ, ಕನ್ನಡ ಚಿತ್ರರಂಗದಲ್ಲಿ ಇಂಥ ಸಿನಿಮಾ ಇಲ್ಲಿಯವರೆಗೂ ಬಂದಿಲ್ಲ’ ಎಂದರು ರಾಗಿಣಿ.
ಕುಮಾರ್ ಬಂಗಾರಪ್ಪ, ದೊಡ್ಡಣ್ಣ ಮುಂತಾದವರು ಚಿತ್ರದಲ್ಲಿದ್ದಾರೆ. ಜಯಶಂಕರ ಟಾಕೀಸ್ ಬ್ಯಾನರ್‌ನಲ್ಲಿ ತೇಜು ಮೂರ್ತಿ ಮತ್ತು ಪದ್ಮಾವತಿ ಚಂದ್ರಶೇಖರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅನಂತ್ ಆರ್ಯನ್ ಸಂಗೀತವಿದೆ. ಬಿ. ರಾಮಮೂರ್ತಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯಿರುವ ಚಿತ್ರಕ್ಕೆ ನಿರ್ದೇಶಕರೇ ಛಾಯಾಚಿತ್ರಗ್ರಹಣ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.